ಕೆಲ ದಿನಗಳ ಹಿಂದೆ ಕಲುಷಿತ ನೀರು ಸೇವಿಸಿ ನೂರಾರು ಜನ ಅಸ್ವಸ್ಥಗೊಂಡಿದ್ದ ಗುಡಿಸಾಗರ ಗ್ರಾಪಂ ವ್ಯಾಪ್ತಿಯಲ್ಲಿ ಮತ್ತೇ ಅದೇ ರೀತಿಯ ಘಟನೆ ಮರುಕಳಿಸುವ ಆತಂಕ ಎದುರಾಗಿದೆ.
ಫಕೃದ್ದೀನ್ ಎಂ.ಎನ್.
ನವಲಗುಂದ: ಕೆಲ ದಿನಗಳ ಹಿಂದೆ ಕಲುಷಿತ ನೀರು ಸೇವಿಸಿ ನೂರಾರು ಜನ ಅಸ್ವಸ್ಥಗೊಂಡಿದ್ದ ಗುಡಿಸಾಗರ ಗ್ರಾಪಂ ವ್ಯಾಪ್ತಿಯಲ್ಲಿ ಮತ್ತೇ ಅದೇ ರೀತಿಯ ಘಟನೆ ಮರುಕಳಿಸುವ ಆತಂಕ ಎದುರಾಗಿದೆ. ಗುಡಿಸಾಗರ ಗ್ರಾಪಂ ವ್ಯಾಪ್ತಿಯ ನಾಗನೂರಿನಲ್ಲಿ ಸದ್ಯ ಗ್ರಾಮಸ್ಥರು ರಾಡಿ ನೀರು ಕುಡಿಯುತ್ತಿದ್ದು, ಶುದ್ಧ ನೀರು ಪೂರೈಸಲು ಸೂಚನೆ ನೀಡಿದ ಶಾಸಕರ ಮಾತಿಗೇ ಈ ಗ್ರಾಮದಲ್ಲಿ ಬೆಲೆ ಇಲ್ಲದಂತಾಗಿದೆ.ನಾಗನೂರಿನಲ್ಲಿ ಕಳೆದ 15 ದಿನಗಳಿಂದ ಗ್ರಾಮದ ಜನತೆಗೆ ಕೆರೆಯಿಂದ ಪೂರೈಸಲಾಗುತ್ತಿರುವ ನೀರಿನ ಪಂಪ್ ರಿಪೇರಿಯಿಂದಾಗಿ ರಾಡಿ ನೀರನ್ನೇ ಹೊತ್ತು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೋಟಾರ್ ಕೆಟ್ಟಿದ್ದರಿಂದ ನಲ್ಲಿಯ ನೀರು ಬಂದ್ ಆದ ಪರಿಣಾಮ ಗ್ರಾಮಸ್ಥರು ತಳ್ಳುವ, ಎತ್ತಿನ ಗಾಡಿ ಹಾಗೂ ಹೆಗಲ ಮೇಲೆ ಕೊಡಗಳನ್ನು ಹೊತ್ತು ಮನೆಗೆ ನೀರು ತರುತ್ತಿದ್ದಾರೆ. ಆದರೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯ ಧೋರಣೆಯಿಂದಾಗಿ 15 ದಿನಗಳಿಂದ ಮೋಟಾರ್ ರಿಪೇರಿಯಾಗಿಲ್ಲ. ಜತೆಗೆ ಕಾಲುವೆ ನೀರು ಕೆರೆಗೆ ಹರಿದು ಬರುತ್ತಿರುವುದರಿಂದ ನೀರು ರಾಡಿ ಆಗಿದ್ದು, ಅದೇ ನೀರನ್ನು ಗ್ರಾಮಸ್ಥರು ಕುಡಿಯುವಂತಾಗಿದೆ.ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಸ್ವತಃ ಶಾಸಕರೇ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ಜರುಗಿಸಲು ಕಟ್ಟಪಟ್ಟಣೆ ಮಾಡಿದ್ದರೂ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು ನಿರಂತರ ತಮ್ಮ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದ್ದು, ಶಾಸಕರ ಮಾತಿಗೂ ಕಿಮ್ಮತ್ತಿಲ್ಲದಂತಾಗಿದೆ.
