ಕಾಫಿನಾಡಲ್ಲಿ ಮುಂದುವರಿದ ಮಳೆ: ತಗ್ಗಿದ ಅಬ್ಬರ

| Published : Jun 29 2024, 12:32 AM IST

ಸಾರಾಂಶ

ಚಿಕ್ಕಮಗಳೂರು, ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಕಳೆದ 24 ಗಂಟೆಗಳಿಗೆ ಹೋಲಿಕೆ ಮಾಡಿದರೆ ಮೂಡಿಗೆರೆ ತಾಲೂಕು ಹೊರತುಪಡಿಸಿ ಮಲೆನಾಡಿನ ಎಲ್ಲಾ ತಾಲೂಕುಗಳಲ್ಲಿ ವರುಣನ ಆರ್ಭಟ ಕಡಿಮೆಯಾಗಿತ್ತು. ಬಯಲುಸೀಮೆ ತಾಲೂಕಿನಲ್ಲಿ ಎಂದಿನಂತೆ ಮೋಡ ಕವಿದ ವಾತಾವರಣ ಮುಂದುವರಿದಿತ್ತು.

-ಮೂಡಿಗೆರೆ ತಾಲೂಕಿನಲ್ಲಿ ಭಾರೀ ಮಳೆ । ಮಲೆನಾಡಿನ ತಾಲೂಕಿನಲ್ಲಿ ಸಾಧಾರಣ ಮಳೆ । ಬಯಲುಸೀಮೆಯಲ್ಲಿ ಬಿಸಿಲು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಕಳೆದ 24 ಗಂಟೆಗಳಿಗೆ ಹೋಲಿಕೆ ಮಾಡಿದರೆ ಮೂಡಿಗೆರೆ ತಾಲೂಕು ಹೊರತುಪಡಿಸಿ ಮಲೆನಾಡಿನ ಎಲ್ಲಾ ತಾಲೂಕುಗಳಲ್ಲಿ ವರುಣನ ಆರ್ಭಟ ಕಡಿಮೆಯಾಗಿತ್ತು. ಬಯಲುಸೀಮೆ ತಾಲೂಕಿನಲ್ಲಿ ಎಂದಿನಂತೆ ಮೋಡ ಕವಿದ ವಾತಾವರಣ ಮುಂದುವರಿದಿತ್ತು.

ಗುರುವಾರ ರಾತ್ರಿಯಿಂದ ಬೆಳಗಿನ ಜಾವದವರೆಗೆ ಭಾರೀ ಮಳೆ, ಗಾಳಿ ಇದ್ದರಿಂದ ಶುಕ್ರವಾರ ಮೂಡಿಗೆರೆ ತಾಲೂಕಿನಲ್ಲಿ ಅಂಗನವಾಡಿ, ಕಿರಿಯ ಮತ್ತು ಹಿರಿಯ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಲಾಗಿತ್ತು. ಆದರೆ, ಬೆಳಿಗ್ಗೆ 7 ಗಂಟೆ ನಂತರ ಮಳೆ ಬಿಡುವು ನೀಡಿತು. ಮಧ್ಯಾಹ್ನದ ವೇಳೆಗೆ ಮತ್ತೆ ವರುಣನ ಆರ್ಭಟ ಜೋರಾಗಿತ್ತು. ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್‌, ಬಣಕಲ್‌, ಗೋಣಿಬೀಡು, ಜಾವಳಿ ಭಾಗದಲ್ಲಿ ಮಳೆ ನಿರಂತರವಾಗಿ ಬರುತ್ತಲೇ ಇತ್ತು.

ಮೂಡಿಗೆರೆಯಿಂದ ಹೊರನಾಡಿಗೆ ಹೋಗುವ ಮಾರ್ಗದಲ್ಲಿರುವ ಸಂಪಿಗೆಖಾನ್ ಬಳಿ ಮರವೊಂದು ರಸ್ತೆಗೆ ಬಿದ್ದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಸ್ಥಳೀಯರು ಮರ ತೆರವುಗೊಳಿಸಿದ ನಂತರ ವಾಹನಗಳ ಸಂಚಾರ ಪುನಾರಂಭಗೊಂಡಿತು.

ಕಳಸ ತಾಲೂಕಿನಲ್ಲೂ ಮಳೆ ಬಂದಿದ್ದರಿಂದ ಅಂಗನವಾಡಿ ಶಾಲೆಗಳಿಗೆ ತಹಸೀಲ್ದಾರ್‌ ರಜೆ ಘೋಷಣೆ ಮಾಡಿದ್ದರು. ಆದರೆ, ಶುಕ್ರವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮಳೆ ಬಿಡುವು ನೀಡಿತ್ತು. ಹಾಗಾಗಿ ಈ ಪ್ರದೇಶದಲ್ಲಿ ಹುಟ್ಟಿ ಹರಿ ಯುವ ಹೇಮಾವತಿ, ತುಂಗಾ, ಭದ್ರಾ ನದಿಗಳ ನೀರಿನ ಪ್ರಮಾಣ ಇಳಿಮುಖವಾಗಿತ್ತು.

