ಸಂಪತ್ತನ್ನು ಸದ್ವಿನಿಯೋಗ ಮಾಡುವ ಸದ್ಭಾವನೆ ಶ್ರೀಮಂತ ವರ್ಗದಲ್ಲಿ ಮೂಡಿ ಬರಬೇಕು. ಆಗ ಮಾತ್ರ ಸಮಾಜದಲ್ಲಿ ಸಂತೃಪ್ತಿ ವಾತಾವರಣ ಕಾಣಬಹುದು ಎಂದು ತರಳಬಾಳು ಶಾಖಾ ಮಠದ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

- ಕುಂದೂರಲ್ಲಿ ಬಸವೇಶ್ವರ ಪುತ್ಥಳಿ ಅನಾವರಣಗೊಳಿಸಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ಆಶೀರ್ವಚನ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಸಂಪತ್ತನ್ನು ಸದ್ವಿನಿಯೋಗ ಮಾಡುವ ಸದ್ಭಾವನೆ ಶ್ರೀಮಂತ ವರ್ಗದಲ್ಲಿ ಮೂಡಿ ಬರಬೇಕು. ಆಗ ಮಾತ್ರ ಸಮಾಜದಲ್ಲಿ ಸಂತೃಪ್ತಿ ವಾತಾವರಣ ಕಾಣಬಹುದು ಎಂದು ತರಳಬಾಳು ಶಾಖಾ ಮಠದ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಕುಂದೂರು ಗ್ರಾಮದಲ್ಲಿ ಶ್ರೀ ಬಸವೇಶ್ವರ ಪುತ್ಥಳಿ ಸಮಿತಿ ಹಾಗೂ ಗ್ರಾಮಸ್ಥರಿಂದ ಸೋಮವಾರ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಜಗಜ್ಯೋತಿ ಬಸವೇಶ್ವರ ಕಂಚಿನ ಪುತ್ಥಳಿ ಅನಾವರಣಗೊಳಿಸಿ ನಂತರ ವೇದಿಕೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಯುವ ಸಮುದಾಯ ಕೇವಲ ಬಸವಣ್ಣ ಅಥವಾ ಮಹಾತ್ಮರ ಪುತ್ಥಳಿ ನಿರ್ಮಿಸಿ ಪ್ರತಿಷ್ಠಾಪಿಸಿದರೆ ಸಾಲದು. ಬದಲಿಗೆ ಅವರ ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅ‍ಳವಡಿಸಿಕೊಂಡು ಪರಿಪಾಲಿಸಬೇಕು. ಆಗ ಮಾತ್ರ ಬದುಕು ಸಾರ್ಥಕತೆ ಕಾಣುತ್ತದೆ, ಕ್ರಾಂತಿಯೋಗಿ ಬಸವಣ್ಣನವರ ಕಾಯಕ ನಿಷ್ಠೆ ಎಲ್ಲರೂ ಅಳವಡಿಸಿಕೊಂಡಲ್ಲಿ ದೇಶದಲ್ಲಿ ಬಡತನಕ್ಕೆ ಅವಕಾಶವೇ ಇರುವುದಿಲ್ಲ. ಜೀವನಕ್ಕೆ ವೃತ್ತಿ ಮುಖ್ಯವಲ್ಲ, ವೃತ್ತಿನಿಷ್ಠೆ, ಧರ್ಮಪಾಲನೆ ಮುಖ್ಯ ಎಂದು ಹೇಳಿದರು.

ಎನಗಿಂತ ಕಿರಿಯರಿಲ್ಲ ಎಂಬ ಬಸವಣ್ಣನವರ ವಾಣಿಯಲ್ಲಿ ವಿನಯತೆ ಎದ್ದು ಕಾಣುತ್ತದೆ. ಆದರೆ ಬಹುಪಾಲು ಜನ ಅಶ್ವರೂಢ ಬಸವಣ್ಣನವರ ಪುತ್ಥಳಿ ನಿರ್ಮಿಸಿ, ಪ್ರತಿಷ್ಠಾಪಿಸುತ್ತಾರೆ. ಇದರ ಬದಲಿಗೆ ಇಷ್ಟಲಿಂಗ ಪೂಜೆನಿರತ ಅಥವಾ ತಾಳೆಗರಿಯಲ್ಲಿ ವಚನ ರಚಿಸುತ್ತಿರುವ ಶೈಲಿಯ ಪುತ್ಥಳಿ ನಿರ್ಮಿಸಿದರೆ ಹೆಚ್ಚು ಅರ್ಥಪೂರ್ಣವಾಗುತ್ತದೆ. ಇದನ್ನು ಇನ್ನು ಮುಂದಾದರು ಜನ ಪರಿಪಾಲಿಸಬೇಕು ಎಂದು ತಿಳಿಸಿದರು.

