ಆಟಿ ಅಮಾವಾಸ್ಯೆಗೆ ಹಾಲೆ ಮರದ ಔಷಧಿ ಸೇವನೆ

| Published : Aug 05 2024, 12:31 AM IST

ಆಟಿ ಅಮಾವಾಸ್ಯೆಗೆ ಹಾಲೆ ಮರದ ಔಷಧಿ ಸೇವನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರು, ಆಷಾಡಮಾಸದ ಅಮಾವಾಸೈ (ಆಟಿ) ಅಂಗವಾಗಿ ಹೋಬಳಿ ವಿವಿಧೆಡೆ ಜನರು ರೋಗನಿರೋಧಕ ಶಕ್ತಿ ಹೊಂದಿದ ಮದ್ದಾಲೆ ಮರ (ಹಾಲೆ ಮರ, ಸಪ್ತವರ್ಣ ಮರ)ದ ತೊಗಟೆ ಔಷಧಿ (ಕಷಾಯ)ಯನ್ನು ಭಾನುವಾರ ಮುಂಜಾನೆ ಸೇವಿಸಿದರು.

ಹಿಂದಿನಿಂದಲೂ ಮರದ ತೊಗಟೆ ಕೆತ್ತಿ ಅದರ ಕಷಾಯ ಕುಡಿಯುವ ಪದ್ಧತಿ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಆಷಾಡಮಾಸದ ಅಮಾವಾಸೈ (ಆಟಿ) ಅಂಗವಾಗಿ ಹೋಬಳಿ ವಿವಿಧೆಡೆ ಜನರು ರೋಗನಿರೋಧಕ ಶಕ್ತಿ ಹೊಂದಿದ ಮದ್ದಾಲೆ ಮರ (ಹಾಲೆ ಮರ, ಸಪ್ತವರ್ಣ ಮರ)ದ ತೊಗಟೆ ಔಷಧಿ (ಕಷಾಯ)ಯನ್ನು ಭಾನುವಾರ ಮುಂಜಾನೆ ಸೇವಿಸಿದರು.ಮದ್ದಾಲೆ (ಹಾಲೆ) ಮರದ ತೊಗಟೆಯನ್ನು ಕೆತ್ತಿ ಈ ಹಿಂದಿನ ಕಾಲದಿಂದಲೂ ಕಷಾಯ ತಯಾರಿಸಿ ಕುಡಿಯುವ ಪದ್ಧತಿ ಯಿದ್ದರೂ ಸಹ ಆಷಾಡದ ಅಮಾವಾಸ್ಯೆ ದಿನ ಇದನ್ನು ಉಪಯೋಗಿಸುವುದರಿಂದ ಹಲವು ರೋಗ ನಿವಾರಣೆಯಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬುದು ಹಿಂದಿನಿಂದಲೂ ನಡೆದುಕೊಂಡು ಬಂದ ನಂಬಿಕೆ.ಅಮಾವಾಸ್ಯೆ ದಿನ ಸೂರ್ಯೋದಯಕ್ಕೂ ಮುನ್ನ ಬ್ರಾಹ್ಮೀ ಮೂಹೂರ್ತದಲ್ಲಿ, ಸೂರ್ಯೋದಯಕ್ಕೆ ಅಭಿಮುಖವಾಗಿ ಹೋಗಿ ಮದ್ದಾಲೆ ಮರದ ತೊಗಟೆಯನ್ನು ಕಲ್ಲಿನಿಂದ ಕೆತ್ತಿ ತಂದು ಮನೆಯಲ್ಲಿ ಔಷಧಿ ತಯಾರಿಸಬೇಕು ಎಂಬ ಬಗ್ಗೆ ಹಲವು

ಮದ್ದಾಲೆ ಮರದಲ್ಲಿ ಏಳು ಎಲೆಗಳು ಇರುವ ಕಾರಣ ಸಂಸ್ಕೃತದಲ್ಲಿ ಸಪ್ತವರ್ಣ (ಸಪ್ತಪರ್ಣ) ಎನ್ನುತ್ತಾರೆ. ಮದ್ದಾಲೆ ಮರದಲ್ಲಿ ಕಾಯಿಲೆ ನಿವಾರಿಸುವ ಗುಣ, ವೈರಾಣು, ಕ್ಯಾನ್ಸರ್ ನಿರೋಧಕ ಮತ್ತು ಕ್ಯಾನ್ಸರ್ ಗಡ್ಡೆ ಗಾತ್ರ ಕಡಿಮೆ ಮಾಡುವ ಗುಣ, ಯಕೃತ್ ರಕ್ಷಿಸುವ ಗುಣ, ಅತಿಸಾರ ನಿರೋಧಕ, ಜ್ವರ ಕಡಿಮೆ ಮಾಡುವ ಗುಣ ಹೊಂದಿದೆ.

ಆಟಿ ಅಮಾವಾಸೆ ಆಚರಣೆ ದೇಶಾದ್ಯಂತ ಇದ್ದರೂ ಸಹ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಾತ್ರ ಈ ರೀತಿ ಔಷಧಿ ಸ್ವೀಕರಿಸುವ ಮೂಲಕ ಆಟಿ ಆಚರಣೆ ಮಾಡುತ್ತಿರುವುದು ವಿಶೇಷ. ಮದ್ದಾಲೆ ಮರದ ತೊಗಟೆಯನ್ನು ಕೆತ್ತಿ ತಂದ ಬಳಿಕ ಅದನ್ನು ಜಜ್ಜಿ ಅದಕ್ಕೆ ಕೆಲವು ಔಷಧೀಯ ಮಸಾಲೆ ಪದಾರ್ಥಗಳನ್ನು ಸೇರಿಸಿ ರಸ ತೆಗೆಯುತ್ತಾರೆ. ಹೀಗೆ ತೆಗೆದ ರಸವನ್ನು ಓರ್ವ ವ್ಯಕ್ತಿ ೨೪ ಮಿಲೀ ಸೇವಿಸಬಹುದು. ಕುದಿಸಿ ಕಷಾಯ ಮಾಡಿದರೆ ೫೦ ಮಿಲಿ ಯಷ್ಟು ಸೇವನೆ ಮಾಡಬಹುದು.

ಪಟ್ಟಣದ ವಿವಿಧ ಪ್ರಮುಖ ಮನೆಗಳಲ್ಲಿ ಔಷಧಿ ವಿತರಿಸಲಾಯಿತು. ಮಾರಿಗುಡಿ ರಸ್ತೆ ಹಿರಿಯಣ್ಣ, ಶಾಂತಿನಗರದ ಶಿವಪ್ಪ, ಬಸ್‌ನಿಲ್ದಾಣದ ಅಂಗಡಿ ಮಾಲೀಕ ಶಿವಾನಂದ್ ನೂರಾರು ಜನರಿಗೆ ಔಷಧಿ ವಿತರಿಸಿ ಗಮನಸೆಳೆದರು.೦೪ಬಿಹೆಚ್‌ಆರ್ ೧:

ಬಾಳೆಹೊನ್ನೂರಿನಲ್ಲಿ ಆಟಿ ಅಮಾವಾಸ್ಯೆಯ ಅಂಗವಾಗಿ ಬಸ್‌ನಿಲ್ದಾಣದ ಅಂಗಡಿ ಮಾಲೀಕ ಶಿವಾನಂದ್ ಅವರು ನೀಡಿದ ಆಟಿ ಔಷಧಿ ಸ್ವೀಕರಿಸುತ್ತಿರುವ ಗ್ರಾಹಕ.