ಮಂಗಳೂರು: ವೈದ್ಯಕೀಯ ಕ್ಷೇತ್ರದ ಪ್ರತಿನಿಧಿಗಳು ವಿವಿಧ ವೈದ್ಯಕೀಯ ಕಾರ್ಯಾಗಾರಗಳಲ್ಲಿ ಭಾಗವಹಿಸಿ, ನಿರಂತರ ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ತೊಡಗಿಸಿಕೊಂಡು ನೂತನ ಆವಿಷ್ಕಾರ, ಆಧುನಿಕ ಬೆಳವಣಿಗೆಗಳಿಗೆ ಸ್ಪಂದಿಸಿ ತಮ್ಮ ವೈದ್ಯಕೀಯ ಜ್ಞಾನವನ್ನು ವೃದ್ಧಿಸಿ ಯಶಸ್ಸು ಸಾಧಿಸಬೇಕು ಎಂದು ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ನಿರ್ದೇಶಕ ಹಾಜಿ ಡಾ.ಯು.ಕೆ. ಮೋನು ಸಲಹೆ ನೀಡಿದ್ದಾರೆ.
ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ಮಕ್ಕಳ ಶಾಸ್ತ್ರ ಮತ್ತು ಚಿಕಿತ್ಸಾ ವಿಭಾಗದ ಔಷಧಶಾಸ್ತ್ರ ವಿಭಾಗ, ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಒಂದು ದಿನದ ‘ಪುಟ್ಟ ರೋಗಿಗಳು ಮತ್ತು ದೊಡ್ಡ ನಿರ್ಧಾರಗಳು’ ವೈದ್ಯಕೀಯ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.ಕಾಲೇಜಿನ ಡೀನ್ ಡಾ. ಶಹನವಾಜ್ ಮಣಿಪಾಡಿ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಕ್ಕಳ ಶಾಸ್ತ್ರ ಕ್ಷೇತ್ರದಲ್ಲಿ ಇತ್ತೀಚಿಗಿನ ಪ್ರಗತಿ, ಆಧುನಿಕ ತಂತ್ರಜ್ಞಾನಗಳ ಬಗ್ಗೆ ಉಪನ್ಯಾಸ ನೀಡಿದರು.
ಹಿರಿಯ ಪ್ರಾಧ್ಯಾಪಕ ಡಾ. ಶಂಶಾದ್ ಎ. ಖಾನ್ ಅವರು ಕಾರ್ಯಗಾರದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಬೆಂಗಳೂರು ನಗರ ಮೂಲದ ಮಣಿಪಾಲ ಆಸ್ಪತ್ರೆಯ ಡಾ. ಭಾಸ್ಕರ್ ಶೆಣೈ ದಿಕ್ಸೂಚಿ ಭಾಷಣ ಮಾಡಿದರು. ಕೊಯಮುತ್ತೂರು ಕೊವೈಯ್ ಆಸ್ಪತ್ರೆಯ ಡಾ. ಅಶ್ವತ್ ದೊರೈಸ್ವಾಮಿ ಅವರು ಟೈಫಾಯಿಡ್ ರೋಗ ನಿರ್ವಹಣೆ ಬಗ್ಗೆ ಅತಿಥಿ ಉಪನ್ಯಾಸ ನೀಡಿದರು. ಕೊಚ್ಚಿ ನಗರದ ಅಮೃತ ವೈದ್ಯಕೀಯ ಕಾಲೇಜಿನ ಡಾ. ಪ್ರಿನ್ಸಿ ಲೂಯಿಸ್ ಪಲಟ್ಟಿ ಅವರು ಮಕ್ಕಳ ರೋಗ ಮತ್ತು ಲಕ್ಷಣ ಮತ್ತು ಕಾರಣಗಳ ಬಗ್ಗೆ ಉಪನ್ಯಾಸ ನೀಡಿದರು. ಬೆಂಗಳೂರು ನಗರ ಕಾವೇರಿ ಆಸ್ಪತ್ರೆಯ ಡಾ. ಅಕ್ಷತಾ ರವೀಂದ್ರ ಅವರು ಮಕ್ಕಳಲ್ಲಿ ಅನಾವಶ್ಯಕ ರೋಗ ನಿರೋಧಕ ಔಷಧ ಬಳಕೆಯ ಬಗ್ಗೆ ವಿಚಾರ ಮಂಡಿಸಿದರು.ಬಳಿಕ ನಾಲ್ವರಿಗೆ ವೈದ್ಯಕೀಯ ವೃತ್ತಿಯಲ್ಲಿ ಸಲ್ಲಿಸಿದ ಅನುಪಮ ಸೇವೆ ಮತ್ತು ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.ಮಕ್ಕಳ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಓನೀಲ್ ಫರ್ನಾಂಡಿಸ್ ಸ್ವಾಗತಿಸಿದರು. ವೇದಿಕೆಯಲ್ಲಿ ಡಾ.ಎಂ.ವಿ. ಪ್ರಭು, ಡಾ. ಅಂಜನ್ ಕುಮಾರ್, ಡಾ. ರೋಹನ್ ಮೋನಿಸ್, ಡಾ. ಮನೋಹರ್ ರೇವಂಕರ್, ಡಾ. ಯಶ್ವಂತ್ ಕುಮಾರ್ ಇದ್ದರು. ಡಾ. ಡೈಲಾನ್ ಡಿಸೋಜ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ವಂದಿಸಿದರು. ಸುಮಾರು 150 ವೈದ್ಯಕೀಯ ಪ್ರತಿನಿಧಿಗಳು ಭಾಗವಹಿಸಿದ್ದರು.