ಪ್ರಸಾದ ಸೇವನೆ: 150 ದಾಟಿದ ಅಸ್ವಸ್ಥರ ಸಂಖ್ಯೆ

| Published : Nov 21 2023, 12:45 AM IST

ಪ್ರಸಾದ ಸೇವನೆ: 150 ದಾಟಿದ ಅಸ್ವಸ್ಥರ ಸಂಖ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ನಗರದ ಹಜರತ್ ಪೀರನ್ ಷಾ ವಲಿ ದರ್ಗಾದ 134ನೇ ವರ್ಷದ ಉರುಸ್ ಆಚರಣೆ ವೇಳೆ ಪ್ರಸಾದ ಸೇವಿಸಿ ಅಸ್ವಸ್ಥಗೊಂಡ ಭಕ್ತರ ಸಂಖ್ಯೆ 150ರ ಗಡಿ ದಾಟಿದ್ದು, ಎಲ್ಲರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.

ರಾಮನಗರ: ನಗರದ ಹಜರತ್ ಪೀರನ್ ಷಾ ವಲಿ ದರ್ಗಾದ 134ನೇ ವರ್ಷದ ಉರುಸ್ ಆಚರಣೆ ವೇಳೆ ಪ್ರಸಾದ ಸೇವಿಸಿ

ಅಸ್ವಸ್ಥಗೊಂಡ ಭಕ್ತರ ಸಂಖ್ಯೆ 150ರ ಗಡಿ ದಾಟಿದ್ದು, ಎಲ್ಲರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ 139 ಜನರ ಪೈಕಿ 89 ಮಂದಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿದರೆ, 50 ಮಂದಿಗೆ ಚಿಕಿತ್ಸೆ ಮುಂದುವರಿದಿದೆ. 17 ಮಕ್ಕಳ ಮೇಲೆ ವೈದ್ಯರು ನಿಗಾ ವಹಿಸಿದ್ದಾರೆ. ಉಳಿದವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ದರ್ಗಾದಲ್ಲಿ ಭಾನುವಾರ ಬೆಳಗಿನ ಪೂಜಾ ಕಾರ್ಯ ನೆರವೇರಿದ ಬಳಿಕ ಮಕ್ಕಳು, ಮಹಿಳೆಯರು, ಹಿರಿಯರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು. ಈ ವೇಳೆ ದರ್ಗಾದಲ್ಲಿ ಪ್ರಸಾದದ ರೂಪದಲ್ಲಿ ನೀಡಿದ ಮಲಿದಾವನ್ನು 1 ಸಾವಿರಕ್ಕೂ ಹೆಚ್ಚು ಜನರು ಸೇವಿಸಿದ್ದರು.

ಇದನ್ನು ಸೇವಿಸಿದವರ ಪೈಕಿ 70ಕ್ಕೂ ಹೆಚ್ಚು ಮಂದಿಗೆ ಮನೆಯಲ್ಲಿ ವಾಂತಿ, ಬೇಧಿ, ಹೊಟ್ಟೆ ನೋವಿನಿಂದ ಬಳಲಿ ಅಸ್ವಸ್ಥಗೊಂಡಿದ್ದರು. ತಕ್ಷಣ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ನರ್ಸಿಂಗ್ ಹೋಮ್ ಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಶಾಸಕ ಇಕ್ಬಾಲ್ ಹುಸೇನ್, ನಗರಸಭೆ ಅಧ್ಯಕ್ಷೆ ವಿಜಯಾಕುಮಾರಿ, ಉಪಾಧ್ಯಕ್ಷ ಸೋಮಶೇಖರ್ (ಮಣಿ) ಆಯುಕ್ತ ನಾಗೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸಾ ಕ್ರಮ ವೀಕ್ಷಿಸಿದರು. ಪ್ರಸಾದದ ರೂಪದಲ್ಲಿ ನೀಡಲಾದ ಮಲಿದಾದ ಸ್ಯಾಂಪಲ್‌ ಅನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪರೀಕ್ಷೆಗೆ ಕಳುಹಿಸಲಾಗಿದೆ.

ಪ್ರಸಾದ ಸೇವಿಸಿ ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಬಹುತೇಕರು ಚೇತರಿಸಿಕೊಂಡು ಬಿಡುಗಡೆ ಹೊಂದಿದ್ದಾರೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಮಕ್ಕಳಿಗೆ ತಡವಾಗಿ ವ್ಯತಿರಿಕ್ತ ಪರಿಣಾಮ ಬೀರುವ ಕಾರಣ ಅವರ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ಪದ್ಮಾ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.20ಕೆಆರ್ ಎಂಎನ್ 4.ಜೆಪಿಜಿ

ದರ್ಗಾದಲ್ಲಿ ಪ್ರಸಾದ ಸೇವಿಸಿ ಅಸ್ವಸ್ಥಗೊಂಡ ಜಿಲ್ಲಾಸ್ಪತ್ರೆಗೆ ದಾಖಲಾದವರನ್ನು ಭೇಟಿಯಾಗಿ ಶಾಸಕ ಇಕ್ಬಾಲ್ ಹುಸೇನ್ ಆರೋಗ್ಯ ವಿಚಾರಿಸಿದರು.