ಉತ್ತಮ ಸಾಧನೆ ತೋರಿದ ಕ್ರೀಡಾಪಟುಗಳಿಗೆ ನಮ್ಮ ಸಹಾಯ ಹಸ್ತ ನಿರಂತವಾಗಿರಲಿದೆ, ಅದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿರುವ ಕ್ರೀಡಾ ಮಹೋತ್ಸವ ಕಾರ್ಯಕ್ರಮ ದೇಶದೆಲ್ಲೆಡೆ ಮಹತ್ವ ಪಡೆದುಕೊಳ್ಳುತ್ತಿದೆ ಎಂದು ಲೋಕಸಭಾ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವಕ್ತಪಡಿಸಿದರು.

ಬ್ಯಾಡಗಿ: ಉತ್ತಮ ಸಾಧನೆ ತೋರಿದ ಕ್ರೀಡಾಪಟುಗಳಿಗೆ ನಮ್ಮ ಸಹಾಯ ಹಸ್ತ ನಿರಂತವಾಗಿರಲಿದೆ, ಅದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿರುವ ಕ್ರೀಡಾ ಮಹೋತ್ಸವ ಕಾರ್ಯಕ್ರಮ ದೇಶದೆಲ್ಲೆಡೆ ಮಹತ್ವ ಪಡೆದುಕೊಳ್ಳುತ್ತಿದೆ ಎಂದು ಲೋಕಸಭಾ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವಕ್ತಪಡಿಸಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಸಂಸದರ ಕ್ರೀಡಾ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಯ ಭಾಗವಾಗಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕ್ರೀಡೆಗಳನ್ನು ನಡೆಸಲು ಯೋಜನೆ ಸಿದ್ಧಪಡಿಸಿದ್ದಾರೆ ಇಂತಹ ಕ್ರೀಡಾಕೂಟ ಏರ್ಪಡಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಬೇಕು ಎಂದರು

ಗೆಲ್ಲಲು ನ್ಯಾಯದ ಮಾರ್ಗ ಹಿಡಿಯಬೇಕು: ಕ್ರೀಡೆಗಳು ಬದುಕಿನಲ್ಲಿ ಹಲವಾರು ಅನುಭವದ ಪಾಠ ಹೇಳಿಕೊಡುತ್ತದೆ, ಜೀವನ ಮತ್ತು ಕ್ರೀಡೆಯಲ್ಲಿ ಗೆಲ್ಲಲೇಬೇಕೆಂದು ಆಡಬೇಕು. ಗೆಲ್ಲುವ ಸಲುವಾಗಿ ನಾವು ಅನ್ಯ ಮಾರ್ಗ ಹಿಡಿಯದೇ ನ್ಯಾಯದ ಮಾರ್ಗ ಹಿಡಿಯಬೇಕು, ಇದು ಜೀವನದಲ್ಲಿ ಕಲಿಯುವ ಇನ್ನೊಂದು ಪಾಠ. ಹೀಗೆ ಕ್ರೀಡೆ ನಮ್ಮ ಬದುಕಿನಲ್ಲಿ ಹಲವಾರು ಅನುಭವದ ಪಾಠ ಹೇಳಿಕೊಡುತ್ತದೆ ಅದಕ್ಕಾಗಿ ಕ್ರೀಡೆ ಬಹಳ ಮುಖ್ಯವಾಗಿದೆ ಎಂದರು. ಮಾನವ ಸಂಪನ್ಮೂಲ ಅಭಿವೃದ್ಧಿ ಆಗಬೇಕು: ಶಾಲೆಯಲ್ಲಿಯೇ ಪ್ರತಿಭೆಗಳನ್ನು ಗುರುತಿಸಬೇಕು. ಆ ಪ್ರತಿಭೆಗೆ ತಕ್ಕಂತೆ ತರಬೇತಿ ಕೊಡಬೇಕು, ದೈಹಿಕ ಮಾನಸಿಕ ಸದೃಢತೆ ಮಕ್ಕಳಲ್ಲಿ ತರಬೇಕು, ಒಂದು ವ್ಯಕ್ತಿತ್ವ ಬೆಳೆಯಬೇಕಾದರೆ ಕ್ರೀಡೆ ಮಹತ್ವದ ಪಾತ್ರ ವಹಿಸಲಿದೆ. ಕ್ರೀಡೆಯಲ್ಲಿ ಸ್ಪರ್ಧೆ ಮಾಡಬೇಕೆನ್ನುವುದು ಇರುತ್ತದೆ. ಕಠಿಣ ಶ್ರಮದಿಂದ ಮುಂದೆ ಬರಬೇಕು ಎನ್ನುವುದು ಇರುತ್ತದೆ.

ಕ್ರೀಡೆಯನ್ನು ಶದ್ದೆಯಿಂದ ಕಲಿತು ಆಡಿದರೆ ಅದರಲ್ಲಿ ಯಶಸ್ಸು ಕಾಣುತ್ತೇವೆ, ಯಶಸ್ಸು ಕಾಣುವ ಮೊದಲ ಅನುಭವ ಮಕ್ಕಳಿಗೆ ಕ್ರೀಡೆಯಲ್ಲಿ ಆಗಲಿದೆ ಎಂದರು.

