ಬಂಟ್ವಾಳ ತಾಲೂಕಿನಲ್ಲಿ ಮುಂದುವರಿದ ಮಳೆ ಹಾನಿ

| Published : Jul 05 2024, 12:51 AM IST

ಸಾರಾಂಶ

ಕಾವಳ ಪಡೂರು ಗ್ರಾಮದ ಮಧ್ವ ಎಂಬಲ್ಲಿ ಯೋಗೀಶ್‌ ಪೂಜಾರಿಯವರ ಮನೆಗೆ ಮರ ಬಿದ್ದು ಹಾನಿಯಾಗಿದೆ, ಅವಘಡ ನಡೆದ ಸ್ಥಳಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಹಾರ ಕ್ರಮ ಕೈಗೊಂಡಿದ್ದಾರೆ.

ಬಂಟ್ವಾಳ: ತಾಲೂಕಿನಾದ್ಯಂತ ಮಳೆ ಹಾನಿ ಮುಂದುವರಿದಿದ್ದು, ಹಲವೆಡೆಗಳಲ್ಲಿ ಹಾನಿ ಸಂಭವಿಸಿದೆ. ಬುಧವಾರ ರಾತ್ರಿಯಿಂದ ಮಳೆ ವ್ಯಾಪಕವಾಗಿದ್ದ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಬಂಟ್ವಾಳ ತಹಶೀಲ್ದಾರ್‌ ಅರ್ಚನಾ ಭಟ್‌ ಗುರುವಾರ ರಜೆ ಘೋಷಿಸಿದ್ದರು.

ತಾಲೂಕಿನ ಬಂಟ್ವಾಳ ಕಸ್ಬಾ ಗ್ರಾಮದ ಕೆಳಗಿನ ಮಂಡಾಡಿ ಎಂಬಲ್ಲಿ ನಂದಿನಿ ಎಂಬವರ ಮನೆಯ ಮೇಲ್ಚಾವಣಿಗೆ ಮಳೆಯಿಂದ ಭಾಗಶಃ ಹಾನಿ ಸಂಭವಿಸಿದೆ. ಕಾವಳ ಪಡೂರು ಗ್ರಾಮದ ಮಧ್ವ ಎಂಬಲ್ಲಿ ಯೋಗೀಶ್‌ ಪೂಜಾರಿಯವರ ಮನೆಗೆ ಮರ ಬಿದ್ದು ಹಾನಿಯಾಗಿದೆ, ಅವಘಡ ನಡೆದ ಸ್ಥಳಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಹಾರ ಕ್ರಮ ಕೈಗೊಂಡಿದ್ದಾರೆ.

ಮೂಲ್ಕಿ ತಾಲೂಕಿನಲ್ಲಿ ಮಳೆಗೆ ಹಾನಿ

ಮೂಲ್ಕಿ: ಮೂಲ್ಕಿ ತಾಲೂಕಿನಲ್ಲಿ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗೆ ಬಿರುಸಿನ ಗಾಳಿ ಸಹಿತ ಭಾರಿ ಮಳೆಯಾಗಿದ್ದು ಕೆಲವೆಡೆ ಹಾನಿ ಸಂಭವಿಸಿದೆ. ಗಾಳಿ ಮಳೆಗೆ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಎವುಲಿನ್‌ ಎಂಬವರ ಮನೆಯ ದನದ ಕೊಟ್ಟಿಗೆಯ ಹೆಂಚಿನ ಮಾಡು ಸಂಪೂರ್ಣ ಕುಸಿದು ಬಿದ್ದು ಹೆಚ್ಚಿನ ಹಾನಿ ಆಗಿದೆ. ಸ್ಥಳಕ್ಕೆ ಮೂಲ್ಕಿ ತಾಲೂಕು ಉಪ ತಹಸೀಲ್ದಾರ್‌ ದಿಲೀಪ್‌ ರೋಡ್ಕರ್‌, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.ಗಾಳಿ ಮಳೆಗೆ ಮೂಲ್ಕಿ- ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಹೊಸಕಾವೇರಿಬಳಿ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದು ಸಂಚಾರ ವ್ಯತ್ಯಯ ಉಂಟಾಯಿತು. ಜೆಸಿಬಿ ಮೂಲಕ ಮರ ತೆರವು ಮಾಡಿ ಸಂಚಾರಕ್ಕೆ ವ್ಯವಸ್ತೆ ಮಾಡಿಕೊಡಲಾಯಿತು. ಮರ ಬಿದ್ದು ವಿದ್ಯುತ್ ಕಂಬಕ್ಕೂ ಹಾನಿ ಉಂಟಾಗಿದೆ.