ಸಾರಾಂಶ
ಪರಭಾಷಿಗರ ಹಾವಳಿಯಿಂದ ರಾಜ್ಯದ ರಾಜಧಾನಿ ಬೆಂಗಳೂರು ಭಾಗದಲ್ಲಿ ಕನ್ನಡ ಭಾಷೆ ವರ್ಚಸ್ಸು ಸಾಕಷ್ಟು ಕುಂದಿದೆ. ಆಟೋ ಚಾಲಕರು, ಮಾಲೀಕರು ಕನ್ನಡದ ಉಳಿವಿಗೆ ನಿರಂತರ ಶ್ರಮ ಹಾಕುತ್ತಿದ್ದಾರೆ. ಕನ್ನಡ ಪರ ಸಂಘಟನೆಗಳೂ ಕೂಡ ಹಲವು ಹೋರಾಟ ನಡೆಸುತ್ತಿವೆ. ಕನ್ನಡದ ಉಳಿವಿಗೆ ಸರ್ಕಾರ ಅಗ್ರ ನಿರ್ಣಯವೊಂದನ್ನೆು ಕೈಗೊಳ್ಳಬೇಕು.
ಕನ್ನಡಪ್ರಭ ವಾರ್ತೆ ಭಾರತೀನಗರ
ರಾಜ್ಯದ ಎಲ್ಲಾ ಆಟೋ ಚಾಲಕರು ಕನ್ನಡ ನಾಡು-ನುಡಿಯನ್ನು ಉಳಿಸಲು ನಿರಂತರ ಹೋರಾಟದ ಜೊತೆಗೆ ಅರಿವು ಮೂಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.ಕಾವೇರಿ ನೀರಾವರಿ ನಿಗದಮ ಕಚೇರಿ ಬಳಿಯ ಆಟೋ ನಿಲ್ದಾಣದಲ್ಲಿ ಶ್ರೀಚಾಮುಂಡೇಶ್ವರಿ ಆಟೋ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಧಜ್ವಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ಭಾಷೆಯನ್ನು ಪ್ರತಿಯೊಬ್ಬರು ಪೋಷಿಸುವ ಜೊತೆಗೆ ಕನ್ನಡ ಶಾಲೆಗಳನ್ನು ಉಳಿಸಿದಾಗ ಮಾತ್ರ ಕನ್ನಡ ಭಾಷೆ ಮತ್ತಷ್ಟು ಪ್ರಜ್ವಲಗೊಳ್ಳಲು ಸಾಧ್ಯ ಎಂದರು.ಪರಭಾಷಿಗರ ಹಾವಳಿಯಿಂದ ರಾಜ್ಯದ ರಾಜಧಾನಿ ಬೆಂಗಳೂರು ಭಾಗದಲ್ಲಿ ಕನ್ನಡ ಭಾಷೆ ವರ್ಚಸ್ಸು ಸಾಕಷ್ಟು ಕುಂದಿದೆ. ಆಟೋ ಚಾಲಕರು, ಮಾಲೀಕರು ಕನ್ನಡದ ಉಳಿವಿಗೆ ನಿರಂತರ ಶ್ರಮ ಹಾಕುತ್ತಿದ್ದಾರೆ. ಕನ್ನಡ ಪರ ಸಂಘಟನೆಗಳೂ ಕೂಡ ಹಲವು ಹೋರಾಟ ನಡೆಸುತ್ತಿವೆ. ಕನ್ನಡದ ಉಳಿವಿಗೆ ಸರ್ಕಾರ ಅಗ್ರ ನಿರ್ಣಯವೊಂದನ್ನೆು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಮತ್ತೊಂದೆಡೆ ನೆಲ-ಜಲಗಳ ವಿಚಾರವಾಗಿ ರಾಜ್ಯ ರಾಜ್ಯಗಳ ನಡುವೆ ಹೋರಾಟ ನಡೆಯುತ್ತಿವೆ. ಈ ಮಧ್ಯೆ ನಮ್ಮ ಜಾಗದಲ್ಲೇ ನೀರನ್ನು ಪಡೆಯುವ ಏತ ನೀರಾವರಿಗಳು ನನೆಗುದಿಗೆ ಬಿದ್ದಿರುವ ಬಗ್ಗೆ ಯಾವ ನಾಯಕರು ತಲೆಕೆಡಿಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಏತ ನೀರಾವರಿ ಯೋಜನೆ ಕಾಮಗಾರಿಗಳು ಪ್ರಾರಂಭಗೊಂಡರೆ ನೀರಿನ ಕೊರತೆ ಶಮನಗೊಳ್ಳಲ್ಲಿದೆ. ಈ ಸಂಬಂಧ ಕಾಮಗಾರಿ ಆರಂಭಿಸಲು ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಚರ್ಚೆ ನಡೆಯಬೇಕಾಗಿದೆ ಎಂದು ಶಾಸಕರಿಗೆ ಆಗ್ರಹಿಸಿದರು.
ರಾಜ್ಯದ ಗಡಿ ಭಾಗಗಳಲ್ಲಿ ಇಂದಿಗೂ ಸಹ ಗಡಿ ಸಮಸ್ಯೆಗಳು ಹಾಗೆಯೇ ಉಳಿದಿವೆ. ಇವುಗಳ ನಿವಾರಣೆಗೆ ಎಲ್ಲರೂ ಒಗ್ಗೂಡಿ ಗೋಕಾಕ್ ಚಳವಳಿ ರೀತಿ ಮತ್ತೊಮ್ಮೆ ಹೋರಾಟ ನಡೆಸಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಎ.ಸಿ.ಸಿದ್ದರಾಜು ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಮಾಜಿ ಸಚಿವ ಡಿ.ಸಿ. ತಮ್ಮಣ್ಣರನ್ನು ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಅಭಿನಂದಿಸಿದರು. ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅನ್ನಸಂತರ್ಪಣೆಗೆ ಚಾಲನೆ ನೀಡಿದರು.
ಈ ವೇಳೆ ಜಾ.ದಳ ತಾಲೂಕು ಘಟಕದ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಮುಖಂಡರಾದ ಕೆ.ಟಿ.ಸುರೇಶ್, ವಿನುಕುಮಾರ್, ಅಣ್ಣೂರು ಸತೀಶ್, ಆಸರೆ ಸೇವಾಟ್ರಸ್ಟ್‌ನ ರಘು, ಎ.ಆರ್.ಚಂದ್ರೇಶ್, ಸಂಘದ ಉಪಾಧ್ಯಕ್ಷ ಹರೀಶ್, ಕಾರ್ಯದರ್ಶಿ ನರಸಿಂಹರಾಜೇ ಅರಸ್, ಖಜಾಂಚಿ ಎ.ಬಿ.ಚಂದ್ರೇಶ್, ಪದಾಧೀಕಾರಿಗಳಾದ ಸುನಿಲ್ ಕುಮಾರ್, ಲಕ್ಷ್ಮಣ್, ಪ್ರಹ್ಲಾದ್, ಜಗದೀಶ್, ಎ.ಬಿ.ರವಿ, ಜಿ.ಟಿ.ಕೃಷ್ಣ, ಆನಂದ್‌ಕುಮಾರ್, ಮಂಜುನಾಥ್, ಮಹದೇವ, ಚಂದ್ರು ಮಧುಸೂದನ್, ನಂದೀಶ್, ಶ್ರೀಕಾಂತ್ ಉಪಸ್ಥಿತರಿದ್ದರು.