ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕಲುಷಿತ ನೀರು ಸೇವಿಸಿ ವೃದ್ಧೆ ಸಾವನ್ನಪ್ಪಿ, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಹಿನ್ನೆಲೆಯಲ್ಲಿ ತಾಲೂಕಿನ ಮಾರೇನಹಳ್ಳಿಯ ಮನೆ ಮನೆಗೆ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ ನೀಡಿ ಜನರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು.ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮ ಸಂಚಾರ ನಡೆಸಿದ ಡೀಸಿ, ಮನೆಮನೆಗಳಲ್ಲಿ ಜನರ ಆರೋಗ್ಯ ವಿಚಾರಿಸಿದರು.
ಭಾರತಿಪುರ ಕ್ರಾಸ್ ಗ್ರಾಪಂ ವ್ಯಾಪ್ತಿಯ ಮಾರೇನಹಳ್ಳಿಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಕಲುಷಿತ ನೀರು ಸೇವಿಸಿ ತೀವ್ರ ವಾಂತಿ ಭೇದಿಯಿಂದ ಇಬ್ಬರು ವಯೋವೃದ್ಧರು ಮೃತಪಟ್ಟಿದ್ದರು. 10ಕ್ಕೂ ಹೆಚ್ಚು ಮಂದಿ ಹಾಸನ - ಚನ್ನರಾಯಪಟ್ಟಣ - ಶ್ರವಣಬೆಳಗೊಳ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ನಂತರ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದು, ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿರುವ ಸುದ್ದಿ ಇಂದಿನ ‘ಕನ್ನಡಪ್ರಭ’ ದಿನಪತ್ರಿಕೆಯಲ್ಲಿ ವರದಿಯಾಗಿತ್ತು. ಪತ್ರಿಕೆಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆಯೇ ಗ್ರಾಮಕ್ಕೆ ಡೀಸಿ ಡಾ.ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಆಗಮಿಸಿ ಪರಿಶೀಲನೆ ನಡೆಸಿತು.
ಈ ವೇಳೆ ಮಾತನಾಡಿದ ಡೀಸಿ ಡಾ.ಕುಮಾರ್, ಗ್ರಾಮದಲ್ಲಿ ಕಳೆದ ಆರೇಳು ದಿನಗಳ ಹಿಂದೆ 17 ಜನರಲ್ಲಿ ತೀವ್ರ ವಾಂತಿಭೇದಿಯಿಂದ ಅನಾರೋಗ್ಯಕ್ಕೆ ಸಿಲುಕಿದ್ದಾರೆ ಎಂದು ವರದಿಯಾಗಿದೆ. ವಾಂತಿ ಬೇಧಿಯಿಂದ ಬಳಲುತ್ತಿರುವವರಿಗೆ ಜಿಲ್ಲಾ ಮತ್ತು ತಾಲೂಕು ಆರೋಗ್ಯ ಇಲಾಖೆ ಪ್ರತಿನಿತ್ಯ ಗುಣಮಟ್ಟದ ಚಿಕಿತ್ಸೆ ಮೂಲಕ ರೋಗಿಗಳ ಸಂಪರ್ಕದಲ್ಲಿದ್ದು, ಅದರಲ್ಲಿ 12 ಮಂದಿ ಗುಣಮುಖರಾಗಿದಾರೆ. ಉಳಿದ ನಾಲ್ಕು ಮಂದಿ ಮಾತ್ರ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.ಗ್ರಾಮಕ್ಕೆ ಬರುವ ನೀರನ್ನು ಎರಡು ಬಾರಿ ಪರಿಶೀಲನೆಗೆ ಒಳಪಡಿಸಿದ ನಂತರವೂ ವರದಿಯಲ್ಲಿ ಕುಡಿಯುವುದಕ್ಕೆ ಯೋಗ್ಯವಾದ ಶುದ್ಧ ನೀರು ಎಂದೂ ವರದಿ ಬಂದಿದೆ. ಆದರೆ, ಕೆಲವು ಮನೆಗಳಲ್ಲಿ ಖಾಸಗಿ ಕೊಳವೆ ಬಾವಿಗಳಿದ್ದು ಆ ನೀರುಗಳನ್ನು ಪರಿಶೀಲನೆಗೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು.
ಮಾರೇನಹಳ್ಳಿ ಜವರಮ್ಮ ಮತ್ತು ಕಾಳಮ್ಮ ವಯೋ ಸಹಜನದಿಂದ ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದೆ. ಇವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಗ್ರಾಮದ ಜನರು ಭಯಪಡುವ ಅಗತ್ಯವಿಲ್ಲ ಎಂದರು.ಭಾರತೀಪುರ ಕ್ರಾಸ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಹರ್ಷವರ್ಧಿನಿ ಜೊತೆಗೆ ತಜ್ಞ ವೈದ್ಯರ ತಂಡ ಗ್ರಾಮದಲ್ಲಿ ಬೀಡುಬಿಟ್ಟಿದೆ. ಗ್ರಾಮದ ಎಲ್ಲಾ ಜನರ ಆರೋಗ್ಯ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡುತ್ತಿದೆ. ಜಿಲ್ಲಾ ಹಾಗೂ ತಾಲೂಕು ಆಡಳಿತವು ನಿಮ್ಮ ಜೊತೆಗಿದೆ ಎಂದು ತಿಳಿಸಿದರು.
ವೈರಲ್ ಡಯೇರಿಯಾದಿಂದ ವಾಂತಿಭೇದಿ ಪ್ರಕರಣವು ಸಂಭವಿಸಿದೆ. ಯಾರೂ ಭಯ ಪಡಬೇಕಾಗಿಲ್ಲ. ಕುಡಿಯಲು ಬಿಸಿ ಮಾಡಿ ಕುದಿಸಿ ಆರಿಸಿದ ನೀರನ್ನೇ ಬಳಸಬೇಕು ಎಂದು ಸಲಹೆ ನೀಡಿದರು.ಜಿಪಂ ಸಿಇಒ ಶೇಕ್ ತನ್ವೀರ್ ಆಸಿಫ್, ಡಿಎಚ್ ಒ ಡಾ.ಮೋಹನ್, ತಹಸೀಲ್ದಾರ್ ಆದರ್ಶ, ತಾಲೂಕು ಆರೋಗ್ಯ ಅಧಿಕಾರಿ ಡಾ.ಅಜಿತ್, ಜಿಲ್ಲಾ ಪರಿವೀಕ್ಷಕ ಅಧಿಕಾರಿ ಡಾ. ಕುಮಾರ್, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಕಾರ್ಯಪಾಲಕ ಪ್ರಮೋದ್, ಸಹಾಯಕ ಕಾರ್ಯಪಾಲಕ ಅಭಿಯಂತರೆ ರಶ್ಮಿ, ಸಹಾಯಕ ಇಂಜಿನಿಯರ್ ಪ್ರವೀಣ್, ಪಿಡಿಒ ದಿನೇಶ್, ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರು ಇದ್ದರು.
;Resize=(128,128))
;Resize=(128,128))