ಸಾರಾಂಶ
ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಿ ಕ್ಷೇತ್ರವನ್ನು ಅಭಿವೃಧ್ದಿಪಡಿಸಲಾಗುವುದು.
ಹಗರಿಬೊಮ್ಮನಹಳ್ಳಿ: ಜನಸಾಮಾನ್ಯರಿಗೆ ಸರ್ಕಾರಿ ಸೌಲಭ್ಯಗಳು ವಿಳಂಬವಾಗದಂತೆ ಅಧಿಕಾರಿಗಳು ನಿಗಾವಹಿಸಿ ತಲುಪಿಸುವ ಕೆಲಸ ಮಾಡಬೇಕು ಎಂದು ಶಾಸಕ ಕೆ.ನೇಮರಾಜನಾಯ್ಕ ಹೇಳಿದರು.
ಪಟ್ಟಣದ ಸರಕಾರಿ ಕಾಲೇಜು ಮೈದಾನದಲ್ಲಿ ಉತ್ಥಾನ ಕಾರ್ಯಕ್ರಮದಡಿ ಕ್ಷೇತ್ರದ ವಿವಿಧ ಫಲಾನುಭವಿಗಳಿಗೆ ಸರಕಾರಿ ಸೌಲಭ್ಯಗಳನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಿ ಕ್ಷೇತ್ರವನ್ನು ಅಭಿವೃಧ್ದಿಪಡಿಸಲಾಗುವುದು. ಸಾರ್ವಜನಿಕರ ಕಚೇರಿ ಅಲೆದಾಟ ತಪ್ಪಬೇಕು ಎಂದರೆ ಅಧಿಕಾರಿಗಳು ಪ್ರಾಮಾಣಿಕವಾಗಿ ಸೇವೆಯಲ್ಲಿ ತೊಡಗಬೇಕು. ಶೀಘ್ರದಲ್ಲಿ ಸರ್ಕಾರಿ ಭೂಮಿಯನ್ನು ಪತ್ತೆಹಚ್ಚಿ ಬಡ ನಿರ್ಗತಿಕರಿಗೆ ನಿವೇಶನ ಕೊಡಲಾಗುವುದು. ಕ್ಷೇತ್ರದ ಕಟ್ಟಕಡೆಯ ವ್ಯಕ್ತಿ ಆಶೀರ್ವದಿಸಿದ್ದರಿಂದ ನನಗೆ ಅಧಿಕಾರ ಸಿಕ್ಕಿದೆ. ಅವರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಋಣ ತೀರಿಸುತ್ತೇನೆ. ಮಾಜಿ ಸಿಎಂ ಕುಮಾರಸ್ವಾಮಿ ಈಗ ಕೇಂದ್ರ ಸಚಿವರಾಗಿದ್ದು, ನಮ್ಮ ಕ್ಷೇತ್ರದಲ್ಲಿನ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ಒತ್ತಾಯಿಸಲಾಗುವುದು. ಕ್ಷೇತ್ರದ ಜನತೆ ನನ್ನನ್ನು ಇಷ್ಟಪಟ್ಟು ಆಯ್ಕೆ ಮಾಡಿದ್ದಾರೆ, ಅವರ ಕೆಲಸದಲ್ಲಿ ನಿರಂತರ ತೊಡಗಿ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.ಸರ್ಕಾರಿ ಸೌಲಭ್ಯ ವಿತರಣೆ:
ಇದೇ ವೇಳೆ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಕಿಟ್, ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರದಿಂದ ನೀಡಲಾದ ಮೊಬೈಲ್ ಸೇರಿದಂತೆ ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರ ನಿಗಮ, ಕೈಗಾರಿಕೆ, ಕೃಷಿ ಇಲಾಖೆ ಸೇರಿ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಮತ್ತು ಆದೇಶ ಪ್ರತಿಗಳನ್ನು ವಿತರಣೆ ಮಾಡಲಾಯಿತು.ಈ ಸಂಧರ್ಭದಲ್ಲಿ ತಹಶಿಲ್ದಾರ್ ಚಂದ್ರಶೇಖರ ಶಂಭಣ್ಣ ಗಾಳಿ, ತಾಪಂ ಇಒ ಡಾ.ಜಿ.ಪರಮೇಶ್ವರ, ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆಂಜನೇಯ ಹುಲ್ಲಾಳ, ಸಿಡಿಪಿಒ ಸಿಂಧು ಅಂಗಡಿ, ಟಿಎಚ್‌ಒ ಶಿವರಾಜ್, ಪುರಸಭೆ ಸದಸ್ಯ ಗಂಗಣ್ಣ, ಬದಾಮಿ ಮೃತ್ಯುಂಜಯ, ಪಿ.ಸೂರ್ಯಬಾಬು, ಚಿತ್ತವಾಡ್ಗಿ ಪ್ರಕಾಶ್, ಕೆ.ರೋಹಿತ್, ವೈ.ಮಲ್ಲಿಕಾರ್ಜುನ, ಸರ್ಧಾರ್ ಯಮನೂರಪ್ಪ ಇತರರಿದ್ದರು. ಕಾರ್ಯಕ್ರಮವನ್ನು ಶಾಸಕರ ಆಪ್ತ ಸಹಾಯಕ ದೊಡ್ಡಬಸಪ್ಪರೆಡ್ಡಿ, ಶಿಕ್ಷಕ ಶಿವಶಂಕ್ರಯ್ಯ ನಿರ್ವಹಿಸಿದರು.