ಕನ್ನಡಪ್ರಭವಾರ್ತೆ,ಮಧುಗಿರಿ

ಗ್ರಾಮೀಣ ಪ್ರದೇಶದಲ್ಲಿ ಪ್ರಗತಿಗೆ ಪೂರಕವಾಗಿ ನಿರಂತರ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಉಪ ಸ್ಥಾವರ ಅತ್ಯವಶ್ಯವಾಗಿವೆ ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.

ತಾಲೂಕಿನ ಮಿಡಿಗೇಶಿ ಹೋಬಳಿ ಬ್ರಹ್ಮದೇವರಹಳ್ಳಿ-ಕತ್ತಿರಾಜನಹಳ್ಳಿ ಸಮೀಪ 66/11 ಉಪಸ್ಥಾವರ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ರೈತರಿಗೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಸಮಪ್ರಕವಾಗಿ ವಿದ್ಯುತ್ ಸರಬರಾಜು ಮಾಡಬೇಕು ಎಂಬ ಸದುದ್ದೇಶದಿಂದ ಕಂದಾಯ ಇಲಾಖೆ ಹಾಗೂ ಇತರೆ ಇಲಾಖೆಗಳ ಸಹಕಾರದಿಂದ ಈ ಉಪ ಸ್ಥಾವರ ನಿರ್ಮಿಸಲಾಗುತ್ತಿದೆ. ಅಧಿಕಾರಿಗಳು ಈ ಕಾಮಗಾರಿಯನ್ನು ಆದಷ್ಟು ಬೇಗ ಗುಣಮಟ್ಟಕ್ಕೆ ಆದ್ಯತೆ ನೀಡಿ ಪೂರ್ಣಗೊಳಿಸುವಂತೆ ಸಲಹೆ ನೀಡಿದರು. ಈಗಾಗಲೇ ಗರಣಿ ಗ್ರಾಮದಲ್ಲಿ ಉಪಸ್ಥಾವರ ಪೂರ್ಣಗೊಂಡಿದ್ದು ಶೀಘ್ರದಲ್ಲೇ ಲೋಕಾರ್ಪಣೆ ಗೊಳ್ಳಲಿದೆ. 9 ತಿಂಗಳ ಅವಧಿಯಲ್ಲಿ ಈ ಕಾಮಗಾರಿ ಮುಗಿಸುತ್ತೇವೆಂದು ಗುತ್ತಿಗೆದಾರರು ಮತ್ತು ಅಧಿಕಾರಿಗಳು ತಿಳಿಸಿದ್ದು,ಅದರಂತೆ ಅವಧಿಯ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದರು.

ಕೆಪಿಟಿಸಿಎಲ್ ಬೃಹತ್ ಕಾಮಗಾರಿ ವಿಭಾಗ ಎಂಜಿನಿಯರ್ ಸೈಯದ್ ಮಹಮದ್ ಮಾತನಾಡಿ, ರೈತರ ಕೃಷಿ ಚಟುವಟಿಕೆಗಳಿಗೆ ನಿರಂತರವಾಗಿ 7 ಗಂಟೆ ವಿದ್ಯುತ್ ಪೂರೈಸಲು ಇಂತಹ ಉಪಸ್ಥಾವರಗಳ ಅವಶ್ಯಕತೆಯಿದೆ. ಈ ವಿಚಾರದಲ್ಲಿ ಶಾಸಕರು ಈ ಭಾಗದ ಜನತೆಗೆ ಅನುಕೂಲವಾಗಲೆಂದು ಉಪಸ್ಥಾವರ ಕಾಮಗಾರಿ ಮಂಜೂರು ಮಾಡಿಸಿದ್ದಾರೆ.ಅಲ್ಲದೆ ಇದು ರೈತರ ಹಸಿವು ನೀಗಿಸುವ ಕೆಲಸವಾಗಿದೆ ಎಂದರು.


ಬೆಸ್ಕಾಂ ಉಪವಿಭಾಗದ ಇಇ ಜಗದೀಶ್ ಮಾತನಾಡಿ ಈ ಭಾಗದಲ್ಲಿ ವಿದ್ಯುತ್ ಸ್ಥಾವರದ ಅವಶ್ಯಕತೆಯಿತ್ತು. ಶಾಸಕರ ನೇತೃತ್ವದಲ್ಲಿ ಕಾಮಗಾರಿ ಪ್ರಾರಂಭವಾಗಿದ್ದು, ಶೀಘ್ರ ಪೂರ್ಣಗೊಳಿಸಿ 8 ಕೋಟಿ ರು.ವೆಚ್ಚದ ಬೆಸ್ಕಾಂ ಉಪವಿಭಾಗ ಕಚೇರಿ ಸೇರಿದಂತೆ ಇಲಾಖೆಯ ಹತ್ತಾರು ಕೆಲಸಗಳನ್ನು ಶಾಸಕರು ಮುತುವರ್ಜಿ ವಹಿಸಿ ಮಂಜೂರು ಮಾಡಿದ್ದು ಶಾಸಕರಿಗೆ ಕೃತಜ್ಞತತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ ಜಿಲ್ಲಾ ಗ್ಯಾರಂಟಿ ಯೋಜನಗಳ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಗೌಡ,ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್ ಶ್ರೀನಿವಾಸ್,ಇಓ ಲಕ್ಷ್ಮಣ್,ಎಡಿಓ ಧನಂಜಯ್,ಕೆಪಿಸಿಸಿ ಸದಸ್ಯ ರಂಗಶ್ಯಾಮಣ್ಣ ಇತರರಿದ್ದರು.