ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ದಿನವಿಡಿ ಮೋಡ ಕವಿದ ವಾತಾವರಣ ಇದ್ದರೂ ಸಾಧಾರಣ ಮಳೆ ಸುರಿದಿದೆ. ಉಡುಪಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಭಾನುವಾರ ಬೆಳಗ್ಗೆ ಮಳೆ ಸ್ವಲ್ಪ ಇಳಿಮುಖವಾಗಿದ್ದರೂ, ಸಂಜೆಯ ನಂತರ ಜೋರಾಗಿ ಸುರಿದಿದೆ.ದ.ಕ. ಜಿಲ್ಲೆಯ ಮಂಗಳೂರು ಮತ್ತು ಉಳ್ಳಾಲದಲ್ಲಿ ಎರಡು ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ. ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜೂ.8, 9ರಂದು ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯುವ ಆರೇಂಜ್ ಅಲರ್ಟ್‌ನ್ನು ಹವಾಮಾನ ಇಲಾಖೆ ನೀಡಿದೆ.
ಭಾನುವಾರ ಬೆಳಗ್ಗೆ ಹಾಗೂ ಏರು ಹೊತ್ತಿನ ವೇಳೆಗೆ ಮಂಗಳೂರು ಸೇರಿದಂತೆ ಗ್ರಾಮಾಂತರದ ಬಹುತೇಕ ಕಡೆ ಬಿರುಗಾಳಿ ಸಹಿತ ಮಳೆ ಸುರಿದಿದೆ. ಪುತ್ತೂರು, ಸುಳ್ಯ, ಬೆಳ್ತಂಗಡಿ ಹಾಗೂ ಬಂಟ್ವಾಳದಲ್ಲಿ ಉತ್ತಮ ಮಳೆ ಮುಂದುವರಿದಿದೆ.ಬತ್ತ ನಾಟಿ ಚುರುಕು: ನಿರಂತರವಾಗಿ ಉತ್ತಮ ರೀತಿಯಲ್ಲಿ ಮಳೆಯಾಗುತ್ತಿರುವುದರಿಂದ ಬತ್ತ ಕೃಷಿಕರು ಹರ್ಷಚಿತ್ತರಾಗಿ ಕೃಷಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಜಿಲ್ಲಾದ್ಯಂತ ಬತ್ತ ನಾಟಿ ಕಾರ್ಯ ಈ ವಾರದಿಂದೀಚೆಗೆ ಭರದಿಂದ ಸಾಗಿದೆ.
ಭಾನುವಾರ ಮುಂಜಾನೆ ವರೆಗೆ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 44.10 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಕಾರ್ಕಳ 44.71, ಕುಂದಾಪುರ 52.40, ಉಡುಪಿ 63.20, ಬೈಂದೂರು 29.80, ಬ್ರಹ್ಮಾವರ 49 ಕಾಪು 37.80, ಹೆಬ್ರಿ 44.10 ಮಿ.ಮೀ. ಮಳೆ ಆಗಿದೆ.ಶನಿವಾರ ಬೆಳಗ್ಗಿನಿಂದ ಭಾನುವಾರ ಬೆಳಗ್ಗಿನವರೆಗೆ ದ.ಕ. ಜಿಲ್ಲೆಯಲ್ಲಿ ಸರಾಸರಿ 40.4 ಮಿಮೀ. ಮಳೆ ದಾಖಲಾಗಿದೆ. ಮೂಲ್ಕಿಯಲ್ಲಿ 29.6 ಮಿ.ಮೀ, ಉಳ್ಳಾಲ 42.7 ಮಿ.ಮೀ, ಕಡಬ 27.6 ಮಿ.ಮೀ, ಮೂಡುಬಿದಿರೆ 37.2 ಮಿ.ಮೀ, ಸುಳ್ಯ 41.5 ಮಿ.ಮೀ, ಪುತ್ತೂರು 38 ಮಿ.ಮೀ, ಮಂಗಳೂರು 27.2 ಮಿ.ಮೀ, ಬಂಟ್ವಾಳ 45.3 ಮಿ.ಮೀ, ಬೆಳ್ತಂಗಡಿಯಲ್ಲಿ 49.8 ಮಿ.ಮೀ. ಮಳೆ ಸುರಿದಿದೆ.ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರಮೂಲ್ಕಿ: ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಶನಿವಾರ ರಾತ್ರಿಯಿಂದ ಭಾರಿ ಮಳೆಯಾಗಿದ್ದು, ಗಾಳಿ ಮಳೆಗೆ ಮೂಲ್ಕಿಯ ವಿಜಯ ಕಾಲೇಜ್ ಬಳಿಯ ಇತಿಹಾಸ ಪ್ರಸಿದ್ಧ ಮಾನಸ್ತಂಭ ಬಸದಿ ಬಳಿಯ ಬೃಹತ್ ಗಾತ್ರದ ದೇವದಾರು ಮರ ಬುಡ ಸಮೇತ ವಿದ್ಯುತ್ ಕಂಬ ಹಾಗೂ ಟ್ರಾನ್ಸ್‌ಫಾರ್ಮರ್ ಮೇಲೆ ಬಿದ್ದು ರಸ್ತೆಗೆ ಬಿದ್ದಿದೆ.
ಮರ ಬಿದ್ದ ಕಾರಣ ರಸ್ತೆ ಸಂಚಾರ ಹಾಗೂ ಮೂಲ್ಕಿ ಪರಿಸರದಲ್ಲಿ ವಿದ್ಯುತ್ ಅಸ್ತವ್ಯಸ್ತಗೊಂಡಿತು. ಭಾರಿ ಗಾತ್ರದ ಮರದ ಬಳಿಯಲ್ಲಿದ್ದ ಇತಿಹಾಸ ಪ್ರಸಿದ್ಧ ಮಾನಸ್ತಂಭ ಬಸದಿ ಅಪಾಯದಲ್ಲಿದೆ.ಸ್ಥಳಕ್ಕೆ ಮೂಲ್ಕಿ ನಗರ ಪಂಚಾಯಿತಿ ಅಧಿಕಾರಿಗಳು, ಮೆಸ್ಕಾಂ ಇಲಾಖೆ ಭೇಟಿ ನೀಡಿ ಪರಿಶೀಲಿಸಿದ್ದು, ಜೆಸಿಬಿ ಮೂಲಕ ಮರ ತೆರವುಗೊಳಿಸಲಾಯಿತು. ಅವಘಡದಿಂದಾಗಿ ಮೆಸ್ಕಾಂನ ಮೂರು ವಿದ್ಯುತ್ ಕಂಬ ಹಾಗೂ ಒಂದು ಟ್ರಾನ್ಸ್ ಫಾರ್ಮರ್‌ಗೆ ಹಾನಿಯಾಗಿದೆ. ಸುಮಾರು ಮೂರು ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.