ಭೋವಿ ಸಮುದಾಯದ ಪಾರಂಪರಿಕ ಕುಲಕಸುಬಾದ ಕಟ್ಟಡ ಕಲ್ಲು ಗಣಿಗಾರಿಕೆಯನ್ನು ಪುನರ್ ಆರಂಭಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ 15 ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಅಹೋರಾತ್ರಿ ಧರಣಿ ತೀವ್ರತೆಯನ್ನು ಪಡೆದುಕೊಂಡಿದೆ. ಮಂಗಳವಾರ ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದಲ್ಲಿ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಧರಣಿ ನಿರತರು ಜೋರಾಗಿ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಶಾಸಕರು ಹಾಗೂ ಮಾಜಿ ಸಚಿವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವಿ ಆಲಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಭೋವಿ ಸಮುದಾಯದ ಪಾರಂಪರಿಕ ಕುಲಕಸುಬಾದ ಕಟ್ಟಡ ಕಲ್ಲು ಗಣಿಗಾರಿಕೆಯನ್ನು ಪುನರ್ ಆರಂಭಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ 15 ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಅಹೋರಾತ್ರಿ ಧರಣಿ ತೀವ್ರತೆಯನ್ನು ಪಡೆದುಕೊಂಡಿದೆ. ಮಂಗಳವಾರ ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದಲ್ಲಿ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಧರಣಿ ನಿರತರು ಜೋರಾಗಿ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಶಾಸಕರು ಹಾಗೂ ಮಾಜಿ ಸಚಿವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವಿ ಆಲಿಸಿದರು.ಡಾ. ಬಾಬಾಸಾಹೇಬ್ ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೆರವಣಿಗೆಗೆ ಸಿದ್ಧತೆ ನಡೆಸಲಾಗಿತ್ತು. ಈ ವೇಳೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಶಾಸಕ ಎಚ್. ಪಿ. ಸ್ವರೂಪ್ ಹಾಗೂ ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಅವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಲು ಆಗಮಿಸಿದಾಗ, ಧರಣಿನಿರತರು ತಮ್ಮ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ನೀಡುವಂತೆ ಘೋಷಣೆ ಕೂಗಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದರೂ, ನಂತರ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ಸಮತೋಲನಗೊಳಿಸಿದರು.ಭೋವಿ ಸಮುದಾಯದವರು ತಮ್ಮ ಅಸಮಾಧಾನ ವ್ಯಕ್ತಪಡಿಸಿ, ``ಕಲ್ಲು ಹೊಡೆಯುವುದು ನಮ್ಮ ಪಾರಂಪರಿಕ ಕುಲಕಸುಬು. ಪೀಳಿಗೆಗಳಿಂದ ಈ ಉದ್ಯೋಗವನ್ನೇ ಅವಲಂಬಿಸಿಕೊಂಡು ಬದುಕು ನಡೆಸುತ್ತಿದ್ದೇವೆ. ಆದರೆ ಇತ್ತೀಚೆಗೆ ಗಣಿಗಾರಿಕೆ ಸ್ಥಗಿತಗೊಂಡ ಪರಿಣಾಮ ನೂರಾರು ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ದಿನನಿತ್ಯದ ಬದುಕು ಸಾಗಿಸಲು ಸಹ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣವೇ ಗಣಿಗಾರಿಕೆಯನ್ನು ಪುನರ್ ಆರಂಭಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಆಲೂರು ತಾಲೂಕಿನ ಕೆ. ಹೊಸಕೋಟೆ ಹೋಬಳಿ ವ್ಯಾಪ್ತಿಯ ವೈ.ಎನ್.ಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಸುಮಾರು 250 ರಿಂದ 300 ಮಂದಿ ಭೋವಿ ಸಮುದಾಯದವರು ಮಗ್ಗೆ ಗ್ರಾಮದ ಸರ್ವೆ ನಂ.151ರ ಸರ್ಕಾರಿ ಗೋಮಾಳದ ಸುಮಾರು 3 ಎಕರೆ ಪ್ರದೇಶದಲ್ಲಿ ಕಳೆದ ಅನೇಕ ವರ್ಷಗಳಿಂದ ಗಣಿಗಾರಿಕೆ ನಡೆಸುತ್ತಿದ್ದರು. ಸುಮಾರು ೨೦ ವರ್ಷಗಳ ಗುತ್ತಿಗೆಯಡಿ 60ರಿಂದ 70 ಮಂದಿ ಕಾರ್ಮಿಕರು ಸುತ್ತಿಗೆ, ಹುಳಿ, ಚಮಟಿ ಮುಂತಾದ ಸಾಂಪ್ರದಾಯಿಕ ಉಪಕರಣಗಳನ್ನು ಬಳಸಿ ಶ್ರಮಪೂರ್ಣವಾಗಿ ಕಲ್ಲು ಒಡೆದು ಜೀವನ ಸಾಗಿಸುತ್ತಿದ್ದರು. ಈ ಉದ್ಯೋಗದ ಮೇಲೆ ನೇರವಾಗಿ ೬೦ಕ್ಕೂ ಹೆಚ್ಚು ಕಾರ್ಮಿಕರು ಅವಲಂಬಿತರಾಗಿದ್ದರೆ, ಪರೋಕ್ಷವಾಗಿ 200ರಿಂದ 250ಕ್ಕೂ ಹೆಚ್ಚು ಕುಟುಂಬಗಳ ಬದುಕು ಇದರ ಮೇಲೆ ನಿಂತಿದೆ. ಮಕ್ಕಳ ಶಿಕ್ಷಣ, ಆರೋಗ್ಯ, ಕುಟುಂಬದ ದೈನಂದಿನ ವೆಚ್ಚಗಳು ಸೇರಿದಂತೆ ಎಲ್ಲವೂ ಈ ಉದ್ಯೋಗದ ಮೇಲೆಯೇ ನಿರ್ಭರವಾಗಿರುವುದರಿಂದ ಗಣಿಗಾರಿಕೆ ನಿಲ್ಲುವಿಕೆ ಭಾರೀ ಹೊಡೆತ ನೀಡಿದೆ. ಹೆಚ್ಚಿನವರಿಗೆ ಸ್ವಂತ ಕೃಷಿಭೂಮಿ ಇಲ್ಲದ ಕಾರಣ ಬೇರೆ ಉದ್ಯೋಗಗಳೂ ಲಭ್ಯವಾಗುತ್ತಿಲ್ಲ ಎಂದು ಭೋವಿ ಸಂಘದ ರಾಜ್ಯಾಧ್ಯಕ್ಷ ಹೆಚ್. ಮಂಜೇಶ್ ವಿವರಿಸಿದರು.ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿ, ಸಾರ್ವಜನಿಕರಿಂದ ಕೆಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸುವುದು ಅನಿವಾರ್ಯವಾಗಿದೆ. ಮನೆಗಳ ಗೋಡೆಗಳಿಗೆ ಬಿರುಕು ಬಿದ್ದಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಅದು ಗಣಿಗಾರಿಕೆಯಿಂದ ಉಂಟಾಗಿದೆಯೇ ಅಥವಾ ಬೇರೆ ಕಾರಣಗಳಿವೆಯೇ ಎಂಬುದನ್ನು ತಾಂತ್ರಿಕವಾಗಿ ಪರಿಶೀಲಿಸಬೇಕು. ಕೇವಲ ದೂರು ಬಂದ ತಕ್ಷಣ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ನ್ಯಾಯಸಮ್ಮತ ಮತ್ತು ಕಾನೂನುಬದ್ಧವಾಗಿ ನಿರ್ಧಾರ ಕೈಗೊಳ್ಳುವುದು ನಮ್ಮ ಜವಾಬ್ದಾರಿ. ಒಂದು ಕಡೆ ಗಣಿಗಾರಿಕೆಯಿಂದ ಜೀವನ ನಡೆಸುತ್ತಿರುವವರ ಸಮಸ್ಯೆಯಿದ್ದರೆ, ಮತ್ತೊಂದು ಕಡೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ದೂರುಗಳಿವೆ. ಎರಡೂ ಕಡೆಯವರ ಅಭಿಪ್ರಾಯಗಳನ್ನು ಪರಿಗಣಿಸಿ ಸಮಗ್ರ ತನಿಖೆ ನಡೆಸಲಾಗುತ್ತದೆ. ತಾಂತ್ರಿಕ ವರದಿ ಬಂದ ನಂತರವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಶಾಸಕರು ಹಾಗೂ ಮಾಜಿ ಸಚಿವರೂ ಪ್ರತಿಭಟನಾಕಾರರ ಮನವಿ ಆಲಿಸಿ, ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.ಧರಣಿ ಮುಂದುವರಿದರೆ ಸರ್ಕಾರದ ಗಮನ ಸೆಳೆಯುವ ಸಾಧ್ಯತೆ ಹೆಚ್ಚಿದ್ದು, ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ದೊರಕಬೇಕು ಎಂಬುದು ಪ್ರತಿಭಟನಾಕಾರರ ನಿರೀಕ್ಷೆಯಾಗಿದೆ. ಧರಣಿಯಲ್ಲಿ ಭೋವಿ ಅಭಿವೃದ್ಧಿ ನಿಗಮದ ಸೇತುರಾಮು, ಲತಾ, ಕಲ್ಲು ಕುಟಕರ ಸಂಘದ ಮಹಾದೇವ್, ನಂದೀಶ್, ಆರ್ಮುಗ್, ಸರೋಜ, ಅಂಬಿಕಾ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಜೊತೆಗೆ ದಲಿತ ಮುಖಂಡರಾದ ಹೆಚ್.ಕೆ. ಸಂದೇಶ್, ಕೃಷ್ಣದಾಸ್ , ರಾಜಶೇಖರ್, ಹೆತ್ತೂರು ನಾಗರಾಜ್, ಶಾಂತಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.