ಸಾರಾಂಶ
ಅನೇಕ ಕಡೆ ಭೂಕುಸಿತದ ಆತಂಕಗಳು ಎದುರಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಕನ್ನಡಪರ್ಭ ವಾರ್ತೆ ಬಂಟ್ವಾಳ
ತಾಲೂಕಿನಾದ್ಯಂತ ಮಳೆಯ ಆರ್ಭಟ ಮತ್ತೆ ಮುಂದುವರಿದ್ದು, ಹಲವೆಡೆಗಳಲ್ಲಿ ಹಾನಿ ಸಂಭವಿಸಿದೆ. ಅನೇಕ ಕಡೆ ಭೂಕುಸಿತದ ಆತಂಕಗಳು ಎದುರಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಮಂಗಳೂರು- ಬೆಂಗಳೂರು ರಸ್ತೆ ಮಧ್ಯೆ ಪೆರ್ನೆ ಎಂಬಲ್ಲಿ ನೂತನವಾಗಿ ನಿರ್ಮಾಣವಾದ ಚತುಷ್ಪಥ ಹೆದ್ದಾರಿ ಮೇಲೆ ಗುಡ್ಡ ಜರಿದು ಬೀಳುತ್ತಿದ್ದು, ಅಪಾಯದ ಕರೆಗಂಟೆ ಬಾರಿಸಿದೆ. ಚತುಷ್ಪಥ ರಸ್ತೆ ಮೇಲೆ ಮಣ್ಣು ಜರಿದು ಬೀಳುತ್ತಿದ್ದು, ಒಂದು ಬದಿಯ ರಸ್ತೆ ಸಂಪೂರ್ಣ ಬಂದ್ ಆಗಿದೆ. ಇನ್ನೊಂದು ಬದಿಯ ರಸ್ತೆಯ ಮೂಲಕ ವಾಹನಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯವರ ಅವೈಜ್ಞಾನಿಕ ರೀತಿಯಲ್ಲಿ ಗುಡ್ಡಗಳನ್ನು ಜರಿದ ಪರಿಣಾಮವಾಗಿ ಇದೀಗ ರಸ್ತೆಯ ಭೂಕುಸಿತ ಶುರುವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ. ಸ್ಥಳದಲ್ಲಿ ಉಪ್ಪಿನಂಗಡಿ ಪೊಲೀಸರು ಕಾವಲಿದ್ದು, ವಾಹನಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಬಿ.ಸಿ.ರೋಡು ಮಾಣಿ ಹೆದ್ದಾರಿಯಲ್ಲಿ ಅಂಡರ್ ಪಾಸ್ ಹಾಗೂ ಫ್ಲೈ ಓವರ್ ನಿರ್ಮಾಣವಾಗುವ ಸ್ಥಳಗಳಲ್ಲಿ ರಸ್ತೆ ಸಂಪೂರ್ಣ ಮಾಯವಾಗಿದ್ದು ಚರಂಡಿಯಾಗಿ ಪರಿರ್ವತನೆಗೊಂಡಿದೆ. ಹೊಂಡಗಳನ್ನು ಮುಚ್ಚಲು ಗುತ್ತಿಗೆ ಸಂಸ್ಥೆ ಜಲ್ಲಿಕಲ್ಲುಗಳನ್ನು ಹಾಕುವ ಪ್ರಯತ್ನ ನಡೆಸುತ್ತಿದೆಯಾದರೂ, ವಾಹನ ಸಂಚಾರ ಕಷ್ಟ ಎನ್ನುವ ಸ್ಥಿತಿ ಉಂಟಾಗಿದೆ. ದ್ವಿಚಕ್ರವಾಹನ ಸವಾರರಂತೂ ಹೆದ್ದಾರಿಯಲ್ಲಿ ಸಂಚರಿಸಲು ಹರಸಾಹಸಪಡುತ್ತಿದ್ದಾರೆ.