ಹಾವೇರಿ: ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗೆ ಗುತ್ತಿಗೆದಾರರೇ ಕಾರಣ. ಡೆಡ್‌ಲೈನ್ ಕಳೆದು ಎರಡು ವರ್ಷಗಳಾದರೂ ಬಹುಗ್ರಾಮ ಯೋಜನೆ ಸೇರಿದಂತೆ ಎಲ್ಲ ನೀರು ಪೂರೈಕೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ನೋಟಿಸ್ ನೀಡಿ, ದಂಡ ವಿಧಿಸಿದರೂ ನಿರ್ಲಕ್ಷ್ಯ ವಹಿಸಿದ್ದು, ಅವರ ಮೇಲೆ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳು ಗುರುವಾರ ಕರೆದಿದ್ದ ಸಚಿವರು, ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳ ಸಭೆಯಲ್ಲಿ ಅವರು ಮಾತನಾಡಿದರು. ಸುಮಾರು ಹತ್ತಕ್ಕೂ ಹೆಚ್ಚು ಸಲ ಅವಧಿ ವಿಸ್ತರಣೆ ಮಾಡಿಸಿಕೊಂಡಿದ್ದಾರೆ. ಆದರೂ ಸಹ ಅನುಷ್ಠಾನಗೊಳಿಸುತ್ತಿಲ್ಲ ಎಂದು ಹೇಳಿದರು.ಜಿಲ್ಲೆಯಲ್ಲಿ 451 ಗ್ರಾಮಗಳಿದ್ದು, 281 ಗ್ರಾಮಗಳಿಗೆ ಚಿಕ್ಕ ಚಿಕ್ಕ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳ ಮೂಲಕ ನೀರು ಒದಗಿಸಲಾಗುತ್ತಿದೆ. ಇತರ 541 ಗ್ರಾಮಗಳಿಗೆ ನೀರು ಪೂರೈಕೆ ಮಾಡಲು ತಡಸ, ಆಣೂರು ಮತ್ತು ಹಂಸಭಾವಿ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳನ್ನು ರೂಪಿಸಲಾಗಿದೆ. ಈ ಮೂರೂ ಯೋಜನೆಗಳು ಅನುಷ್ಠಾನಕ್ಕೆ ಬಂದರೆ ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಿದಂತಾಗಲಿದೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.ತಡಸ ಯೋಜನೆ 2024ರ ಅಗಸ್ಟ್, ಆಣೂರು ಯೋಜನೆ 2024ರ ಫೆಬ್ರವರಿ ಹಾಗೂ ಹಂಸಭಾವಿ ಯೋಜನೆ 2024ರ ಜೂನ್‌ಗೆ ಅನುಷ್ಠಾನಕ್ಕೆ ಬರಬೇಕಿತ್ತು. ಗುತ್ತಿಗೆದಾರರು ಪದೇಪದೆ ಅವಧಿ ವಿಸ್ತರಣೆ ಮಾಡಿಸಿಕೊಳ್ಳುತ್ತಿದ್ದಾರೆ. ಪ್ರತಿಶತ 80ಕ್ಕೂ ಹೆಚ್ಚು ಹಣ ಪಾವತಿ ಮಾಡಲಾಗಿದೆ. ಆದರೂ ಇನ್ನೂ ವಿಳಂಬ ಮಾಡುತ್ತಿದ್ದಾರೆ ಎಂದು ಹೇಳಿದರು.ಹಾವೇರಿ ನಗರಕ್ಕೆ ಈಗ 15 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುವ ಪರಿಸ್ಥಿತಿ ಇದೆ. 