ಚಾರ್ಮಾಡಿ ಘಾಟ್‌ನಲ್ಲಿ ಮುಂದುವರಿದ ಧರೆ ಕುಸಿತ

| Published : Oct 11 2024, 11:55 PM IST

ಸಾರಾಂಶ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟ್‌ ರಸ್ತೆ ಹಲವೆಡೆ ಧರೆ ಕುಸಿತ ಗುರುವಾರವೂ ಮುಂದುವರಿದಿತ್ತು.

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟ್‌ ರಸ್ತೆ ಹಲವೆಡೆ ಧರೆ ಕುಸಿತ ಗುರುವಾರವೂ ಮುಂದುವರಿದಿತ್ತು.

ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್‌ ಸೇರಿದಂತೆ ಮೂಡಿಗೆರೆ ತಾಲೂಕಿನಲ್ಲಿ ಪ್ರತಿದಿನ ಭಾರೀ ಮಳೆಯಾಗುತ್ತಿದೆ. ಹಾಗಾಗಿ ಘಾಟ್‌ ರಸ್ತೆಯಲ್ಲಿ ಆಗಾಗ ಧರೆ ಕುಸಿಯುತ್ತಿದೆ. ಕೂಡಲೇ ಮಣ್ಣು ತೆರವುಗೊಳಿಸಲು ಸ್ಥಳದಲ್ಲಿ ಎರಡು ಜೆಸಿಬಿ ಯಂತ್ರ ಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಯೋಜನೆ ಮಾಡಿದೆ.

ಬುಧವಾರ ಸಂಜೆ ನಂತರ ಮಳೆಯಿಂದ ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಧರೆ ಕುಸಿದಿತ್ತು. ಈ ಭಾಗದಲ್ಲಿ ಬೆಳಿಗ್ಗೆ ಮಳೆ ಬಿಡುವು ನೀಡಿತ್ತು. ಆದರೆ, ಮಧ್ಯಾಹ್ನ 3 ಗಂಟೆ ವೇಳೆಗೆ ಮತ್ತೆ ಧಾರಾಕಾರವಾಗಿ ಮಳೆಯಾಗಿದ್ದರಿಂದ ಧರೆ ಕುಸಿತ ಮುಂದುವರಿದಿತ್ತು. ಚಿಕ್ಕಮಗಳೂರು ಸೇರಿದಂತೆ ಕಳಸ, ಮೂಡಿಗೆರೆ, ಎನ್‌.ಆರ್‌.ಪುರ ಹಾಗೂ ಶೃಂಗೇರಿ ತಾಲೂಕಿನ ಹಲವೆಡೆ ಗಂಟೆಗಟ್ಟಲೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಗುರುವಾರವೂ ಮಧ್ಯಾಹ್ನದ ವೇಳೆಗೆ ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಎನ್‌.ಆರ್‌.ಪುರ, ಶೃಂಗೇರಿ ತಾಲೂಕಿನ ಹಲವೆಡೆ ಮಳೆ ಬಂದಿದೆ.

ಎನ್‌.ಆರ್. ಪುರ ತಾಲೂಕಿನ ಸೀತೂರು, ಕುದುರೆಗುಂಡಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಆಗಾಗ ಭಾರೀ ಮಳೆಯಾಗುತ್ತಿರುವುದರಿಂದ ರಸ್ತೆಗಳಿಗೆ ಹಾನಿ ಸಂಭವಿಸಿದೆ.

10 ಕೆಸಿಕೆಎಂ 6ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಗುರುವಾರ ಧರೆ ಕುಸಿತದಿಂದಾಗಿ ಬಿದ್ದಿರುವ ಮಣ್ಣನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಯಿತು.