ಇಲ್ಲಿನ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದ ಚರಂಡಿಯಲ್ಲಿ ಮಲೀನ ನೀರು ನಿಲ್ಲುತ್ತಿದ್ದು, ಇದು ವಿದ್ಯಾರ್ಥಿಗಳ ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಕೋರಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ವತಿಯಿಂದ ಉಪ್ಪಿನಂಗಡಿ ಗ್ರಾ.ಪಂ.ಗೆ ಮನವಿ ಮಾಡಲಾಯಿತು.
ಉಪ್ಪಿನಂಗಡಿ : ಇಲ್ಲಿನ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದ ಚರಂಡಿಯಲ್ಲಿ ಮಲೀನ ನೀರು ನಿಲ್ಲುತ್ತಿದ್ದು, ಇದು ವಿದ್ಯಾರ್ಥಿಗಳ ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಕೋರಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ವತಿಯಿಂದ ಉಪ್ಪಿನಂಗಡಿ ಗ್ರಾ.ಪಂ.ಗೆ ಮನವಿ ಮಾಡಲಾಯಿತು.
ಈ ಶಾಲೆಗೆ ೧೯೦ ವರ್ಷಗಳ ಶೈಕ್ಷಣಿಕ ಪರಂಪರೆಯಿದ್ದು, ನೂರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಶಾಲೆಯ ಕಟ್ಟಡದ ಹಿಂಭಾಗಕ್ಕೆ ತಾಗಿಕೊಂಡೇ ರಾಜಕಾಲುವೆಯೊಂದಿದ್ದು, ಇದರಲ್ಲಿ ಮಲಿನ ನೀರು ಶೇಖರಣೆಯಾಗಿದೆ. ಇದರಿಂದಾಗಿ ಪರಿಸರವೆಲ್ಲಾ ದುರ್ನಾತ ಬೀರುತ್ತಿದ್ದು, ಶಾಲೆಯೊಳಗೆ ಕುಳಿತುಕೊಳ್ಳದ ಸ್ಥಿತಿ ಬಂದೊದಗಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡಲಾರಂಭಿಸಿದೆ. ಚರಂಡಿಯಲ್ಲಿ ನೀರು ನಿಂತುಕೊಳ್ಳಲು ಕಾರಣವಾಗಿರುವ ತ್ಯಾಜ್ಯ ಸೇರಿದಂತೆ ಅಡೆತಡೆಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು.ಈ ಚರಂಡಿಗೆ ಬಾಕ್ಸ್ ಮೋರಿ ಅಳವಡಿಸಿ ಶಾಶ್ವತವಾಗಿ ಒಳಚರಂಡಿಯನ್ನಾಗಿ ಪರಿವರ್ತಿಸಬೇಕು. ಈ ನೀರನಲ್ಲಿ ಸಂತಾನೋತ್ಪತ್ತಿ ಮಾಡುತ್ತಿರುವ ಸೊಳ್ಳೆ ಸೇರಿದಂತೆ ಇನ್ನಿತರ ಕ್ರಿಮಿ ಕೀಟಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲಿನ ಸಮಸ್ಯೆಗೆ ತುರ್ತಾಗಿ ಶಾಶ್ವತ ಮುಕ್ತಿ ನೀಡುವ ಮೂಲಕ ಶಾಲಾ ಪರಿಸರದಲ್ಲಿ ಆರೋಗ್ಯಕರ ವಾತಾವರಣ ಕಲ್ಪಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ನಿಯೋಗದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಅಬ್ದುಲ್ ಮಜೀದ್ ರಾಮನಗರ, ಸದಸ್ಯರಾದ ಕಲಂದರ್ ಶಾಫಿ ನೆಕ್ಕಿಲಾಡಿ, ಕೆ.ಪಿ. ಬಶೀರ್ ನಿರ್ಮಾ, ಖೈರುನ್ನಿಸಾ ಐಡಿಯಲ್, ಉಮೇಶ್ ಗೌಡ, ಮುಸ್ತಾಫ ನೆಕ್ಕಿಲಾಡಿ, ತಸ್ಲೀಮ, ರಝೀನಾ ಮಠ, ನೆಬಿಸ, ನೋಮಿತಾ, ಅಕ್ಷತಾ ಕೊಳಕ್ಕೆ, ಅನಿತಾ, ರಾಘವೇಂದ್ರ ನಟ್ಟಿಬೈಲ್ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.