ಸಾರಾಂಶ
ತಾಲೂಕಿನ ಬಿ ಕಸ್ಬಾಗ್ರಾಮದ ಬೇಬಿ ಎಂಬವರ ಮನೆಯ ತಡೆಗೋಡೆ ಕುಸಿದ ಪರಿಣಾಮ ಮನೆಗೆ ಹಾನಿಯಾಗಿದೆ, ಮನೆಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬಂಟ್ವಾಳ
ತಾಲೂಕಿನಾದ್ಯಂತ ಮಳೆಯ ಆರ್ಭಟ ಮುಂದುವರಿದಿದ್ದು, ತಾಲೂಕಿನ ಬಹುತೇಕ ಕಡೆಗಳಲ್ಲಿ ಗುಡ್ಡಕುಸಿತ, ಕೃಷಿ ಹಾನಿ, ಆವರಣಗೋಡೆ ಜರಿದುಬಿದ್ದ ಘಟನೆಗಳು ಸಂಭವಿಸಿವೆ.ತಾಲೂಕಿನ ಬಿ ಕಸ್ಬಾಗ್ರಾಮದ ಬೇಬಿ ಎಂಬವರ ಮನೆಯ ತಡೆಗೋಡೆ ಕುಸಿದ ಪರಿಣಾಮ ಮನೆಗೆ ಹಾನಿಯಾಗಿದೆ, ಮನೆಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ನಾವೂರುಗ್ರಾಮದ ಪೂಪಾಡಿಕಟ್ಟೆ ಜಯಂತಿ ಎಂಬವರ ಮನೆಯ ಹಿಂದಿನ ಗುಡ್ಡ ಕುಸಿತಕ್ಕೆ ಒಳಗಾಗಿದ್ದು, ಮನೆಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ. ನಾವೂರು ಗ್ರಾಮದ ಕೆಮ್ಮಟೆ ಎಂಬಲ್ಲಿ ರೇವತಿ ಎಂಬವರ ಮನೆಯ ಹಿಂಬದಿಯಲ್ಲಿನ ಪಿಡಬ್ಲ್ಯು ರಸ್ತೆಯ ಕುಸಿತ ಆಗಿದ್ದು, ಮುನ್ನೆಚ್ಚರಿಕೆ ವಹಿಸಲಾಗಿದೆ.
ಕೆದಿಲ ಗ್ರಾಮದ ಕುದುಂಬ್ಲಾಡಿ ಎಂಬಲ್ಲಿ ಜುಬೈದಾ ಎಂಬವರ ಮನೆಯ ಹಿಂಬದಿ ಕುಸಿತಕ್ಕೆ ಒಳಗಾಗಿದೆ. ಮಾಣಿಲ ಗ್ರಾಮದ ಪಳನೀರ್ ಎಂಬಲ್ಲಿ ದೇವಕಿ ಎಂಬವರ ಮನೆಗೆ ಭಾಗಶಃ ಹಾನಿಯಾಗಿದೆ. ಇದೇ ಗ್ರಾಮದ ಪಳನೀರುವಿನಲ್ಲಿ ಬೇಡು ಎಂಬವರ ಮನೆಗೆ ಹಾನಿಯಾದ ಬಗ್ಗೆ ವರದಿಯಾಗಿದೆ. ಘಟನಾ ಸ್ಥಳಗಳಿಗೆ ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆ. ನೇತ್ರಾವತಿ ನದಿ ನೀರಿನ ಮಟ್ಟ ಗುರುವಾರ ಮುಂಜಾನೆ ವೇಳೆಗೆ ೫.೯ ಮೀಟರ್‌ಗೆ ಏರಿಕೆಯಾಗಿದ್ದು, ಅಪಾಯಮಟ್ಟ ೮.೫ ಮೀಟರ್ ಆಗಿದೆ.