ಕರ್ನಾಟಕ ರಾಜ್ಯ ಎಲ್ಲ ವಿಶ್ವವಿದ್ಯಾನಿಲಯಗಳ ಗುತ್ತಿಗೆ, ಹೊರಗುತ್ತಿಗೆ ಆಧಾರಿತ ಸಿ ಮತ್ತು ಡಿ ಗ್ರೂಪ್ ನೌಕರರಿಗೆ ಪರಿಷ್ಕೃತ ಕನಿಷ್ಠ ವೇತನ ಜಾರಿಗಾಗಿ ಸೆ.2ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ ಅಹೋರಾತ್ರಿ ಹೋರಾಟ ಹಮ್ಮಿಕೊಂಡ ಹಿನ್ನೆಲೆಯಲ್ಲಿ ತಾಲೂಕಿನ ಶಿವಗಂಗೋತ್ರಿಯ ದಾವಣಗೆರೆ ವಿವಿ ಮುಂಭಾಗದಲ್ಲಿ ಹೊರಗುತ್ತಿಗೆ ನೌಕರರು ಸೋಮವಾರ ಪ್ರತಿಭಟಿಸಿದ್ದಾರೆ.

- ಸೆ.2ರಂದು ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ । ಸರ್ಕಾರಿ ವಿವಿ ಗುತ್ತಿಗೆ-ಹೊರಗುತ್ತಿಗೆ ನೌಕರರು ಸಜ್ಜು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕರ್ನಾಟಕ ರಾಜ್ಯ ಎಲ್ಲ ವಿಶ್ವವಿದ್ಯಾನಿಲಯಗಳ ಗುತ್ತಿಗೆ, ಹೊರಗುತ್ತಿಗೆ ಆಧಾರಿತ ಸಿ ಮತ್ತು ಡಿ ಗ್ರೂಪ್ ನೌಕರರಿಗೆ ಪರಿಷ್ಕೃತ ಕನಿಷ್ಠ ವೇತನ ಜಾರಿಗಾಗಿ ಸೆ.2ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ ಅಹೋರಾತ್ರಿ ಹೋರಾಟ ಹಮ್ಮಿಕೊಂಡ ಹಿನ್ನೆಲೆಯಲ್ಲಿ ತಾಲೂಕಿನ ಶಿವಗಂಗೋತ್ರಿಯ ದಾವಣಗೆರೆ ವಿವಿ ಮುಂಭಾಗದಲ್ಲಿ ಹೊರಗುತ್ತಿಗೆ ನೌಕರರು ಸೋಮವಾರ ಪ್ರತಿಭಟಿಸಿದರು.

ಸಂಘಟನೆ ಉಪಾಧ್ಯಕ್ಷ ಎಲ್.ಎಚ್.ಪ್ರಕಾಶ ಮಾತನಾಡಿ, ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಒಕ್ಕೂಟದಿಂದ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ ಸೆ.2ರಿಂದ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡಿದ್ದು, ದಾವಣಗೆರೆ ವಿ.ವಿ.ಯಿಂದಲೂ ಹೋರಾಟಕ್ಕೆ ಚಾಲನೆ ನೀಡಲಾಯಿತು ಎಂದರು.

ರಾಜ್ಯದ ಎಲ್ಲ ಸರ್ಕಾರಿ ವಿ.ವಿ.ಗಳಲ್ಲಿ ದಶಕಗಳಿಂದಲೂ ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಸಾವಿರಾರು ನೌಕರರು ಸಿ ಮತ್ತು ಡಿ ಗ್ರೂಪ್ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕಳೆದ ಮೇ 22ರಂದು ಅಧಿಕೃತವಾಗಿ ಹೊರಡಿಸಿದ ಪರಿಷ್ಕೃತ ಕನಿಷ್ಠ ವೇತನದ ಅಧಿಸೂಚನೆಯು ಸಂತೋಷ, ಉತ್ಸಾಹ ಹೆಚ್ಚಿಸಿತ್ತು. ಆದರೆ, ಸರ್ಕಾರ ಈ ಪರಿಷ್ಕರಣೆಯನ್ನು ಪುನರ್ ಪರಿಶೀಲಿಸಲು ಉಪ ಸಂಪುಟ ಸಮಿತಿ ರಚಿಸಿದ್ದು ಆತಂಕ, ಆಕ್ರೋಶಕ್ಕೆ ಕಾರಣವಾಗಿದೆ ಎಂದರು.

