ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಲ್ಲಿ ಪುನರ್ವಸು ಮಳೆ ಅಬ್ಬರಿಸುತ್ತಿದ್ದು, ಕಳೆದ ಮೂರು ದಿನದಿಂದ ಜಿಲ್ಲಾದಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದೆ. ಕಳೆದ ಮೂರು ದಿನದಲ್ಲಿ ಸರಾಸರಿ 105 ಮಿ.ಮೀ. ಮಳೆಯಾಗಿದೆ.ಜುಲೈ ಆರಂಭದಲ್ಲೇ ಅಬ್ಬರಿಸಿದ್ದ ಆರಿದ್ರಾ ಮಳೆ ಬಳಿಕ ಕಡಿಮೆಯಾಗಿತ್ತು. ಈಗ ಮಳೆ ಮತ್ತೆ ಬಿರುಸು ಪಡೆದುಕೊಳ್ಳುತ್ತಿದೆ. ಇನ್ನು ಮೂರು ದಿನ ಭಾರಿ ಮಳೆಯ ಅಲರ್ಟ್ ಪ್ರಕಟಿಸಲಾಗಿದೆ. ಭಾನುವಾರ ಸುರಿದ ಭಾರಿ ಮಳೆಗೆ ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತವಾಗಿತ್ತು. ಸೋಮವಾರ ಸುರಿದ ನಿರಂತರ ಮಳೆಗೆ ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಬಿದ್ದಿದೆ. ಹಾರನಹಳ್ಳಿ ಗ್ರಾಮದ ನವೀದ್ ಎಂಬುವವರ ಮನೆಯ ಗೋಡೆ ಮತ್ತು ಮಹಡಿ ಕುಸಿದಿದೆ. ಮಳೆಯಲ್ಲಿ ನೆನೆದಿದ್ದ ಮನೆಯ ಮುಂಭಾಗದ ಮಣ್ಣಿನ ಗೋಡೆ ಕುಸಿದು ಬಿದ್ದಿದೆ. ಗ್ರಾಮ ಲೆಕ್ಕಾಧಿಕಾರಿ ದಿವಾಕರ್ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಂದು ಶಾಲಾ ಕಾಲೇಜಿಗೆ ರಜೆ:ಜಿಲ್ಲೆಯಲ್ಲಿ ಸತತ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಶಾಲಾ ಕಾಲೇಜುಗಳಿಗೆ ಜುಲೈ 16 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ.
39 ಮಿ.ಮೀ ಸರಾಸರಿ ಮಳೆ:ಭಾನುವಾರ ಬೆಳಗ್ಗೆ 8.30 ರಿಂದ ಭಾನುವಾರ ಬೆಳಗ್ಗೆ 8.30ರವರೆಗೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಶಿವಮೊಗ್ಗದಲ್ಲಿ 20 ಮಿ.ಮೀ, ಭದ್ರಾವತಿಯಲ್ಲಿ 12.90 ಮಿ.ಮೀ, ತೀರ್ಥಹಳ್ಳಿಯಲ್ಲಿ 56.20 ಮಿ.ಮೀ. ಸಾಗರದಲ್ಲಿ 71.90 ಮಿ.ಮೀ, ಶಿಕಾರಿಪುರದಲ್ಲಿ 24.90 ಮಿ.ಮೀ, ಸೊರಬದಲ್ಲಿ 33 ಮಿ.ಮೀ, ಹೊಸನಗರದಲ್ಲಿ 57.20 ಮಿ.ಮೀ ಮಳೆಯಾಗಿದೆ.