ಕೊಪ್ಪ ತಾಲೂಕಿನ ಸಿದ್ದರಮಠ ಸಮೀಪದ ಕರ್ಗೆಸಿಯಲ್ಲಿ ಶುಕ್ರವಾರ ಬೆಳಿಗ್ಗೆ ತುಂಡಾಗಿ ಬಿದ್ದ ವಿದ್ಯುತ್ ವಯರ್ ನಿಂದ ವಿದ್ಯುತ್ ಪ್ರವಹಿಸಿ ಮೂರು ಹಸುಗಳು ಮೃತಪಟ್ಟಿವೆ. ಕರ್ಗೆಸಿಯ ರಾಮ ರಾಜು ಎನ್ನುವವರ ಎರಡು ಹಸುಗಳು, ಮಹೇಶ್ ಎನ್ನುವವರ ಒಂದು ಹಸು ಬೆಳಿಗ್ಗೆ 6 ಗಂಟೆ ವೇಳೆಯಲ್ಲಿ ಮೇಯಲು ಹೋಗುವಾಗ ಈ ಘಟನೆ ಸಂಭವಿಸಿದೆ.

ಅತಿ ಹೆಚ್ಚು ಮಳೆ ಬೀಳುವ ಶೃಂಗೇರಿ, ಕೊಪ್ಪ ತಾಲೂಕಿನಲ್ಲಿ ಮಳೆ ಕಡಿಮೆಯಾಗಿದೆ. ಎನ್‌.ಆರ್‌.ಪುರ ಹಾಗೂ ಚಿಕ್ಕಮಗಳೂರು ತಾಲೂಕಿನಲ್ಲಿ ಮಳೆ ಅಬ್ಬರ ತಣ್ಣಗಾಗಿತ್ತು.

ಕಡೂರು, ತರೀಕೆರೆ ಹಾಗೂ ಅಜ್ಜಂಪುರ ತಾಲೂಕಿನಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಆಗಾಗ ತುಂತುರು ಮಳೆ ಬಂದು ಹೋಗುತಿತ್ತು.ಮಳೆಯ ವಿವರ

ಜಿಲ್ಲೆಯ ವಿವಿಧೆಡೆ 24 ಗಂಟೆಗಳಲ್ಲಿ ಬಿದ್ದ ಮಳೆ ವಿವರ.

ಶೃಂಗೇರಿ- 16.8 ಮಿ.ಮೀ., ಕಿಗ್ಗಾ- 32.4, ಕೆರೆಕಟ್ಟೆ- 31.2, ಮೂಡಿಗೆರೆ- 16, ಕೊಟ್ಟಿಗೆಹಾರ- 64.4, ಗೋಣಿಬೀಡು- 22.3, ಎನ್‌.ಆರ್‌.ಪುರ- 4.4 ಮಿ.ಮೀ., ಬಾಳೆಹೊನ್ನೂರು- 4.4, ಚಿಕ್ಕಮಗಳೂರು- 2.3, ಅಜ್ಜಂಪುರ- 2.6, ಕೊಪ್ಪ- 18, ಹರಿಹರಪುರ- 27, ಜಯಪುರ- 7, ಕಮ್ಮರಡಿ- 40.2 ಮಿ.ಮೀ. ಮಳೆಯಾಗಿದೆ.

-- ಬಾಕ್ಸ್‌ --ಕಾಲುವೆಗೆ ಬಿದ್ದ ಕಾರು । ಇಬ್ಬರು ಪ್ರಾಣಾಪಾಯದಿಂದ ಪಾರು ಕೊಟ್ಟಿಗೆಹಾರ: ಕೊಟ್ಟಿಗೆಹಾರದಿಂದ ಬಣಕಲ್ ಹೋಗುವ ರಸ್ತೆಯ ಮಾರ್ಗ ಮಧ್ಯೆ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹೇಮಾವತಿ ನದಿ ಕಿರು ಕಾಲುವೆಗೆ ನೇರವಾಗಿ ಬಿದ್ದಿರುವ ಘಟನೆ ಶುಕ್ರವಾರ ನಡೆದಿದೆ.

ಕಾರು ಮಂಗಳೂರು ಕಡೆಯಿಂದ ಮೂಡಿಗೆರೆ ಕಡೆಗೆ ಸಾಗುತ್ತಿದ್ದಾಗ ಮಳೆಗೆ ತಿರುವು ಕಾಣದೇ ಕೆಳಕ್ಕೆ ಹಳ್ಳಕ್ಕೆ ಬಿದ್ದಿದೆ. ಈ ಹೆದ್ದಾರಿಯಲ್ಲಿ ನೀರು ನಿಲ್ಲುವುದರಿಂದ ಈ ವರೆಗೆ ಸುಮಾರು ಮೂರು ನಾಲ್ಕು ವಾಹನಗಳು ಅಪಘಾತಕ್ಕೀಡಾಗಿವೆ. ವಿಲ್ಲುಪುರಂ -ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಣಕಲ್ ಸಮೀಪ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ನೀರು ನಿಂತು ಇಂತಹ ಘಟನೆ ಸಂಭವಿಸುತ್ತಿದೆ. ಕಾರಿನಲ್ಲಿ ಇಬ್ಬರೇ ಇದ್ದುದರಿಂದ ಕಾರು ನೀರಿಗೆ ಜಾರಿರುವುದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಮಂಗಳೂರು ಮೂಲದ ಕಾರೆಂದು ತಿಳಿದು ಬಂದಿದೆ. 28 ಕೆಸಿಕೆಎಂ 7ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ- ಬಣಕಲ್‌ ರಸ್ತೆಯಲ್ಲಿ ಕಾಲುವೆಗೆ ಇಳಿದ ಕಾರು.

--28 ಕೆಸಿಕೆಎಂ 8ಮೂಡಿಗೆರೆಯಿಂದ ಹೊರನಾಡಿಗೆ ಹೋಗುವ ಮಾರ್ಗದಲ್ಲಿರುವ ಸಂಪಿಗೆಖಾನ್ ಬಳಿ ಮರವೊಂದು ಉರುಳಿ ಬಿದ್ದಿರುವುದು.