ಕಾರ್ಮಿಕ ವಿರೋಧಿ, ಕಾರ್ಮಿಕರ ಹಿತಾಸಕ್ತಿಗೆ ಬಗೆಯುವ ದ್ರೋಹವನ್ನು ಸರ್ಕಾರ ಎಸಗಿದೆ. ಕಾಯ್ದೆ ಬಲ್ಲವರು, ತಜ್ಞರು ಇರುವ ಕನಿಷ್ಠ ವೇತನ ಸಲಹಾ ಮಂಡಳಿಯೇ ತೀರ್ಮಾನಿಸಿರುವಾಗ ಹೈಕೋರ್ಟ್‌ನಲ್ಲಿ ಪರಾಮರ್ಶೆ ನಡೆಯುವಾಗ ಉಪ ಸಂಪುಟ ಸಮಿತಿ ರಚಿಸಿ, ಕನಿಷ್ಠ ವೇತನ ಜಾರಿ ತಡೆಯುವ ಅಗತ್ಯವೇನಿತ್ತು. ಈ ದಿನಗಳಲ್ಲಿ ಮನೆ ಬಾಡಿಗೆ, ಆಹಾರ ಧಾನ್ಯ, ಅಗತ್ಯ ವಸ್ತುಗಳು ಹೀಗೆ ಎಲ್ಲದರ ಬೆಲೆ ಏರಿಕೆಯಾಗಿದೆ. ಮಕ್ಕಳ ವಿದ್ಯಾಭ್ಯಾಸ, ಹೆತ್ತವರ ಆಸ್ಪತ್ರೆ ಖರ್ಚು ವೆಚ್ಚ ನಿಭಾಯಿಸುವುದೇ ಕಷ್ಟವಾಗಿದೆ ಎಂದು ದೂರಿದರು.

ಈಗಿರುವ ₹15-₹17 ಸಾವಿರಗಳ ಕನಿಷ್ಠ ವೇತನದಲ್ಲಿ ಒಂದು ಕಾರ್ಮಿಕ ಕುಟುಂಬ ಜೀವನ ಸಾಗಿಸುವುದು ಸಾಧ್ಯವೇ ಎಂಬುದನ್ನು ಸರ್ಕಾರ ಆಲೋಚಿಸಲಿ. ವೇತನ ಪರಿಷ್ಕರಣೆಯನ್ನು ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಕುಟುಂಬದ ಘಟಕಕ್ಕೆ ತಗಲುವ ಆಹಾರ, ವಸತಿ, ಉಡುಪು, ಶಿಕ್ಷಣ, ಆರೋಗ್ಯ ಇತ್ಯಾದಿ 6 ಘಟಕ ವೆಚ್ಚಗಳನ್ನು ಮಾರುಕಟ್ಟೆ ಸರ್ವೇ ಮಾಡಿ ವೈಜ್ಞಾನಿಕವಾಗಿ ನಿಗದಿಪಡಿಸಲಾಗಿದೆ. ನ್ಯಾಯಾಲಯಗಳ ನಿರ್ದೇಶನದಂತೆ ವೇತನ ಪರಿಷ್ಕರಣೆ ಸಮಪರ್ಕ ಮತ್ತು ನ್ಯಾಯಯುತವಾಗಿದೆ ಎಂದು ಅವರು ತಿಳಿಸಿದರು.

ಕೂಡಲೇ ಸರ್ಕಾರವು ತಡೆಹಿಡಿದ ವೇತನ ಪರಿಷ್ಕರಣೆಯ ಕನಿಷ್ಠ ವೇತನ ಆದೇಶವನ್ನು ಅಧಿಕೃತವಾಗಿ ಜಾರಿಗೊಳಿಸಲಿ. ಕನಿಷ್ಠ ವೇತನ ನಮ್ಮ ಸಂವಿಧಾನಬದ್ಧ ಹಕ್ಕು- ಅದು ಭಿಕ್ಷೆ ಅಲ್ಲ. ಧ್ವನಿ ಎತ್ತಿ ಹೋರಾಟಕ್ಕೆ ಸಜ್ಜಾಗಿದ್ದೇವೆ. ರಾಜ್ಯದ ಎಲ್ಲಾ ವಿವಿಗಳ ಗುತ್ತಿಗೆ, ಹೊರ ಗುತ್ತಿಗೆ ಕಾರ್ಮಿಕರು ಸೆ.2ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ರಾಜ್ಯಮಟ್ಟದ ಅಹೋರಾತ್ರಿ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಾಶ ಮನವಿ ಮಾಡಿದರು.

ಒಕ್ಕೂಟದ ಮುಖಂಡರಾದ ಮಂಜುನಾಥ ಕೈದಾಳೆ ಇತರರು ಇದ್ದರು.

- - -

-31ಕೆಡಿವಿಜಿ22: ದಾವಣಗೆರೆ ತಾಲೂಕಿನ ಶಿವಗಂಗೋತ್ರಿಯ ದಾವಣಗೆರೆ ವಿ.ವಿ. ಮುಂಭಾಗದಲ್ಲಿ ಸೋಮವಾರ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ ಗುತ್ತಿಗೆ, ಹೊರಗುತ್ತಿಗೆ ಕಾರ್ಮಿಕರು ಪ್ರತಿಭಟನೆ ನಡೆಸಿದರು.