ರಾಮನಗರ: ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ನೀವು ನಿಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದೀರಿ. ಈಗ ನೀವು ಎಷ್ಟು ದೊಡ್ಡ ಕನಸು ಕಾಣುತ್ತೀರೊ ಅಷ್ಟು ಹೆಚ್ಚು ಗುರಿ ಸಾಧಿಸಲು ಪ್ರೇರೇಪಿಸುತ್ತದೆ. ಅದು ಸಾಕಾರಗೊಳ್ಳಲು ನಿರಂತರ ಪರಿಶ್ರಮ ಅಗತ್ಯ ಎಂದು ಗೌಸಿಯಾ ತಾಂತ್ರಿಕ ಮತ್ತು ಎಂಜಿನಿಯರಿಂಗ್ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಉಮರ್ ಇಸ್ಮಾಯಿಲ್ ಖಾನ್ ಕಿವಿಮಾತು ಹೇಳಿದರು
ರಾಮನಗರ: ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ನೀವು ನಿಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದೀರಿ. ಈಗ ನೀವು ಎಷ್ಟು ದೊಡ್ಡ ಕನಸು ಕಾಣುತ್ತೀರೊ ಅಷ್ಟು ಹೆಚ್ಚು ಗುರಿ ಸಾಧಿಸಲು ಪ್ರೇರೇಪಿಸುತ್ತದೆ. ಅದು ಸಾಕಾರಗೊಳ್ಳಲು ನಿರಂತರ ಪರಿಶ್ರಮ ಅಗತ್ಯ ಎಂದು ಗೌಸಿಯಾ ತಾಂತ್ರಿಕ ಮತ್ತು ಎಂಜಿನಿಯರಿಂಗ್ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಉಮರ್ ಇಸ್ಮಾಯಿಲ್ ಖಾನ್ ಕಿವಿಮಾತು ಹೇಳಿದರು.
ನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಜಿಲ್ಲೆಯ ಪಿಯುಸಿ ಕಾಲೇಜುಗಳ 60ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಅತಿಯಾದ ಆತ್ಮವಿಶ್ವಾಸ, ಅಹಂಕಾರ, ನಿರ್ಲಕ್ಷ್ಯ ಮನೋಭಾವ ಬಿಟ್ಟು ವ್ಯಾಸಂಗದಲ್ಲಿ ನಿರಂತರ ಪರಿಶ್ರಮ ಇರಬೇಕು. ಆಗ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದರು.ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದೇನೆ. ಭವಿಷ್ಯದ ಪರೀಕ್ಷೆಗಳನ್ನು ಚೆನ್ನಾಗಿ ಮಾಡುತ್ತೇನೆ ಎಂಬ ಅತಿಯಾದ ಆತ್ಮವಿಶ್ವಾಸ ಹೊಂದುವುದು ಬೇಡ. ನೀವು ಶ್ರಮಪಟ್ಟಿರಬಹುದು, ಅದೃಷ್ಟವೂ ಇರಬಹುದು. ಆದರೆ, ಅತಿಯಾದ ಆತ್ಮವಿಶ್ವಾಸ ನಿಮ್ಮನ್ನು ಹಾಳುಮಾಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಯಾವಾಗಲು ನಿಯಮಿತವಾಗಿ ಹಾಗೂ ವಿನಯದಿಂದ ಇರಬೇಕು ಎಂದು ಕಿವಿಮಾತು ಹೇಳಿದರು.
