ಸಾರಾಂಶ
ಮದ್ದೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಿಂದುಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದರು.
ತಾಲೂಕಿನ ಗಡಿಭಾಗ ನಿಡಘಟ್ಟ ಬಳಿ ಮಂಡ್ಯ ಜಿಲ್ಲೆಗೆ ಪ್ರವೇಶಿಸದಂತೆ ತಡೆದ ಪೊಲೀಸರು, ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಬಜರಂಗಸೇನೆ ಹಾಗೂ ಶ್ರೀರಾಮಸೇನೆ ಕಾರ್ಯಕರ್ತರೊಂದಿಗೆ ಸೇರಿ ಧಿಕ್ಕಾರದ ಘೋಷಣೆ ಕೂಗಿದರು.ಈ ವೇಳೆ ಮಾತನಾಡಿದ ಪ್ರಮೋದ್ ಮುತಾಲಿಕ್ , ನಾನು ಗಲಭೆ ಪೀಡಿತ ನಾಗಮಂಗಲಕ್ಕೆ ತೆರಳುತ್ತಿರಲಿಲ್ಲ. ಬದಲಾಗಿ ಗಲಭೆಯಲ್ಲಿ ಬಂಧಿತರಾಗಿರುವ ಹಿಂದೂ ಕಾರ್ಯಕರ್ತರನ್ನು ಭೇಟಿಯಾಗಿ ಸಾಂತ್ವನ ಹೇಳಲು ಮಂಡ್ಯದ ಕಾರಾಗೃಹಕ್ಕೆ ತೆರಳುತ್ತಿದ್ದೆ ಎಂದರು.
ಮಂಡ್ಯ ಜಿಲ್ಲೆಗೆ ಪ್ರವೇಶ ನಿರಾಕರಿಸಲು ಕಾಂಗ್ರೆಸ್ ಸರ್ಕಾರವೇ ಕಾರಣ. ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಮಂಡ್ಯ ಜಿಲ್ಲೆಗೆ 15 ದಿನ ಪ್ರವೇಶ ಮಾಡದಂತೆ ಪ್ರವೇಶ ನಿರ್ಬಂಧಿಸಿ ಜಿಲ್ಲಾ ಆಡಳಿತ ಆದೇಶ ನೀಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ದೇಶದ ಜನರಿಗೆ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ನೀಡುವ ಜೊತೆಗೆ ವಾಕ್ ಸ್ವಾತಂತ್ರ್ಯ ಸೇರಿದಂತೆ ಎಲ್ಲಾ ಸ್ವಾತಂತ್ರ್ಯ ಕೊಟ್ಟಿದ್ದಾರೆ. ನಾವು ಗಲಭೆ ಸ್ಥಳಕ್ಕೆ ಹೋದರೆ ಯಾವುದಾದರೂ ತೊಂದರೆಯಾದರೆ ಪ್ರಕರಣ ದಾಖಲಿಸಲಿ, ಅದನ್ನು ಬಿಟ್ಟು ಸ್ಥಳಕ್ಕೆ ತೆರಳುವ ಮುಂಚೆಯೇ ತಡೆದಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ನಾನು ಹೋಗಿ ಸಭೆ ಮಾಡುತ್ತಿಲ್ಲ. ಆದರೆ, ಜಿಲ್ಲಾಡಳಿತ ಮಂಡ್ಯ ಜಿಲ್ಲೆಗೆ ಪ್ರವೇಶವನ್ನು ಏಕೆ ತಡೆದಿದೆ ಗೊತ್ತಿಲ್ಲ. ಇದನ್ನು ಖಂಡಿಸುತ್ತೇನೆ. ಇದಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ನಿರಂತರವಾಗಿ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದರು.ಕಾಂಗ್ರೆಸ್ ಸರ್ಕಾರ ಹಿಂದು ವಿಚಾರಧಾರೆ, ಪ್ರಕ್ರಿಯೆ, ವೈಚಾರಿಕತೆಯನ್ನು ತಡೆಯುತ್ತಿದೆ. ಇಂದು ನಾಗಮಂಗಲ, ದಾವಣಗೆರೆ ಜಿಲ್ಲೆಯಲ್ಲಿ ಹಿಂದುಗಳ ಮೇಲೆ ದಾಳಿ ನಡೆದಿದೆ. ಮತ್ತೊಂದೆಡೆ ಪ್ಯಾಲೇಸ್ತಿನ್ ಧ್ವಜ ಹಾರಾಟ ನಡೆಸುತ್ತಾರೆ. ನಾಳೆ ಪಾಕಿಸ್ತಾನ ಧ್ವಜ ಹಾರಿಸುತ್ತಾರೆ. ಕಾಂಗ್ರೆಸ್ ಕುಮ್ಮಕ್ಕಿನಿಂದ ಇಂತಹ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿವೆ ಎಂದು ದೂರಿದರು.
ಬಜರಂಗಸೇನೆ ರಾಜ್ಯಾಧ್ಯಕ್ಷ ಮಂಜುನಾಥ್, ಜಿಲ್ಲಾಧ್ಯಕ್ಷ ಹರ್ಷ, ಜಿಲ್ಲಾ ಕಾರ್ಯದರ್ಶಿ ಸತೀಶ್, ನಗರ ಅಧ್ಯಕ್ಷ ಚೇತನ್, ಸವ್ಯಸಾಚಿ, ಅನಿಲ್, ಮರೀಗೌಡ ಇದ್ದರು.