ಮಹಿಳೆಯರಲ್ಲಿ ಹೋರಾಟದ ಮನೋಭಾವ: ಕ್ರೀಡಾ ಮಹೋತ್ಸವದಲ್ಲಿ ಹೆಣ್ಣು ಮಕ್ಕಳು ಆಡುವುದು ನೋಡಿದಾಗ ಮೊದಲು ಮೃದುವೆನಿಸುತ್ತಿದ್ದ ಅವರು ಕ್ರೀಡಾಂಗಣಕ್ಕೆ ಹೋದಾಗ ಸಿಂಹಗಳಂತೆ ನುಗ್ಗುತ್ತಿದ್ದರು, ಜೀವನದಲ್ಲಿ ಕೇವಲ ಗೆಲ್ಲುವುದಷ್ಟೇ ಅಲ್ಲ, ಸೋಲುವ ಅನುಭವ ಇದ್ದಾಗ ಜೀವನದ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯ ಯಶಸ್ಸು ಸಿಕ್ಕಾಗ ಎಷ್ಟು ಸಂತೋಷವಾಗಿರುತ್ತೇವೊ ಸೋತಾಗ ಅಷ್ಟೇ ಧೈರ್ಯದಿಂದ ಇರಬೇಕು. ಗೆದ್ದಾಗ ದೊಡ್ಡ ಮನಸಿರಬೇಕು. ಸೋತಾಗ ಗಟ್ಟಿ ಮನಸ್ಸಿರಬೇಕು ಎಂದರು.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾಗಿದೆ: ನಾವು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದೇವೆ. ಆದರೆ ಕ್ರೀಡೆಯಲ್ಲಿ ಇನ್ನಷ್ಟು ಸಾಧನೆ ಮಾಡಬೇಕಾಗಿದೆ. ಭಾರತವನ್ನು ಒಂದು ಗುಲಾಮ ಬಡತನ ರಾಷ್ಟ್ರವಾಗಿ ವಿದೇಶೀಯರು ಹೀಯಾಳಿಸಿದ್ದನ್ನು ನೋಡಿದ್ದೇವೆ, ನಮ್ಮ ಯುವಕರು ಅಭಿವೃದ್ಧಿ ಆಗುತ್ತಿರುವ ದೇಶದ ನಾಗರಿಕರಾಗುತ್ತಿದ್ದಾರೆ, ಇಲ್ಲಿ ಅನುಭವ ಪಡೆದು ರಾಷ್ಟ್ರವನ್ನು ಇನ್ನುಷ್ಟು ಬಲಿಷ್ಟ ಮಾಡುವ ಹೊಣೆಗಾರಿಕೆ ತೋರಬೇಕಾಗಿದೆ. ಅದಕ್ಕೆ ಏಕ ಭಾರತ ಶ್ರೇಷ್ಠ ಭಾರತ ಎಂಬುದಾಗಿ ಪ್ರಧಾನಿ ಕರೆ ಕೊಟ್ಟಿದ್ದಾರೆ ಎಂದರು.

ಒಲಿಂಪಿಕ್ಸ್‌ನಲ್ಲಿ ಪದಕಗಳ ಮೇಲೆ ಕಣ್ಣು: ಕ್ರೀಡೆಯಲ್ಲಿಯೂ ಭಾರತ ಮುಂದೆ ಬರಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಫಿಟ್ ಇಂಡಿಯಾ ಖೇಲೋ ಇಂಡಿಯಾ ಅಂತ ಕರೆ ಕೊಟ್ಟರು, ಒಲಿಂಪಿಕ್ಸ್ ಬಂದಾಗ ಜೀತೋ ಇಂಡಿಯಾ ಅಂದರು ಈ ಎಲ್ಲ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಟೊಕಿಯೋದಲ್ಲಿ ನಡೆದ ಒಲಿಂಪಿಕ್ಸನಲ್ಲಿ ಭಾರತ ಅತಿ ಹೆಚ್ಚು ಪಶಸ್ತಿ ಪಡೆಯಿತು. ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಮೆಡಲ್ ಪಡೆದ ರಾಷ್ಟ್ರ ಭಾರತವಾಗಿದೆ ಎಂದರು.

ಓರ್ವ ಕ್ರೀಡಾಪಟುವಿಗೆ 32 ಲಕ್ಷ: ಮುಖ್ಯಮಂತ್ರಿ ಆಗಿದ್ದಾಗ ವಿಶ್ವದ ಶ್ರೇಷ್ಠ ತರಬೇತಿ ಪಡೆಯಲು 75 ಕ್ರೀಡಾಪಟುಗಳಿಗೆ ಪ್ರತಿ ವರ್ಷ 8 ಲಕ್ಷ ರು.ನಂತೆ ಪ್ರತಿ ಕ್ರೀಡಾಪಟುವಿಗೆ 32 ಲಕ್ಷ ರು.ಗಳನ್ನು 4 ವರ್ಷಗಳ ಕಾಲ ನೀಡಿದ್ದೆ, ಇದರ ಫಲಶೃತಿಯಾಗಿ 4 ಜನ ಒಲಿಂಪಿಕ್ಸ್‌ನಲ್ಲಿ ಮೆಡಲ್ ಪಡೆದುಕೊಂಡರು. ಬ್ಯಾಡಗಿ ತಾಲೂಕಿನ ಮಕ್ಕಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು, ಯಾರು ಜಿಲ್ಲೆಯಲ್ಲಿ ಉತ್ತಮ ಸಾಧನೆ ತೋರುತ್ತಾರೆ ಅವರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಡಲು ಎಲ್ಲ ರೀತಿಯ ಸಹಾಯ ಮಾಡಲು ತೀರ್ಮಾನಿಸಿದ್ದೇನೆ ಎಂದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸೇರಿದಂತೆ ವಿವಿಧ ಮೋರ್ಚಾಗಳ ಸದಸ್ಯರು ಕ್ರೀಡಾಪಟುಗಳು ತೀರ್ಪುಗಾರರು ಉಪಸ್ಥಿತರಿದ್ದರು.