ಹೊಸ ಮಾಧ್ಯಮ ಕೋರ್ಸ್‌ ಪರಿಚಯಿಸಲು ಚಿಂತನೆ: ನಿರಂಜನ

| Published : Jul 23 2024, 01:46 AM IST

ಸಾರಾಂಶ

ಬದಲಾದ ಕಾಲಘಟ್ಟದಲ್ಲಿ ಇಂದು ವಿದ್ಯಾರ್ಥಿಗಳಲ್ಲಿ ಮಾಧ್ಯಮ ಸಾಕ್ಷರತೆ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಆದ್ದರಿಂದ ಮಾಧ್ಯಮ ಕುರಿತ ಹಲವು ಹೊಸ ಕೋರ್ಸ್‌ಗಳನ್ನು ಪರಿಚಯಿಸಲು ಚಿಂತನೆ ನಡೆಸಲಾಗುವುದು ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ಪ್ರೊ‌.ಎಸ್.ಆರ್.ನಿರಂಜನ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬದಲಾದ ಕಾಲಘಟ್ಟದಲ್ಲಿ ಇಂದು ವಿದ್ಯಾರ್ಥಿಗಳಲ್ಲಿ ಮಾಧ್ಯಮ ಸಾಕ್ಷರತೆ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಆದ್ದರಿಂದ ಮಾಧ್ಯಮ ಕುರಿತ ಹಲವು ಹೊಸ ಕೋರ್ಸ್‌ಗಳನ್ನು ಪರಿಚಯಿಸಲು ಚಿಂತನೆ ನಡೆಸಲಾಗುವುದು ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ಪ್ರೊ‌.ಎಸ್.ಆರ್.ನಿರಂಜನ ಭರವಸೆ ನೀಡಿದರು.

ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ ಸುವರ್ಣ ಮಹೋತ್ಸವದ ಅಂಗವಾಗಿ ಜ್ಞಾನಭಾರತಿಯ ಪ್ರೊ.ವೆಂಕಟಗಿರಿಗೌಡ ಸಭಾಂಗಣದಲ್ಲಿ ಆಯೋಜಿಸಿದ್ದ ‘ಭಾರತೀಯ ಮಾಧ್ಯಮ ಉದ್ಯಮದ ರೂಪಾಂತರ’ ರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಮಾಧ್ಯಮವು ಬಹುಮುಖ್ಯ ಅಂಗವಾಗಿದ್ದು, ಸಮಾಜದ ಗಟ್ಟಿಧ್ವನಿಯಾಗಿ, ಕನ್ನಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ. 1970-1980 ರ ದಶಕದ ಬಳಿಕ‌ ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮಾಹಿತಿಗಷ್ಟೇ ಸೀಮಿತವಾಗಿದ್ದ ಮಾಧ್ಯಮ ಇಂದು ಬಹು ದೊಡ್ಡ ಉದ್ಯಮವಾಗಿ ಬೆಳೆದುನಿಂತಿದೆ. ಇಷ್ಟೆಲ್ಲಾ ಪ್ರಗತಿ ಸಾಧಿಸಿದ್ದರೂ ವೃತ್ತಿಪರರ ಕೊರತೆ ಕಾಣುತ್ತಿದೆ. ಆದ್ದರಿಂದ ಹೊಸ ಕೋರ್ಸ್‌ಗಳನ್ನು ಆರಂಭಿಸಲು ಚಿಂತನೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಮಾತನಾಡಿ, ಬೆಂಗಳೂರು ವಿಶ್ವವಿದ್ಯಾಲಯ ಸಂವಹನ ವಿಭಾಗವು ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆ ತಂದಿದೆ. ಭಾರತದಲ್ಲಿ ದೂರದರ್ಶನದ ಬೆಳವಣಿಗೆಗೆ ಬೆಂ‌‌ಗಳೂರು ವಿವಿಯ ಸಂವಹನ ವಿಭಾಗ ಪ್ರಮುಖ ಕಾರಣವಾಗಿದೆ. ದೇಶದಲ್ಲಿ ಪ್ರಥಮ ಬಾರಿಗೆ ದೂರದರ್ಶನ ಶಿಕ್ಷಣ ಆರಂಭಿಸಿದ ಕೀರ್ತಿಯನ್ನೂ ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿವಿ ಕುಲಸಚಿವ ಶೇಕ್ ಲತೀಫ್, ಮೌಲ್ಯಮಾಪನ ಕುಲಸಚಿವ ಪ್ರೊ.ಶ್ರೀನಿವಾಸ್ ಚೌಡಪ್ಪ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಡಾ। ಬಿ.ಶೈಲಶ್ರೀ ಉಪಸ್ಥಿತರಿದ್ದರು.

ಕೋರ್ಸ್‌ಗೆ ಪ್ರಸ್ತಾವನೆ ಸಲ್ಲಿಸಿ

ಪ್ರಜಾಪ್ರಭುತ್ವದ 4ನೇ ಅಂಗವಾಗಿರುವ ಮಾಧ್ಯಮದ ಪಾತ್ರ, ಶಕ್ತಿ, ಬಳಕೆ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಸಂವಹನ ವಿಭಾಗದ ವತಿಯಿಂದ ಹೊಸ ಕೋರ್ಸ್‌ಗೆ ಪ್ರಸ್ತಾವನೆ ಸಲ್ಲಿಸಿ. ಇದರ ಬಗ್ಗೆ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಚರ್ಚಿಸಿ ಅನುಷ್ಠಾನಕ್ಕೆ ಕ್ರಮ‌ ಕೈಗೊಳ್ಳುವುದಾಗಿ ನಿರಂಜನ ಭರವಸೆ ನೀಡಿದರು.ಕ್ಯಾಪ್ಷನ್‌.....

ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ ಸುವರ್ಣ ಮಹೋತ್ಸವದ ಅಂಗವಾಗಿ ಜ್ಞಾನಭಾರತಿಯಲ್ಲಿ ಆಯೋಜಿಸಿದ್ದ ಸಮ್ಮೇಳನವನ್ನು ಫೋಟೋ ಕ್ಲಿಕ್ಕಿಸುವ ಮೂಲಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ಪ್ರೊ‌.ಎಸ್.ಆರ್.ನಿರಂಜನ ಉದ್ಘಾಟಿಸಿದರು. ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ ಹಾಜರಿದ್ದರು.