ನಿರಂತರ ಮಳೆ: ರೈತರ ಬದುಕಿಗೆ ಕಿಚ್ಚಾದ ಹತ್ತಿ ಬೆಳೆ

| Published : Sep 14 2025, 01:04 AM IST

ನಿರಂತರ ಮಳೆ: ರೈತರ ಬದುಕಿಗೆ ಕಿಚ್ಚಾದ ಹತ್ತಿ ಬೆಳೆ
Share this Article
  • FB
  • TW
  • Linkdin
  • Email

ಸಾರಾಂಶ

ದೇವದುರ್ಗ ಮತ್ತು ಅರಕೇರಾ ತಾಲೂಕಿನಾದ್ಯಂತ ಕಳೆದ ಒಂದು ತಿಂಗಳಿನಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಜಮೀನಲ್ಲಿ ಭರವಸೆಯೊಂದಿಗೆ ಹಾಕಿದ್ದ ಹತ್ತಿ ಬೆಳೆಗಳು ಹಾಳಾಗುವ ದುಸ್ಥಿತಿ ತಲುಪಿದೆ.

ನರಸಿಂಗರಾವ್ ಸರಕೀಲ್

ಕನ್ನಡಪ್ರಭ ವಾರ್ತೆ ದೇವದುರ್ಗ

ದೇವದುರ್ಗ ಮತ್ತು ಅರಕೇರಾ ತಾಲೂಕಿನಾದ್ಯಂತ ಕಳೆದ ಒಂದು ತಿಂಗಳಿನಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಜಮೀನಲ್ಲಿ ಭರವಸೆಯೊಂದಿಗೆ ಹಾಕಿದ್ದ ಹತ್ತಿ ಬೆಳೆಗಳು ಹಾಳಾಗುವ ದುಸ್ಥಿತಿ ತಲುಪಿದೆ.

ಮುಂಗಾರು ಮಳೆ ಬಿತ್ತನೆ ಸಂದರ್ಭದಲ್ಲಿ ರೈತರಿಗೆ ಭರವಸೆಯನ್ನು ಮೂಡಿಸಿತ್ತು. ಸಕಾಲಕ್ಕೆ ಮಳೆ ಬಿದ್ದ ಪರಿಣಾಮ ಅನೇಕ ರೈತರು ಹತ್ತಿ ಬೆಳೆಯನ್ನು ಬೆಳೆದಿದ್ದಾರೆ. ಆದರೆ, ಹತ್ತಿ ಬೆಳೆ ಹೂ, ಕಾಯಿ ಬಿಡುವ ಸಂದರ್ಭದಲ್ಲಿ ಅತಿ ಮಳೆಯಿಂದ ತೇವಾಂಶ ಹೆಚ್ಚಾಗಿ ಬೆಳೆಗಳಿಗೆ ತಾಮ್ರ ರೋಗ, ಕಾಯಿಗಳಿಗೆ ಹುಳುಗಳ ಕಾಟ ಹೆಚ್ಚಾಗಿ ರೈತರು ಆತಂಕದಲ್ಲಿದ್ದಾರೆ. ಜಮೀನಲ್ಲಿಯ ಕಸ ಕೀಳಲೂ ಕೂಡ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣಗೊಂಡಿದೆ. ಬೆಳೆ ಇರುವ ಜಮೀನುಗಳೆಲ್ಲಾ ಜಲಾವೃತಗೊಂಡು, ಬಸಿ ನೀರಿನಿಂದ, ಅತಿಯಾದ ತೇವಾಂಶದಿಂದ ಬೆಳೆಗಳು ಹಾಳಾಗುವ ಮಮತ್ತು ಅಪಾರ ಹಾನಿಯಾಗುವ ಲಕ್ಷಣಗಳು ಕಂಡುಬರುತ್ತಿವೆ.

