ಬೆಳ್ತಂಗಡಿ ತಾಲೂಕಲ್ಲಿ ಅವ್ಯಾಹತ ವರ್ಷಧಾರೆಗೆ ಸಂಕಷ್ಟಗಳ ಸುರಿಮಳೆ

| Published : Aug 02 2024, 12:59 AM IST

ಸಾರಾಂಶ

ಮುಂಡೂರು ಗ್ರಾಮದ ಮುಂಗುಡಮೆ ಸೀತಾರಾಮ ಆಚಾರ್ಯ ಎಂಬವರ ಮನೆಯ ಬಳಿ ಗುಡ್ಡ ಕುಸಿದಿದ್ದು ಮನೆಗೆ ಹಾನಿಯಾಗಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಪಶ್ಚಿಮಘಟ್ಟದಲ್ಲಿ ಹುಟ್ಟುವ ಫಲ್ಗುಣಿಯು ಅಳದಂಗಡಿ ಮೂಲಕ ಹಾಗೂ ಪಶ್ಚಿಮಘಟ್ಟದಲ್ಲಿ ಹುಟ್ಟುವ ಇನ್ನೊಂದು ಹೊಳೆ ಸುಲ್ಕೇರಿ ಮೂಲಕ ಹರಿದು ನಿಟ್ಟಡೆ ಗ್ರಾಮದ ಫಂಡಿಜೆ ಎಂಬಲ್ಲಿ ಸೇರುವುದರಿಂದ ಬುಧವಾರದ ರಾತ್ರಿ ಸುರಿದ ಭಾರಿ ಮಳೆಗೆ ಪ್ರವಾಹ ರೂಪ ತಾಳಿದೆ.

ರಾತ್ರಿಯಿಡೀ ಸುರಿದ ಅವ್ಯಾಹತ ಮಳೆಯಿಂದಾಗಿ ನದಿದಡದಲ್ಲಿದ್ದ ಸುಮಾರು 10ಕ್ಕೂ ಹೆಚ್ಚು ನೀರಾವರಿ ಪಂಪುಗಳು ಪ್ರವಾಹದಲ್ಲಿ ಮುಳುಗಿವೆ. ಅಡಕೆ ತೋಟಗಳು ಜಲಾವೃತವಾಗಿದ್ದು ಕೆಲವೆಡೆ ಮರಳು, ಇನ್ನು ಕೆಲವಡೆ ಚೌಗು ಮಣ್ಣು ಶೇಖರಣೆಯಾಗಿದೆ. ಕೆಲವು ತೋಟಗಳು ಗುಡಿಸಿದಂತೆ ಸ್ವಚ್ಛವಾಗಿದ್ದು, ಪ್ರವಾಹದ ತೀವ್ರತೆ ಸಾಕ್ಷಿಯಾಯಿತು. ಕೃಷಿಉಪಕರಣಗಳು ನೀರುಪಾಲಾಗಿವೆ. ಬುಧವಾರ ರಾತ್ರಿಯಿಡಿ ಗ್ರಾಮಸ್ಥರು ನಿದ್ರೆಯಿಲ್ಲದೆ ಕಳೆದಿದ್ದಾರೆ. 1974ರಲ್ಲಿ ಇಂತಹ ಸ್ಥಿತಿ ಉಂಟಾಗಿತ್ತು ಎಂದು ಗ್ರಾಮಸ್ಥರು ಹೇಳುತ್ತಾರೆ. ಪಣಕಜೆಯ ಅರ್ಕಜೆ ಎಂಬಲ್ಲಿ ಕುಸುಮಾವತಿ ಎಂಬವರ ಮನೆಗೆ ಗುಡ್ಡ ಕುಸಿದು ಮನೆಯ ಮುಂಭಾಗ ಮಣ್ಣಿನಿಂದ ಸಂಪೂರ್ಣ ಮುಚ್ಚಿ ಹೋಗಿದೆ. ಮಡಂತ್ಯಾರು ಶೌರ್ಯ ಘಟಕದ ಸ್ವಯಂ ಸೇವಕರು ಮಣ್ಣು ತೆರವು ಕಾರ್ಯಾಚರಣೆಯಲ್ಲಿ ಸಹಕರಿಸಿದರು. ಗುರುವಾಯನಕೆರೆ ಪೇಟೆ ಸಮೀಪದ ಬಂಟರಭವನದ ಬಳಿ ರಾ.ಹೆದ್ದಾರಿಯಲ್ಲಿ ಚರಂಡಿ ಸಮರ್ಪಕವಿಲ್ಲದೆ ನೀರು ನಿಂತು ಸಂಚಾರಕ್ಕೆ ತೊಡಕಾಗುತ್ತಿತ್ತು. ತಹಸೀಲ್ದಾರ್‌ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ನೀರು ಸರಾಗವಾಗಿ ಹೋಗುವಂತೆ ವ್ಯವಸ್ಥೆ ಮಾಡಿದರು.

ಮೇಲಂತಬೆಟ್ಟು ಗ್ರಾಮ ಪಂಚಾಯಿತಿಯ ಸವಣಾಲು ಗ್ರಾಮದ ನಡ್ತಿಕಲ್ಲು ಎಂಬಲ್ಲಿ ರವಿಚಂದ್ರ ಭಂಡಾರಿ ಎಂಬವರ ಗುಡ್ಡವು ವಸಂತ ಅವರ ಮನೆ ಪಕ್ಕ ಕುಸಿದು ಬಿದ್ದಿದೆ. ಅವರನ್ನು ಅವರ ಅಣ್ಣನ ಮನೆಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಮತ್ತು ಜುಮ್ಮಾ ಮಸ್ಜಿದ್ ಗುರುವಾಯನಕೆರೆ ಇಲ್ಲಿನ ಆವರಣ ಗೋಡೆ ಕುಸಿದಿದೆ. ಸಬರಬೈಲು ಆರ್ಕಜೆ ಬಳಿ ಕುಸುಮಾವತಿ ಅವರ ಮನೆಗೆ ಗುಡ್ಡ ಕುಸಿತವಾಗಿದೆ. ರೆನಿಲ್ಡಾಜೋಯಿಸ್ ಮಥಾಯಸ್ ಚರ್ಚ್ ಬಳಿ ಕುಸಿದಿದೆ. ಕುತ್ಲೂರು ಅತ್ರಿಜಾಲು ಸಂಪರ್ಕಿಸುವ ರಸ್ತೆ ಕುಸಿದಿದೆ. ಭಾರೀ ಮಳೆಗೆ ಲಾಯಿಲ ಗ್ರಾಮದ ಅಂಕಾಜೆ ಎಂಬಲ್ಲಿ ಮತ್ತಷ್ಟು ಗುಡ್ಡ ಕುಸಿತಗೊಳ್ಳುವ ಸಂಭವ ಇರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಅಂಕಾಜೆಯಲ್ಲಿ ರಸ್ತೆ ಬಂದ್‌ ಮಾಡಲಾಗಿದೆ.

ರಸ್ತೆ ಸಂಪರ್ಕಗಳು ಕಡಿತ: ಮರೋಡಿ ಗ್ರಾಮದ ದೇರಜೆ ಬೆಟ್ಟ ಎಂಬಲ್ಲಿಗೆ ಹೋಗುವ ಸಂಪರ್ಕ ರಸ್ತೆ ಕುಸಿದಿದೆ. ಮಾಲಾಡಿ ಸೊಣಂದೂರು ಗ್ರಾಮದಲ್ಲಿ ಕಿರು ಸೇತುವೆ ಕುಸಿತದಿಂದಾಗಿ ಸಬರಬೈಲು ಪಡಂಗಡಿ ಸಂಪರ್ಕ ರಸ್ತೆ ಕಡಿತವಾಗಿದೆ. ತೀವ್ರ ಮಳೆಯಿಂದ ನಾವರ ಗ್ರಾಮದ ಕೊರಲ್ಲ ಜಯಾನಂದ ಪೂಜಾರಿ ಅವರ ಮನೆ ಬಳಿ ಗುಡ್ಡ ಜರಿದು ಮನೆಗೆ ಹಾನಿಯಾಗಿದ್ದು ಘಟನಾ ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟೀ ನೀಡಿದರು. ನಡ ಗ್ರಾಮದ ಸುರ್ಯ ಪುತ್ಯೆ ಎಂಬಲ್ಲಿಯ ಸೂರಜ್ ಅವರ ಮನೆ ಪಕ್ಕದ ಗುಡ್ಡೆ ಜರಿದು ಮನೆಯ ಜಗಲಿ ಕುಸಿದಿದೆ. ಮನೆಯವರು ಸಂಬಂಧಿಕರ ಮನೆಗೆ ಸ್ಥಳಾಂತರಿಗೊಂಡಿದ್ದಾರೆ.

ಮುಂಡೂರು ಗ್ರಾಮದ ಮುಂಗುಡಮೆ ಸೀತಾರಾಮ ಆಚಾರ್ಯ ಎಂಬವರ ಮನೆಯ ಬಳಿ ಗುಡ್ಡ ಕುಸಿದಿದ್ದು ಮನೆಗೆ ಹಾನಿಯಾಗಿದೆ. ಮನೆ ಅಪಾಯದಲ್ಲಿದ್ದು ಯಾವುದೇ ಕ್ಷಣದಲ್ಲಿ ಮತ್ತೆ ಗುಡ್ಡ ಕುಸಿತವಾಗುವ ಭೀತಿಯಲ್ಲಿದೆ. ಬಳಂಜ ಕೊಂಗುಲ ಬದಿನಡೆ ಶ್ರಿ ಸಾಸ್ತಾರ ನಾಗಬ್ರಹ್ಮ ದೇವಸ್ಥಾನ ಬಳಿ ರಸ್ತೆ, ಸೇತುವೆ ತಡೆಗೋಡೆ ಹಾನಿಯಾಗಿದೆ.