ಸಾರಾಂಶ
ಕನ್ನಡಪ್ರಭ ವಾರ್ತೆ ಗಂಗಾವತಿ
ಮುಂಬರುವ ದಿನಗಳಲ್ಲಿ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ಸೇರಿದಂತೆ ಎಲ್ಲ ವಸತಿ ನಿಲಯಗಳಿಗೆ ಸೋನಾ ಮಸೂರಿ ಅಕ್ಕಿ ಪೂರೈಸುವ ಕುರಿತು ಚರ್ಚೆ ನಡೆದಿದೆ ಎಂದು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಹಾಗೂ ಕ್ರೀಡಾ ಸಚಿವ ಬಿ. ನಾಗೇಂದ್ರ ಹೇಳಿದರು.ನಗರದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆನಂತರ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಅವರು, ಪತ್ರಕರ್ತರೊಂದಿಗೆ ಮಾತನಾಡಿದರು.ಇಲ್ಲಿಯ ವಸತಿ ನಿಲಯದ ಬಗ್ಗೆ ಅತೃಪ್ತಿ ಇದೆ. ನೀರಿನ ಅವ್ಯವಸ್ಥೆ ಇದ್ದು, ಇಲ್ಲಿಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮಕ್ಕಳಿಗೆ ಸರ್ಕಾರದ ಯೋಜನೆ ತಲುಪಬೇಕಾಗಿದೆ. ನೀರಿನ ವ್ಯವಸ್ಥೆ, ಕಂಪ್ಯೂಟರ್ ಮತ್ತು ವಿದ್ಯುತ್ ದೀಪಗಳು ಅವಶ್ಯವಾಗಿವೆ. ಆದರೆ ಇಲ್ಲಿಯ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ವಸತಿ ನಿಲಯ ನಿರ್ವಹಿಸುತ್ತಿಲ್ಲ. ಸರಿಯಾದ ರೀತಿಯಲ್ಲಿ ಮಕ್ಕಳು ಓಡಾಡಲು ರಸ್ತೆ ಇಲ್ಲ. ಮಳೆ ಬಂದರೆ ಕೆರೆಯಂತಾಗುತ್ತದೆ. ಆ ಕಾರಣ ನಮ್ಮ ಇಲಾಖೆಯಿಂದ ರಸ್ತೆ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದರು.
ವಾಲ್ಮೀಕಿ ಭವನ ಪೂರ್ಣಗೊಳಿಸಲು ಕ್ರಮ:ಬಹಳ ವರ್ಷದಿಂದ ನನೆಗುದಿಗೆ ಬಿದ್ದಿರುವ ಇಲ್ಲಿಯ ವಾಲ್ಮೀಕಿ ಭವನದ ಕಟ್ಟಡವನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ನಾಗೇಂದ್ರ ತಿಳಿಸಿದರು. ಈಗಾಗಲೇ ಇದಕ್ಕೆ ಇಲಾಖೆ ₹2.50 ಕೋಟಿ ನೀಡಿದೆ. ಆದರೂ ಪೂರ್ಣಗೊಂಡಿಲ್ಲ. ಈ ಕಾಮಗಾರಿಗೆ ಇನ್ನು ಎಷ್ಟು ಅನುದಾನ ಬೇಕಾಗುತ್ತದೆ ಎನ್ನುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ನೀಡಲಾಗುತ್ತದೆ ಎಂದರು.ವಾಲ್ಮೀಕಿ ಭವನ ಮತ್ತು ಎಸ್‌ಟಿ ಕಾಲನಿ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ ಎಂದು ತಿಳಿಸಿದ ಅವರು, ಈಗಾಗಲೇ ರಾಜ್ಯದಲ್ಲಿರುವ ವಾಲ್ಮೀಕಿ ಭವನ ಮತ್ತು ಎಸ್‌ಟಿ ಕಾಲನಿಗಳಿಗೆ ₹800 ಕೋಟಿ ಬೇಕಾಗಿದೆ. ಕೇವಲ ₹280 ಕೋಟಿ ಇರುವುದರಿಂದ ಕಾಮಗಾರಿ ಕೈಗೆತ್ತಿಕೊಳ್ಳಲು ಆಗುತ್ತಿಲ್ಲ. ಇದರ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸಲಾಗುತ್ತದೆ ಎಂದರು.ಇದಕ್ಕಿಂತ ಪೂರ್ವದಲ್ಲಿ ಸಚಿವರು ವಿದ್ಯಾರ್ಥಿಗಳ ಜತೆ ಚರ್ಚಿಸಿದರು. ವಸತಿ ನಿಲಯದ ಸಮಸ್ಯೆ ಆಲಿಸಿದರು. ಇಲಾಖೆಯ ಡಿಡಿ ರಾಜು, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗ್ಯಾನನಗೌಡ, ವ್ಯವಸ್ಥಾಪಕ ರಮೇಶ, ವಾಲ್ಮೀಕಿ ಸಮಾಜದ ಮುಖಂಡ ಬಳ್ಳಾರಿ ರಾಮಣ್ಣ ನಾಯಕ, ನಗರಸಭಾ ಸದಸ್ಯ ರಮೇಶ ಚೌಡ್ಕಿ, ಅರ್ಜುನ್ ನಾಯಕ, ವಿರೂಪಾಕ್ಷ ನಾಯಕ, ತಹಸೀಲ್ದಾರ್ ಮಂಜುನಾಥಸ್ವಾಮಿ, ಪೌರಾಯುಕ್ತ ವಿರೂಪಾಕ್ಷಮೂರ್ತಿ ಉಪಸ್ಥಿತರಿದ್ದರು.