ಸಾರಾಂಶ
ನೌಕರರ ವೇತನ ವಿಳಂಬ, ಆರೋಗ್ಯ ವಿಮೆ, ಭದ್ರತೆ ಸೇರಿ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರ ಶೀಘ್ರವೇ ನೀಡಬೇಕು.
ಯಲಬುರ್ಗಾ:
ನರೇಗಾ ನೌಕರರ ೬ ತಿಂಗಳ ವೇತನ ಪಾವತಿ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ನಡೆಯುತ್ತಿರುವ ಚಳವಳಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸಂಪೂರ್ಣ ಬೆಂಬಲವಿದೆ ಎಂದು ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ವೀರನಗೌಡ ಚನ್ನವೀರನಗೌಡ್ರ ಹೇಳಿದರು.ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ, ರಾಜ್ಯ ಬೇರ್ ಫೂಟ್ ಟೆಕ್ನಿಷಿಯನ್ ಕ್ಷೇಮಾಭಿವೃದ್ಧಿ ಸಂಘ ಮತ್ತು ಗ್ರಾಮ ಕಾಯಕ ಮಿತ್ರರ ಕ್ಷೇಮಾಭಿವೃದ್ಧಿ ಸಂಘದಿಂದ ನೌಕರರ ವೇತನ ವಿಳಂಬ, ಆರೋಗ್ಯ ವಿಮೆ, ಭದ್ರತೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ನಡೆಯುತ್ತಿರುವ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರ ಕೂಡಲೇ ನೌಕರರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ೬ ತಿಂಗಳ ವೇತನ ನೀಡಬೇಕು. ನರೇಗಾ ನೌಕರರ ಕಷ್ಟದಲ್ಲಿ ನಾವಿದ್ದೇವೆ ಎಂದರು.ತಾಪಂ ಸಹಾಯಕ ನಿರ್ದೇಶಕ ಫಕೀರಪ್ಪ ಕಟ್ಟಮನಿ ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ನರೇಗಾ ಹೃದಯ ಭಾಗ ಇದ್ದಂತೆ. ಅಲ್ಲಿ ಕೆಲಸ ಮಾಡುವ ನೌಕರರಿಗೆ ವೇತನ ನೀಡದಿರುವುದು ಬೇಸರದ ಸಂಗತಿ ಎಂದರು.
ಸಂಘದ ತಾಲೂಕು ನಿರ್ದೇಶಕ ಸಿದ್ದನಗೌಡ ರಬ್ಬನಗೌಡ್ರ ಮಾತನಾಡಿ, ನರೇಗಾ ನೌಕರರ ಪ್ರತಿಭಟನೆಗೆ ಪಿಡಿಒಗಳು ಬೆಂಬಲ ವ್ಯಕ್ತಪಡಿಸಿದ್ದೇವೆ ಎಂದರು.ತಾಪಂ ಇಒ ಸಂತೋಷ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ, ರಾಜ್ಯ ಆಯುಕ್ತಾಲಯದ ಅಧಿಕಾರಿಗಳ ಜತೆ ದೂರವಾಣಿಯಲ್ಲಿ ಮಾತನಾಡಿ, ಈ ವಾರದಲ್ಲಿ ವೇತನ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಪಿಡಿಒ ಸಂಘದ ತಾಲೂಕಾಧ್ಯಕ್ಷ ವೀರಭದ್ರಗೌಡ ಮೂಲಿಮನಿ, ರಾಜ್ಯ ನೌಕರರ ಸಂಘದ ನಿರ್ದೇಶಕ ರಮೇಶ ತಿಮ್ಮಾರೆಡ್ಡಿ, ಹಜರತ್‌ಅಲಿ ಮಾತನಾಡಿದರು. ಈ ವೇಳೆ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಬಸವರಾಜ ದೊಡ್ಡಮನಿ, ಸಂತೋಷ ನಂದಾಪುರ, ಸುರೇಶ ದೇಸಾಯಿ, ಗಿರೀಶ, ಶರಣಪ್ಪ ಹಾಳಕೇರಿ, ವಿನಯಾ, ಮಂಜುನಾಥ, ಪ್ರಸಾದ್, ವಿಜಯಕುಮಾರ ಬಂಡಿ, ವಿಜಯಕುಮಾರ ಬಳಿಗಾರ, ಸಂಗಮೇಶ ಜಡಿಮಠ, ಕಿರಣಕುಮಾರ, ವಿಜಯ ರಾಮಶೆಟ್ಟಿ, ನಾಗರಾಜ ಹಳ್ಳಿ, ನೇತ್ರಾವತಿ, ಸಂಜೀವಕುಮಾರ, ಚೇತನ, ಮಂಜುನಾಥ, ರವಿರಾಜ ಹುಲಿ ಶ್ರೀದೇವಿ ಇದ್ದರು.