ಜಿಲ್ಲೆಯಲ್ಲಿ ಮುಂದುವರಿದ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ

| Published : Aug 12 2024, 12:48 AM IST

ಜಿಲ್ಲೆಯಲ್ಲಿ ಮುಂದುವರಿದ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಅರಣ್ಯ ಒತ್ತುವರಿ ತೆರವಿಗೆ ರಾಜ್ಯದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು ಖಡಕ್‌ ಸೂಚನೆ ನೀಡಿದ ಹಿನ್ನಲೆಯಲ್ಲಿ ಜಿಲ್ಲೆಯ ಅರಣ್ಯ ಇಲಾಖೆಯವರು ಫುಲ್‌ ಅಲರ್ಟ್‌ ಆಗಿದ್ದಾರೆ.

- ಮತ್ತಾವರ ಮೀಸಲು ಅರಣ್ಯ ಪ್ರದೇಶ ಒತ್ತುವರಿ । 20 ಎ.11 ಗುಂಟೆ ತೆರವು । 200 ಸಿಬ್ಬಂದಿ ನಿಯೋಜನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಅರಣ್ಯ ಒತ್ತುವರಿ ತೆರವಿಗೆ ರಾಜ್ಯದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು ಖಡಕ್‌ ಸೂಚನೆ ನೀಡಿದ ಹಿನ್ನಲೆಯಲ್ಲಿ ಜಿಲ್ಲೆಯ ಅರಣ್ಯ ಇಲಾಖೆಯವರು ಫುಲ್‌ ಅಲರ್ಟ್‌ ಆಗಿದ್ದಾರೆ.

ಕಾಡು ಪ್ರಾಣಿಗಳು ಹಾಗೂ ಮಾನವ ಸಂಘರ್ಷಗಳು ಹೇಗೆ ಆಗಾಗ ರಿಪೀಟ್ ಆಗುತ್ತಲೇ ಇರುತ್ತದೆಯೋ, ಒತ್ತುವರಿ ತೆರವು ಸಂಬಂಧ ಅರಣ್ಯ ಇಲಾಖೆ ಮತ್ತು ಒತ್ತುವರಿದಾರರ ನಡುವೆ ಆಗಾಗ ಸಂಘರ್ಷ ನಡೆಯುತ್ತಲೇ ಇತ್ತು. ರಾಜಕೀಯ ಮಧ್ಯಸ್ಥಿಕೆ ಯಿಂದಾಗಿ ತೆರವು ಕಾರ್ಯಾಚರಣೆ ಮೂಲೆ ಹಿಡಿದಿತ್ತು.

ಮೀಸಲು ಅರಣ್ಯ ಒತ್ತುವರಿ ತೆರವುಗೊಳಿಸಬೇಕು ಇಲ್ಲದೆ ಹೋದರೆ ಸಂಬಂಧಿಸಿದ ಅರಣ್ಯಾಧಿಕಾರಿಗಳನ್ನು ಹೊಣೆಗಾರ ರನ್ನಾಗಿ ಮಾಡಲಾಗುವುದು ಎಂದು ಸುಪ್ರಿಂ ಕೋರ್ಟ್‌ನ ಹಸಿರು ಪೀಠ ಹಲವು ಪ್ರಕರಣಗಳಲ್ಲಿ ಪುನರುಚ್ಚರಿಸುತ್ತಲೇ ಬಂದಿದೆ. ಆದರೆ, ಅಧಿಕಾರಿಗಳು ಸ್ಥಳೀಯ ಪರಿಸ್ಥಿತಿಯನ್ನು ಎದುರಿಸಲಾಗದೆ ಅಸಹಾಯಕರಾಗಿದ್ದರು.

ಕೇರಳದ ವಾಯನಾಡ್‌ನಲ್ಲಿ ಭೂ ಕುಸಿತ ಉಂಟಾಗಿ ನೂರಾರು ಮಂದಿ ಮೃತಪಟ್ಟ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಎಚ್ಚರ ಗೊಂಡಿದ್ದು, ಅರಣ್ಯ ಒತ್ತುವರಿ ತೆರವುಗೊಳಿಸಲು ಸಚಿವ ಈಶ್ವರ್‌ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರ ಹಿನ್ನಲೆಯಲ್ಲಿ ತೆರವು ಕಾರ್ಯಾಚರಣೆ ಚುರುಕುಗೊಂಡಿದೆ.20.11 ಎಕರೆ ಒತ್ತುವರಿ ತೆರವು:

ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಗ್ರಾಮದ ಸರ್ವೆ ನಂ. 369ರಲ್ಲಿನ ಮತ್ತಾವರ ಬ್ಲಾಕ್‌ 2ರಲ್ಲಿನ 20 ಎಕರೆ 11 ಗುಂಟೆ ಮೀಸಲು ಅರಣ್ಯ ಪ್ರದೇಶವನ್ನು ಡಿ.ಆರ್‌. ರಮೇಶ್‌ ಒತ್ತುವರಿ ಮಾಡಿದ್ದರು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಸಹ ಏರಿದ್ದು, ತೀರ್ಪು ಕೂಡ ಅರಣ್ಯ ಇಲಾಖೆ ಪರವಾಗಿ ಬಂದಿತ್ತು.

ಈ ಹಿನ್ನಲೆಯಲ್ಲಿ ಚಿಕ್ಕಮಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ಬಾಬು ಅವರ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್‌. ಮೋಹನ್‌ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಸುಮಾರು 200 ಮಂದಿ ಸಿಬ್ಬಂದಿ ಅರಣ್ಯ ಒತ್ತುವರಿ ತೆರವುಗೊಳಿಸಿದರು.

--- ಬಾಕ್ಸ್‌ ----ಚಿಕ್ಕಮಗಳೂರು ವಿಭಾಗದಲ್ಲಿ 2500 ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಒಟ್ಟು 1245 ಪ್ರಕರಣಗಳಲ್ಲಿ 3 ಎಕರೆ ಯೊಳಗೆ 845 ಹಾಗೂ 3 ಎಕರೆ ಮೇಲ್ಪಟ್ಟು 400 ಪ್ರಕರಣಗಳು ಇವೆ. ಸದ್ಯ 3 ಎಕರೆ ಮೇಲ್ಪಟ್ಟ ಒತ್ತುವರಿ ತೆರವು ಗೊಳಿಸಲಾಗುತ್ತಿದೆ.- ರಮೇಶ್‌ಬಾಬು

ಡಿಎಫ್‌ಒ,

ಚಿಕ್ಕಮಗಳೂರು ವಿಭಾಗ

ಪೋಟೋ ಫೈಲ್‌ ನೇಮ್‌ 11 ಕೆಸಿಕೆಎಂ 1----ಪೋಟೋ ಫೈಲ್ ನೇಮ್‌ 11 ಕೆಸಿಕೆಎಂ 2 - 3ಚಿಕ್ಕಮಗಳೂರು ತಾಲೂಕಿನ ಮತ್ತಾವರ ಬಳಿ 20 ಎಕರೆ 11 ಗುಂಟೆ ಮೀಸಲು ಅರಣ್ಯ ಪ್ರದೇಶವನ್ನು ಅರಣ್ಯ ಸಿಬ್ಬಂದಿ ತೆರವುಗೊಳಿಸಿದರು.