ಜಾತ್ರೆಯಲ್ಲಿ ಪ್ರಸಾದ ಸೇವನೆ: ಮತ್ತೆ 6 ಜನರಿಗೆ ಸಮಸ್ಯೆ

| Published : May 24 2024, 12:52 AM IST

ಜಾತ್ರೆಯಲ್ಲಿ ಪ್ರಸಾದ ಸೇವನೆ: ಮತ್ತೆ 6 ಜನರಿಗೆ ಸಮಸ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಬೀರೇಶ್ವರ ಜಾತ್ರೆ ಹಾಗೂ ಎಕ್ಕೇರಿ ಕರೆಮ್ಮಾ ದೇವಿಯ ಜಾತ್ರೆಯಲ್ಲಿ ಪ್ರಸಾದ ಸೇವನೆಯಿಂದ ಅಸ್ವಸ್ಥತಗೊಂಡಿರುವ ವ್ಯಕ್ತಿಗಳ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಗುರುವಾರ ಮತ್ತೆ 6 ಜನರಿಗೆ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಬೀರೇಶ್ವರ ಜಾತ್ರೆ ಹಾಗೂ ಎಕ್ಕೇರಿ ಕರೆಮ್ಮಾ ದೇವಿಯ ಜಾತ್ರೆಯಲ್ಲಿ ಪ್ರಸಾದ ಸೇವನೆಯಿಂದ ಅಸ್ವಸ್ಥತಗೊಂಡಿರುವ ವ್ಯಕ್ತಿಗಳ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಗುರುವಾರ ಮತ್ತೆ 6 ಜನರಿಗೆ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸವದತ್ತಿ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ 26 ಜನರು ದಾಖಲಾಗಿದ್ದರು. ಗುರುವಾರ ಮತ್ತೆ 6 ಸೇರಿದಂತೆ ಒಟ್ಟು 32 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸವದತ್ತಿ ಖಾಸಗಿ ನಾವದಗಿ ಆಸ್ಪತ್ರೆಯಲ್ಲಿ 3, ಹುಬ್ಬಳ್ಳಿ ಕಿಮ್ಸ್‌ನಲ್ಲಿ 8 ಜನ, ಧಾರವಾಡ ಎಸ್‌ಡಿಎಂನಲ್ಲಿ 3 ಹಾಗೂ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ 2 ಜನರಿಗೆ ಚಿಕಿತ್ಸೆ ಮುಂದುವರೆದಿದೆ. ಹೂಲಿಕಟ್ಟಿ ಗ್ರಾಮದಲ್ಲಿ 4 ಆಂಬ್ಯುಲೆನ್ಸ್‌ ಸಮೇತ 4 ವೈದ್ಯಾಧಿಕಾರಿ, 12 ಜನ ನರ್ಸ, ಆರ್‌ಬಿಎಸ್‌ಕೆ 3 ತಂಡಗಳ ವೈದ್ಯರು ಹಾಗೂ ಸಿಬ್ಬಂದಿ ಬಿಡು ಬಿಟ್ಟಿರುವ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ದಿನದ 24 ಗಂಟೆಗಳ ಕಾಲ ಗ್ರಾಮಸ್ಥರ ಆರೋಗ್ಯದ ಮೇಲೆ ನಿಗಾವಹಿಸಿದ್ದಾರೆ. ಯಾವುದೇ ವ್ಯಕ್ತಿಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದಲ್ಲಿ ಗ್ರಾಮದಲ್ಲಿ ತೆರೆಯಲಾಗಿರುವ ಕ್ಲಿನಿಕ್‌ಗೆ ಕರೆದುಕೊಂಡು ಬಂದು 169 ಜನರನ್ನು ತಪಾಸಣೆ ಮಾಡಲಾಗಿದೆ. ಆರೋಗ್ಯದಲ್ಲಿ ಏರುಪೇರಾದ ವ್ಯಕ್ತಿಗಳನ್ನು ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ಕರೆತಂದು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಎಸ್‌ಡಿಎಂ ಆಸ್ಪತ್ರೆಯಲ್ಲಿ ದಾಖಲಾಗಿರುವ ಹಿರಿಯ ವಯಸ್ಸಿನ ಇಬ್ಬರಲ್ಲಿ ಆರೋಗ್ಯದಲ್ಲಿ ಸಮಸ್ಯೆಯುಂಟಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.ಪ್ರಸಾದ ಹಾಗೂ ನೀರಿನ ಸೇವೆಯಿಂದ ಅಸ್ವಸ್ತಗೊಂಡಿರುವ ಜನರಲ್ಲಿ ಆತಂಕ ಮಣೆ ಮಾಡಿದ್ದರಿಂದ ಗುಣಮುಖರಾದರೂ ಆಸ್ಪತ್ರೆಯಿಂದ ಬಿಡುಗಡೆಗೆ ಹಿಂದೇಟು ಹಾಕುತ್ತಿದ್ದಾರೆ. ಆದರೆ ಅವರ ಆರೋಗ್ಯದಲ್ಲಿ ಯಾವುದೇ ರೀತಿಯ ಸಮಸ್ಯೆಯಾಗಿಲ್ಲ, ಸ್ಥಿರವಾಗಿದೆ. ಶುಕ್ರವಾರ ಗುಣಮುಖರಾಗಿರುವ 15 ರಿಂದ 16 ಜನರನ್ನು ಮನೆಗೆ ಕಳುಹಿಸಲಾಗುವುದು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಹೂಲಿಕಟ್ಟಿ ಗ್ರಾಮಸ್ಥರಿಗೆ ಕುಡಿಯಲು ಒಂದೇ ಕಡೆಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಗ್ರಾಮಸ್ಥರಲ್ಲಿ ಬಿಸಿಯೂಟ ಸೇವನೆ, ಕುದಿಸಿ ಆರಿಸಿ ನೀರು ಕುಡಿಯುವುದು, ಸ್ವಚ್ಛತೆ ಕುರಿತು ತಿಳುವಳಿಕೆ ಮೂಡಿಸಲಾಗುತ್ತಿದೆ. ಇನ್ನೂ ಆಸ್ಪತ್ರೆಯಲ್ಲಿ ದಾಖಲಾಗಿರು ವ್ಯಕ್ತಿಗಳ ಕುರಿತು ಪ್ರತಿಗಂಟೆಗೊಮ್ಮೆ ಮಾಹಿತಿ ಪಡೆದುಕೊಳ್ಳಲಾಗುತ್ತಿದ್ದು, ಆರೋಗ್ಯದಲ್ಲಿ ಸ್ಥಿರವಾಗಿದೆ. ಅಲ್ಲದೇ ಹೂಲಿಕಟ್ಟಿ ಗ್ರಾಮದಲ್ಲಿ 4 ಆಂಬ್ಯುಲೆನ್ಸ್‌ ಸಮೇತ 4 ವೈದ್ಯಾಧಿಕಾರಿ, 12 ಜನ ನರ್ಸ್‌, ಆರ್‌ಬಿಎಸ್‌ಕೆ 3 ತಂಡಗಳ ವೈದ್ಯರು ಹಾಗೂ ಸಿಬ್ಬಂದಿ ಬಿಡು ಬಿಟ್ಟಿರುವ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ದಿನದ 24 ಗಂಟೆಗಳ ಕಾಲ ಗ್ರಾಮಸ್ಥರ ಆರೋಗ್ಯದ ಮೇಲೆ ನಿಗಾವಹಿಸಿದ್ದಾರೆ.

-ಡಾ. ಮಹೇಶ ಕೋಣಿ,

ಜಿಲ್ಲಾ ಆರೋಗ್ಯಾಧಿಕಾರಿ ಬೆಳಗಾವಿ.