ದೇವರು ಗುಡಿ ಗುಂಡಾರಗಳ ಬದಲಿಗೆ ನಮ್ಮ ಸಂಸ್ಖಾರ, ನಡವಳಿಕೆಗಳಲ್ಲಿ, ಹೃದಯದಲ್ಲಿ ನೆಲೆಸಿರಬೇಕು. ಇತ್ತೀಚಿನ ದಿನಗಳಲ್ಲಿ ದೇಶದ ಅತಿ ಶ್ರೀಮಂತ ದೇವಸ್ಥಾನಗಳಲ್ಲಿ ದೇವರ ಹುಂಡಿಯ ಹಣವನ್ನೇ ದುರುಪಯೋಗಪಡಿಸಿಕೊಂಡ ಘಟನೆಗಳನ್ನು ಮಾಧ್ಯಮಗಳ ಮೂಲಕ ನೋಡುತ್ತಿದ್ದೇವೆ. ಇದಕ್ಕೆ ಅಯೋಧ್ಯೆ ರಾಮಮಂದಿರದ ಘಟನೆ ಸ್ಪಷ್ಟ ಉದಾಹರಣೆಯಾಗಿದೆ ಎಂದರು.

ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಬಸವಣ್ಣನವರ ವಚನಗಳನ್ನು ಓದಿ, ಅರಿತುಕೊಂಡರೆ ಸಾಕು ಜೀವನ ಸಾರ್ಥಕವಾಗುತ್ತದೆ ಎಂದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಪುತ್ಥಳಿ, ದೇವಸ್ಥಾನಗಳನ್ನು ನಿರ್ಮಿಸಿದರೆ ಸಾಲದು. ಭವಿಷ್ಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.

ಸಾಧು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಎಚ್.ಎ. ಗದ್ದಿಗೇಶ್ ಅಧ್ಯಕ್ಷತೆ ವಹಿಸಿ, ಕುಂದೂರಿನಲ್ಲಿ ₹18 ಲಕ್ಷ ವೆಚ್ಚದ ಸುಂದರ ಕಂಚಿನ ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. ಸ್ವಾಮೀಜಿಯರ 76ನೇ ವರ್ಷದ ಸವಿನೆನಪಿಗಾಗಿ ಸಾಣೇಹಳ್ಳಿಯಲ್ಲಿ ₹3.5 ಕೋಟಿ ವೆಚ್ಚದಲ್ಲಿ ಗುರುಭವನ ನಿರ್ಮಿಸಲಾಗುವುದು ಎಂದು ಹೇಳಿದರು.

ದಾವಣಗೆರೆ ತಾ. ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ದಾವಣಗೆರೆ ಶಾಸಕ ಸಮರ್ಥ ಶಾಮನೂರು ಮಾತನಾಡಿದರು, ಸ್ವಾಭಿಮಾನಿ ಬಳಗದ ಜಿ.ಬಿ, ವಿನಯ್ ಕುಮಾರ್, ನ್ಯಾಮತಿ ತಾ. ಸಾಧು ಲಿಂಗಾಯತ ಸಮಾಜದ ಅಧ್ಯಕ್ಷ ಜಿ.ಶಿವಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ.ವಿಶ್ವನಾಥ, ಜಿ.ಪಂ. ಮಾಜಿ ಸದಸ್ಯ ಕೆ. ಗುರುಮೂರ್ತಿ, ಶಿಮುಲ್ ನಿರ್ದೇಶಕ ಹನುಮನಹಳ್ಳಿ ಬಸವರಾಜಪ್ಪ, ಕೆ.ಷಣ್ಮುಖಪ್ಪ, ಅನಿಲ್ ಎಚ್., ಆಂಜನೇಯ, ಸೋಮಶೇಖರಪ್ಪ, ಬಸವೇಶ್ವರ ಪುತ್ಥಳಿ ಸಮಿತಿ ಪದಾಧಿಕಾರಿಗಳು, ಗ್ರಾಮದ ಮುಖಂಡರು ಇದ್ದರು.

- - -

-20ಎಚ್.ಎಲ್,ಐ1: ಕುಂದೂರಲ್ಲಿ ಬಸವೇಶ್ವರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಡಾ, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು, ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಬಸವೇಶ್ವರ ಸಮಿತಿ, ಗ್ರಾಮ ಮುಖಂಡರು ಇದ್ದರು.