ಜೀವನದಲ್ಲಿ ಗುರಿ ಇಟ್ಟುಕೊಂಡು ಮುನ್ನಡೆಯಿರಿ:ವಿದ್ಯಾರ್ಥಿಗಳು ಪ್ರಾಮಾಣಿಕತೆ ಮತ್ತು ಸತ್ಯದ ದಾರಿಯಲ್ಲಿ ಸಾಗಬೇಕು. ನೀವು ಪ್ರಾಮಾಣಿಕತೆಯಿಂದ ಪರಿಶ್ರಮಪಟ್ಟು ಈ ಸಾಧನೆ ಮಾಡಿದ್ದೀರಿ. ಅದನ್ನು ಜೀವನದಲ್ಲಿಯೂ ಮುಂದುವರೆಸಬೇಕು. ಕೆಲವರು ಮೋಸ ಮಾಡಿ ಜೀವನದಲ್ಲಿ ಮುಂದೆ ಹೋಗುತ್ತಿರುವಂತೆ ಕಾಣಬಹುದು. ಆದರೆ, ಅದು ಎಂದಿಗೂ ಶಾಶ್ವತವಲ್ಲ. ಸಾಧನೆಗೆ ಶ್ರಮ, ಪ್ರಾಮಾಣಿಕತೆ, ಸತ್ಯ, ಸಮಯಪಾಲನೆ ಮುಂತಾದ ಜೀವನದ ಮೌಲ್ಯಗಳನ್ನು ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಭೂತಕಾಲದಲ್ಲಿ ಆಗಿದೆ, ಭವಿಷ್ಯದಲ್ಲಿಯೂ ಆಗುತ್ತದೆ ಎಂದು ಯಾವುದನ್ನೂ ಲಘುವಾಗಿ ತೆಗೆದುಕೊಳ್ಳಬಾರದು. ಏಕೆಂದರೆ ನಿರ್ಲಕ್ಷ್ಯವೂ ಹೆಚ್ಚು ಅಪಾಯಕಾರಿ. ಪದವಿ ಶಿಕ್ಷಣ ಮುಗಿಯುವವರೆಗೂ ಪ್ರತಿದಿನವೂ ಓದಿನ ಮೇಲೆ ಗಮನ ಹರಿಸಬೇಕು. ನಿಮ್ಮ ಶಿಕ್ಷಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.ಜೀವನದಲ್ಲಿ ಗುರಿ ಇಟ್ಟುಕೊಂಡು ಮುನ್ನಡೆಯಬೇಕು. ಏಕೆಂದರೆ ಗುರಿ ಸಾಧನೆಗೆ ಪ್ರೇರಣೆ ಮೂಡಿಸುತ್ತದೆ. ಈಗ ಹೆಚ್ಚು ಅಂಕ ಗಳಿಸಲು ಮಾಡಿದ ಶ್ರಮವನ್ನು ಜೀವನ ಪರ್ಯಂತ ಮುಂದುವರೆಸಿದರೆ ಮಹಾನ್ ಎಂಜಿನಿಯರ್, ಮಹಾನ್ ವಿಜ್ಞಾನಿಗಳಾಗಬಹುದು. ಇಲ್ಲವೆ ಐಎಎಸ್, ಐಪಿಎಸ್ ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಿ ಒಳ್ಳೆಯ ಆಡಳಿತಗಾರರಾಗುತ್ತೀರಿ ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ವಿದ್ಯಾರ್ಥಿಗಳು ದೇವರು, ಪೋಷಕರು ಹಾಗೂ ಶಿಕ್ಷಕರಿಗೆ ಕೃತಜ್ಞರಾಗಿರಬೇಕು. ಏಕೆಂದರೆ ನಿಮ್ಮ ಪೋಷಕರು ಮಧ್ಯಮ ಮತ್ತು ಬಡ ವರ್ಗಕ್ಕೆ ಸೇರಿದವರಿದ್ದಾರೆ. ಅವರು ಯಾರೂ ಅಡ್ಡಿಯಾಗದೆ ನಿಮ್ಮ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಆದ್ದರಿಂದ ಮೊದಲು ನಿಮ್ಮ ಪೋಷಕರಿಗೆ ನೀವು ತುಂಬಾ ಕೃತಜ್ಞರಾಗಿರಿ, ಅವರ ಆಶೀರ್ವಾದ ನಿಮ್ಮೊಂದಿಗಿದ್ದರೆ ಸಂತೋಷವಾಗಿರುತ್ತೀರಿ ಎಂದು ಹೇಳಿದರು.ಭಾರತ ಹಿಂದುಳಿಯುತ್ತಿದೆ ಎಂಬ ರೀತಿಯ ಸುದ್ದಿಗಳನ್ನು ನೋಡಿ ಚಿಂತಿಸಬೇಡಿ. ಅಂಥದ್ದೇನೂ ನಡೆಯುತ್ತಿಲ್ಲ. ವಾಸ್ತವವಾಗಿ ಭಾರತ ತುಂಬಾ ಚೆನ್ನಾಗಿ ಅಭಿವೃದ್ಧಿ ಹೊಂದುತ್ತಿದೆ. ಹಿಂದೆ ಉದ್ಯೋಗಕ್ಕಾಗಿ ವಿದೇಶಗಳಿಗೆ ಹೋಗುತ್ತಿದ್ದವರು ಈಗ ಹಿಂದಿರುಗಿ ಭಾರತದಲ್ಲೇ ಅವಕಾಶಗಳನ್ನು ಹುಡುಕುತ್ತಿದ್ದಾರೆ. ಹೀಗಾಗಿ ವಿದ್ಯಾಭ್ಯಾಸದ ನಂತರ ಭಾರತದಲ್ಲೇ ನಿಮ್ಮ ವೃತ್ತಿ ಮುಂದುವರೆಯಲಿ ಎಂದು ಉಮರ್ ಇಸ್ಮಾಯಿಲ್ ಖಾನ್ ಶುಭ ಹಾರೈಸಿದರು.
ಸಮಾರಂಭವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಮರಿಸ್ವಾಮಿ ಉದ್ಘಾಟಿಸಿದರು. ಜಿಲ್ಲೆಯ ಖಾಸಗಿ, ಸರ್ಕಾರಿ ಪಿಯು ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆಯಾಯ ಕಾಲೇಜುಗಳ ಮಟ್ಟದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಮೊದಲ ಇಬ್ಬರು ವಿದ್ಯಾರ್ಥಿಗಳಂತೆ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಗೌರವಿಸಲಾಯಿತು.ಗೌಸಿಯಾ ತಾಂತ್ರಿಕ ಮತ್ತು ಎಂಜಿನಿಯರಿಂಗ್ ಟ್ರಸ್ಟ್‌ನ ಅಧ್ಯಕ್ಷ ನವಾಜ್ ಎ ಷರೀಫ್, ಗೌಸಿಯಾ ಪಿಯು ಕಾಲೇಜು ವಿಭಾಗದ ಪ್ರಾಂಶುಪಾಲ ಪ್ರೊ.ನಜ್ರುಲ್ಲಾ ಖಾನ್, ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಕುಮಾರ್, ಆಡಳಿತಾಧಿಕಾರಿ ಏಜಾಜ್ ಅಹಮದ್ ಮತ್ತಿತರರು ಉಪಸ್ಥಿತರಿದ್ದರು.
ಕೋಟ್ .............ವಿಜ್ಞಾನ ವಿಭಾಗದಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಕಾಡುವುದು ಸಹಜ. ನೀವು ವೈದ್ಯಕೀಯ, ಎಂಜಿನಿಯರಿಂಗ್ ಅಥವಾ ವಿಜ್ಞಾನ ಕ್ಷೇತ್ರದಲ್ಲಿ ಮುಂದುವರೆಯಬೇಕಿದೆ. ನಿಮಗೆ ಸೂಕ್ತವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಶ್ರಮ ವಹಿಸಿ. ನೀವು ಪ್ರಾಮಾಣಿಕ ಮತ್ತು ಸತ್ಯನಿಷ್ಠರಾಗಿದ್ದರೆ ಸಮಾಜ ಗೌರವಿಸುತ್ತದೆ. ಯಾರೂ ನಿಮ್ಮನ್ನು ದ್ವೇಷಿಸುವುದಿಲ್ಲ.
-ಉಮರ್ ಇಸ್ಮಾಯಿಲ್ ಖಾನ್, ಗೌರವ ಕಾರ್ಯದರ್ಶಿ, ಗೌಸಿಯಾ ತಾಂತ್ರಿಕ ಮತ್ತು ಎಂಜಿನಿಯರಿಂಗ್ ಟ್ರಸ್ಟ್9ಕೆಆರ್ ಎಂಎನ್ 1.ಜೆಪಿಜಿ
ರಾಮನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಜಿಲ್ಲೆಯ ಪಿಯುಸಿ ಕಾಲೇಜುಗಳ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಮರಿಸ್ವಾಮಿ, ಗೌಸಿಯಾ ತಾಂತ್ರಿಕ ಮತ್ತು ಎಂಜಿನಿಯರಿಂಗ್ ಟ್ರಸ್ಟ್ ಅಧ್ಯಕ್ಷ ನವಾಜ್ ಎ ಷರೀಫ್ , ಗೌರವ ಕಾರ್ಯದರ್ಶಿ ಉಮರ್ ಇಸ್ಮಾಯಿಲ್ ಖಾನ್, ಪ್ರಾಂಶುಪಾಲರಾದ ಪ್ರೊ.ನಜ್ರುಲ್ಲಾ ಖಾನ್, ಡಾ.ಎನ್.ಕುಮಾರ್, ಆಡಳಿತಾಧಿಕಾರಿ ಏಜಾಜ್ ಅಹಮದ್ ಇತರರಿದ್ದರು.