ಜಿಲ್ಲೆಯಲ್ಲಿ ಇನ್ನು ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಂಗಳವಾರದಿಂದ ಮೂರು ದಿನ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಇರಲಿದೆ. ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲೂಕಿನಲ್ಲಿ ಮಳೆ ಅಬ್ಬರಿಸುವ ಸಾಧ್ಯತೆ ಇದೆ.ಭದ್ರಾ ಜಲಾಶಯದಲ್ಲಿ 141.3 ಅಡಿ ನೀರುಜಿಲ್ಲೆಯಲ್ಲಿ ಜೋರು ಮಳೆಯಾಗುತ್ತಿರುವ ಕಾರಣ ಜಲಾಶಯಗಳ ಒಳಹರಿವು ಹೆಚ್ಚಾಗುತ್ತಿವೆ. ತೀರ್ಥಹಳ್ಳಿ ಸೇರಿದಂತೆ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಆದ್ದರಿಂದ ಗಾಜನೂರಿನ ತುಂಗಾ ಜಲಾಶಯದ ಒಳ ಹರಿವು ಏರಿಕೆ ಯಾಗಿದೆ. ಈಗಾಗಲೆ ಜಲಾಶಯ ಭರ್ತಿ ಆಗಿರುವ ಹಿನ್ನೆಲೆಯಲ್ಲಿ ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ.
ಇನ್ನೂ ಭದ್ರಾ ಜಲನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗಿದ್ದು, ಭದ್ರಾ ಜಲಾಶಯಕ್ಕೆ ಸೋಮವಾರ 16041 ಕ್ಯುಸೆಕ್ ನೀರು ಹರಿದು ಬಂದಿದೆ. ಒಟ್ಟು 186 ಅಡಿ ಗರಿಷ್ಠ ಮಟ್ಟ ಇರುವ ಜಲಾಶಯದ ಮಟ್ಟ ಈಗ 141.3 ಅಡಿಗೆ ತಲುಪಿದೆ. ಇನ್ನು, ಲಿಂಗನ ಮಕ್ಕಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿದ್ದು, ಸೋಮವಾರ 45115 ಕ್ಯುಸೆಕ್ ನೀರು ಹರಿದು ಬಂದಿದೆ. 1819 ಅಡಿ ಗರಿಷ್ಠ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯದ ಮಟ್ಟ 1778.15 ಅಡಿಗೆ ತಲುಪಿದೆ. ಆನಂದಪುರ: ಭಾರಿ ಮಳೆಗೆ ಮನೆ ಚಾವಣಿ ಕುಸಿತಆನಂದಪುರ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗುಂಡಿ ಬೈಲ್ ಗದ್ದೆಗಳು ಜಲಾವೃತ ಗೊಂಡಿದ್ದು, ಆಚಾಪುರ ಗ್ರಾಮ ಪಂಚಾಯಿತಿಯ ಮುರುಘಾ ಮಠ ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ಕುಸಿದ ಘಟನೆ ಸಂಭವಿಸಿದೆ.ಆನಂದಪುರ ಸುತ್ತಮುತ್ತ ಭಾರಿ ಮಳೆಯಾಗಿದ್ದು, ಆಚಾಪುರ ಗ್ರಾಮ ಪಂಚಾಯಿತಿಯ ಮುರುಘಾ ಮಠ ಗ್ರಾಮದ ಗಣೇಶ್ ಶೆಟ್ಟಿ ಎಂಬುವರ ಮನೆಯ ಮೇಲ್ಚಾವಣಿ ಸಂಪೂರ್ಣ ಕುಸಿದಿದೆ. ಕಂದಾಯ ಇಲಾಖೆಯ ಅಧಿಕಾರಿ ಚಂದ್ರಮೌಳಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ರಂಗಸ್ವಾಮಿ , ಗ್ರಾಮ ಪಂಚಾಯತ್ತಿ ಅಧ್ಯಕ್ಷ ಕಲೀಮುಲ್ಲಾ ಖಾನ್, ಗ್ರಾಮ ಸೇವಕ ನಾಗರಾಜ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ವಾಸದ ಮನೆಯ ಮೇಲ್ಚಾವಣಿ ಕುಸಿತಗೊಂಡ ಕಾರಣ ಗಣೇಶ್ ಶೆಟ್ಟಿ ಕುಟುಂಬ ದವರನ್ನು ಮನೆಯಿಂದ ಸ್ಥಳಾಂತರಿಸಿ ಬೇರೆ ಮನೆಯಲ್ಲಿ ಇರುವುದಕ್ಕೆ ಗ್ರಾಮಾಡಳಿತ ವ್ಯವಸ್ಥೆ ಮಾಡಿದೆ.