ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲೆಯಾದ್ಯಂತ ಮಂಗಳವಾರ ಕೂಡ ಧಾರಾಕಾರ ಮಳೆ ಮುಂದುವರೆದಿದ್ದು, ಅಪಾರ ಹಾನಿ ಉಂಟಾಗಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ ಸುಮಾರು 9 ಮನೆಗಳಿಗೆ ಹಾನಿಯಾಗಿದೆ.ಸಂಪಾಜೆ ಹೋಬಳಿ ವ್ಯಾಪ್ತಿಯ ಕೊಯನಾಡು ಸರ್ಕಾರಿ ಪ್ರಾಥಮಿಕ ಶಾಲೆಯ ಹಿಂಭಾಗದ ಬರೆ ಕುಸಿದಿದ್ದು, ಶಾಲೆಯ ನಾಲ್ಕು ಕೋಣೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಕೋಣೆಗಳಲ್ಲಿದ್ದ ಪೀಠೋಪಕರಣಗಳು, ಲೇಖನ ಸಾಮಗ್ರಿಗಳು ಹಾಗೂ ಇತರ ಸಾಮಾಗ್ರಿಗಳನ್ನು ಸಾರ್ವಜನಿಕರು, ಶಾಲೆಯ ಸಿಬ್ಬಂದಿ ವರ್ಗದವರು, ಅಗ್ನಿಶಾಮಕ ದಳದ ತಂಡದವರು, ಕಂದಾಯ ಇಲಾಖೆ ಸಿಬ್ಬಂದಿ, ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗದವರು ಹಾಗೂ ಇತರರ ಸಹಕಾರದಿಂದ ಬೇರೆ ಕೋಣೆಗೆ ಸ್ಥಳಾಂತರಿಸಲಾಯಿತು.
ಕೆಲವು ಪೀಠೋಪಕರಣ ಮಣ್ಣಿನಲ್ಲಿ ಸಿಲುಕಿ ಸಂಪೂರ್ಣವಾಗಿ ಹಾಳಾಗಿದೆ. ಮಡಿಕೇರಿ ತಾಲೂಕಿನ ತಹಸೀಲ್ದಾರರಾದ ಪ್ರವೀಣ್ ಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ರಂಗಧಾಮಪ್ಪ, ಕ್ಷೇತ್ರ ಶಿಕ್ಷಣ ಅಧಿಕಾರಿ ದೊಡ್ಡೇಗೌಡ, ನೋಡಲ್ ಅಧಿಕಾರಿ ಹೇಮಂತ್ ಕುಮಾರ್, ಪಿಡಿಒ ಇತರರು ಸ್ಥಳದಲ್ಲಿದ್ದರು.ಮಡಿಕೇರಿ ಹೋಬಳಿ ಕಡಗದಾಳು ಗ್ರಾಮದ ಮುಕ್ಕಾಟೀರ ಬೊಳ್ಳಪ್ಪ ಇವರ ವಾಸದ ಮನೆಯು ಭಾರಿ ಗಾಳಿ- ಮಳೆ ಹೆಚ್ಚಿನ ಹಾನಿಯಾಗಿದ್ದು, ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಸೋಮವಾರಪೇಟೆ ತಾಲೂಕಿನ ಯಡೂರು ಗ್ರಾಮದಲ್ಲಿ ಪೊನ್ನಮ್ಮ ಚಿಯಣ್ಣ ಅವರ ಮನೆ ತೀವ್ರ ಗಾಳಿ ಹಾಗೂ ಮಳೆಯಿಂದ ಮನೆಯ ಮೇಲ್ಚಾವಣಿ ಹಾನಿಯಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು.
ಕುಶಾಲನಗರ ತಾಲೂಕು ಸುಂಟಿಕೊಪ್ಪ ಹೋಬಳಿ ಉಲುಗುಲಿ ಗ್ರಾಮದ ನಿವಾಸಿಯಾದ ಗಂಗಮ್ಮ ಕೋಂ ಅಣ್ಣಪ್ಪ ರವರ ಮನೆ ಮೇಲೆ ಈ ದಿನ ಗಾಳಿ ಮಳೆಯಿಂದ ಮರ ಬಿದ್ದು ಮನೆಯ ಶೀಟು ಹಾನಿಯಾಗಿದೆ. ಶ್ರೀಮಂಗಲ ಹೋಬಳಿ ಕೋತೂರು ಗ್ರಾಮದಲ್ಲಿ ತಡ ರಾತ್ರಿ ಸುರಿದ ಮಳೆಯಿಂದಾಗಿ ಪ್ರವೀಣ, ಮಣಿ, ಜಾನಕಿ ಎಂಬವರ ಮನೆಗಳು ಹಾನಿಯಾಗಿದೆ. ಈ ಸಂಬಂಧ ಮಂಗಳವಾರ ಶ್ರೀಮಂಗಲ ಹೋಬಳಿ ಉಪ ತಹಸೀಲ್ದಾರರು, ಕಂದಾಯ ಪರಿವೀಕ್ಷಕರು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.ಮಡಿಕೇರಿ ಹೋಬಳಿ ಇಬ್ಬನಿವಳವಾಡಿ ಗ್ರಾಮದ ಮಾಲೆರ ಚೀಯಣ್ಣ ಇವರ ವಾಸದ ಮನೆಯು ಭಾರಿ ಗಾಳಿ ಮಳೆಗೆ ಹಾನಿಯಾಗಿದೆ. ಸಂಪಾಜೆ ಹೋಬಳಿಯ ಮದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ತೋಜಿ ಬಳಿ ಹಾನಿಗೊಳಗಾದ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ದುರಸ್ತಿ ಕಾರ್ಯವು ಪ್ರಗತಿಯಲ್ಲಿದೆ.
ಭಾಗಮಂಡಲದಲ್ಲಿ ಕಳೆದೆರಡು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಬಿಎಸ್ಎನ್ಎಲ್ ಟವರ್ ಸ್ಥಗಿತಗೊಂಡಿದ್ದು, ಮೊಬೈಲ್ ನೆಟ್ವರ್ಕ್ ಗಳಿಗೆ ಅಡಚಣೆ ಉಂಟಾಗಿದೆ.ಮಡಿಕೇರಿ ಭಾಗಮಂಡಲ ನಾಪೋಕ್ಲು ಭಾಗಮಂಡಲ ರಸ್ತೆಗಳಲ್ಲಿ ಮರಗಳು ಉರುಳಿ ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ. ಚೆಸ್ಕಾಂ ಮತ್ತು ಲೋಕೋಪಯೋಗಿ ಇಲಾಖೆಯಿಂದ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಬ್ರಹ್ಮಗಿರಿ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಮಳೆಯ ಪ್ರಮಾಣ ಹೆಚ್ಚಾದರೆ ಇನ್ನೆರಡು ಗಂಟೆಗಳಲ್ಲಿ ಭಾಗಮಂಡಲಕ್ಕೆ ಸಂಪರ್ಕ ಕಡಿತುಕೊಳ್ಳುವ ಸಾಧ್ಯತೆ ಇದೆ. ಐದು ಕೋಟಿ ವೆಚ್ಚದಲ್ಲಿ ತ್ರಿವೇಣಿ ಸಂಗಮದಲ್ಲಿ ಅಭಿವೃದ್ಧಿಪಡಿಸಲಾದ ಉದ್ಯಾನವನ ಮತ್ತೊಮ್ಮೆ ಮುಳುಗಡೆಯಾಗಿದೆ. ಕೋಟಿ ಹಣ ನೀರುಪಾಲು ಆಗುವ ಸಂಭವವಿದೆ.