ಇದೆ ಪಿಡಿಒ ಅಧಿಕಾರಾವಧಿಯಲ್ಲಿ ಕೆಲ ತಿಂಗಳ ಹಿಂದಷ್ಟೆ ಗುಡಿಸಾಗರ ಗ್ರಾಪಂ ವ್ಯಾಪ್ತಿಯ ಗುಡಿಸಾಗರ ಗ್ರಾಮದಲ್ಲಿನ ಕೆರೆಯಲ್ಲಿನ ಕಲುಷಿತಗೊಂಡ ನೀರು ಕುಡಿದು ಗ್ರಾಮದ ನೂರಾರು ಜನರು ಆಸ್ಪತ್ರೆ ಸೇರಿದ್ದರು. ಹೀಗಿರುವಾಗ ಇದೇ ಗ್ರಾಪಂ ವ್ಯಾಪ್ತಿಯ ನಾಗನೂರು ಗ್ರಾಮದ ಜನರು ರಾಡಿ, ಕಲುಷಿತ ನೀರು ಕುಡಿಯುವಂತಾಗಿದ್ದು ಮತ್ತೊಂದು ದುರಂತ ನಡೆಯುವ ಮುನ್ನವೇ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಶುದ್ಧ ನೀರು ಪೂರೈಸಲು ಮುಂದಾಗಬೇಕಿದೆ.ಕುಡಿಯುವ ನೀರಿನ ಪಂಪ್‌ಸೆಟ್ ರಿಪೇರಿ ಮಾಡಲು ಹಲವಾರು ಬಾರಿ ವಿನಂತಿಸಿದರೂ ಪ್ರಯೋಜನವಾಗಿಲ್ಲ. ಈ ಕೂಡಲೇ ಪಂಪ್‌ಸೆಟ್ ರಿಪೇರಿ ಆಗಬೇಕು. ಶುದ್ಧ ನೀರು ಸಿಗಬೇಕು. ಜನರ ಆರೋಗ್ಯ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಜನರು ರೊಚ್ಚಿಗೇಳುವ ಮುನ್ನವೇ ಅಧಿಕಾರಿಗಳು ಈ ಕೆಲಸ ಮಾಡಲೇಬೇಕು. ಇಲ್ಲದಿದ್ದರೆ ಗ್ರಾಮದ ಜನತೆ ಹೋರಾಟ ಮಾಡುವುದು ಅನಿವಾರ್ಯ ಎಂದು ಗ್ರಾಮಸ್ಥರಾದ ಶೌಕತ್ ಅಲಿ ಲಂಬೂನವರ ಎಚ್ಚರಿಸಿದ್ದಾರೆ.
ಗ್ರಾಮದಲ್ಲಿ ಕುಡಿಯುವ ನೀರಿನ ಕೆರೆಗೆ ಮಲಪ್ರಭಾ ಕಾಲುವೆಯಿಂದ ನೀರು ತುಂಬಿಸಲಾಗುತ್ತಿದೆ. ಗ್ರಾಮಸ್ಥರು ಕೆರೆಯ ನೀರನ್ನು ಕುಡಿಯುತ್ತಿದ್ದಾರೆ. ಪ್ರಸ್ತುತ ನಲ್ಲಿಗೆ ನೀರು ಪೂರೈಸುವ ಮೊಟಾರ್ ಕೆಟ್ಟಿದ್ದು, ಸದ್ಯದಲ್ಲೇ ರಿಪೇರಿ ಮಾಡಿಸಿ, ಶುದ್ಧ ನೀರು ಪೂರೈಕೆಗೆ ಕ್ರಮ ಜರುಗಿಸಲಾಗುವುದು ಎಂದು ಗುಡಿಸಾಗರ ಪಿಡಿಒ.ಎಸ್.ಎಂ. ಹೂಗಾರ ತಿಳಿಸಿದ್ದಾರೆ.