ಹತ್ತಿ ಬೆಳೆಗೆ ರೈತರು ಪ್ರತಿ ಎಕರೆಗೆ 20, 25 ಸಾವಿರ ಖರ್ಚು ಮಾಡಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಯೂರಿಯಾ, ಡಿಎಪಿ ಗೊಬ್ಬರದ ಕೊರತೆಯಿದ್ದು, ಸಹಕಾರ ಸಂಘಗಳಲ್ಲಿ ರೈತರ ಸಾಲು ಸಾಮಾನ್ಯವಾಗಿದೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಪಾಲಿ ನಿಂತರೂ ರೈತರಿಗೆ ದೊರಕುವುದು ಕೇವಲ ಒಂದು ಅಥವಾ ಎರಡು ಚೀಲ ಗೊಬ್ಬರ. ಗೊಬ್ಬರದ ಅಂಗಡಿ ಮಾಲೀಕರು ಕೃತಕ ಅಭಾವ ಸೃಷ್ಠಿಸಿ ಹೆಚ್ಚಿನ ಬೆಲೆಗೆ ಗೊಬ್ಬರ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.ಹಾಗೇ ಸಣ್ಣ ರೈತರಿಗೆ ಗೊಬ್ಬರ ನೀಡುತ್ತಿಲ್ಲ.ದೊಡ್ಡ ರೈತರು ಗೊಬ್ಬರದ ವ್ಯಾಪಾರಿಗಳಲ್ಲಿ ಒಂದು ವರ್ಷದ ಅವಧಿಗೆ ಗೊಬ್ಬರ, ಬೀಜಗಳನ್ನು ಉದ್ರಿ ಕೊಡುವ ಪರಿಪಾಠ ನಮ್ಮಲಿದೆ.ಹೀಗಾಗಿ ದೊಡ್ಡ ರೈತರಿಗೆ ಮಾತ್ರ ಯೂರಿಯಾ ಹಾಗೂ ಡಿಎಪಿ ಗೊಬ್ಬರ ಲಭ್ಯವಾಗಿದೆ.

ಸಣ್ಣ ರೈತರು ಯೂರಿಯಾ ಗೊಬ್ಬರ ಹಾಗೂ 10-16,17-17.15-26 ಡಿಎಪಿ ಗೊಬ್ಬರಕ್ಕಾಗಿ ಪರದಾಡುವಂತಹ ವಾತಾವರಣ ನಿರ್ಮಾಣಗೊಂಡಿದೆ.

ಬೆಳೆ ಸಮೀಕ್ಷೆ: ದೇವದುರ್ಗ ಮತ್ತು ಅರಕೇರಾ ತಾಲೂಕು ವ್ಯಾಪ್ತಿಯಲ್ಲಿ ಹತ್ತಿ ಬೆಳೆ ಸೇರಿದಂತೆ ಇತರೆ ಬೆಳೆಗಳು ಹಾಳಾಗುವ, ಕೆಲವೆಡೆ ಇಳುವರಿ ಕಡಿಮೆ ಬರುವ ಸಂಭವ ಹೆಚ್ಚಾಗಿದ್ದು, ಕೂಡಲೇ ಕೃಷಿ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಮಾಡಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ರಾಜ್ಯ ಸರಕಾರ ಕೂಡ ಬೆಳೆ ಪರಿಹಾರ ನೀಡಬೇಕಾಗಿದೆ. ರೈತರಿಗೆ ಅಗತ್ಯ ಪ್ರಮಾಣದ ಗೊಬ್ಬರ ಪೂರೈಕೆ ವ್ಯವಸ್ಥೆ ಕಲ್ಪಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

---

ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಾಗಿ ಮಳೆ ಸುರಿಯುತ್ತಿರುವದರಿಂದ ಹತ್ತಿ ಬೆಳೆಗೆ ತೊಂದರೆಯಾಗಿದೆ. ರೈತರು ಶೇ.2ರಷ್ಟು ಯೂರಿಯಾ ಸ್ಪ್ರೇ ಮಾಡಬೇಕು. ಕಾಯಿ ಕೊರೆತ ಸಮಸ್ಯೆಗೆ ಪ್ಲಾನಾ ಔಷಧಿ ಸಿಂಪಡಿಸಬೇಕು. ಬೆಳೆವಿಮೆ ಮಾಡಿಸಿರುವ ರೈತರು ಕೂಡಲೇ ವಿಮಾ ಕಂಪನಿಯನ್ನು ಸಂಪರ್ಕಿಸಬೇಕು. 24 ಗಂಟೆಯೊಳಗೆ ವಿಮೆ ಅಧಿಕಾರಿಗಳ ತಂಡ ಜಮೀನಿಗೆ ಭೇಟಿ ನೀಡಿ ಬೆಳೆಹಾನಿ ಪರಿಶೀಲನೆ ಮಾಡಿ ವರದಿ ಸಲ್ಲಿಸುತ್ತದೆ.- ಶ್ರೀನಿವಾಸ ನಾಯಕ ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ದೇವದುರ್ಗ.