20*7 ಹಾಗೂ ಒಳಚರಂಡಿ ಯೋಜನೆ ಅನುಷ್ಠಾನದ ಗುತ್ತಿಗೆ ಪಡೆದಿರುವ ವ್ಯಕ್ತಿ ಕೋಲ್ಕತ್ತ ಕೋರ್ಟ್‌ನಿಂದ ತಡೆಯಾಜ್ಞೆ ತರುತ್ತಾರೆ. ತಾವೂ ಕೆಲಸ ಮಾಡುತ್ತಿಲ್ಲ, ಬೇರೆಯವರಿಗೂ ಕೆಲಸ ಮಾಡಲು ಬಿಡುತ್ತಿಲ್ಲ. ಗುತ್ತಿಗೆದಾರರೇ ಹಾವೇರಿ ಜಿಲ್ಲೆಯ ನೀರಿನ ಸಮಸ್ಯೆ ಪರಿಹಾರಕ್ಕೆ ಅಡ್ಡಿಯಾಗಿದ್ದಾರೆ ಎಂದರು.ಇದಕ್ಕೆ ಸಹಮತ ವ್ಯಕ್ತಪಡಿಸಿದ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅವರು, ಹಾವೇರಿ ನಗರದ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಕ್ಕೆ ಅಗತ್ಯ ಹಣ ಬಿಡುಗಡೆ ಮಾಡಲಾಗುವುದು ಎಂದು ಹಾವೇರಿಗೆ ಮೊದಲ ಬಾರಿ ಆಗಮಿಸಿದಾಗ ಭರವಸೆ ನೀಡಿದ್ದೀರಿ, ದಯವಿಟ್ಟು ಅಗತ್ಯ ಹಣ ಬಿಡುಗಡೆ ಮಾಡಿ ಯೋಜನೆ ಅನುಷ್ಠಾನಕ್ಕೆ ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್ ಅವರಿಂದ ಮಾಹಿತಿ ಪಡೆದ ನಗರಾಭಿವೃದ್ಧಿ ಸಚಿವ ಸುರೇಶ್ ಅವರು, ಯೋಜನೆ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಗುತ್ತಿಗೆದಾರರ ಬಗ್ಗೆ ಸಚಿವ ಶಿವಾನಂದ ಪಾಟೀಲ ಅವರು ಹೇಳುತ್ತಿರುವ ಅಭಿಪ್ರಾಯ ಸರಿ ಇದೆ. ಕೆಲವು ದೊಡ್ಡ ದೊಡ್ಡ ಕಂಪನಿಗಳು ರಾಜ್ಯದ ಹಲವು ಯೋಜನೆಗಳ ಗುತ್ತಿಗೆ ಪಡೆದುಕೊಂಡಿವೆ. ಆದರೆ ಕಾಲಮಿತಿಯಲ್ಲಿ ಪೂರ್ಣಗೊಳಿಸುತ್ತಿಲ್ಲ. ಪ್ರಶ್ನೆ ಮಾಡಿದರೆ ಎಲ್ಲೆಲ್ಲಿಂದಲೋ ಪೋನ್ ಕರೆ ಮಾಡಿಸಿ ಒತ್ತಡ ತರುತ್ತಿದ್ದಾರೆ. ಅವರ ಇಂತಹ ವರ್ತನೆಯನ್ನು ಸರ್ಕಾರ ಸಹಿಸಬಾರದು ಎಂದು ಹೇಳಿದರು. ಜಿಲ್ಲಾಧಿಕಾರಿ ಡಾ. ಮಹಾಂತೇಶ ದಾನಮ್ಮನವರ್ ಅವರು ಹಾವೇರಿ ನಗರದ ನೀರು ಪೂರೈಕೆ ಯೋಜನೆಯ ಯುಎಲ್‌ಬಿ ಪಾಲು ಪೆಂಡಿಂಗ್ ಇದೆ. ಯೋಜನೆಯ ಅನುಷ್ಠಾನಕ್ಕೆ 40 ಕೋಟಿ ರು. ಅನುದಾನದ ಅಗತ್ಯವಿದೆ ಎಂದು ಸಭೆಯ ಗಮನಕ್ಕೆ ತಂದರು. ಎಷ್ಟೇ ದಂಡ ಹಾಕಿದರೂ, ನೋಟಿಸ್ ನೀಡಿದರೂ ಗುತ್ತಿಗೆದಾರರ ವರ್ತನೆಯಲ್ಲಿ ಬದಲಾವಣೆ ಕಾಣಿಸುತ್ತಿಲ್ಲ. ಹೀಗಾಗಿ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಕ್ಕೆ ತರಲು ಗುತ್ತಿಗೆದಾರರ ಮೇಲೆ ನಿಯಂತ್ರಣ ಸಾಧಿಸುವುದು ಅಗತ್ಯವಾಗಿದ್ದು, ಕಾನೂನು ತರಬೇಕಾಗಿದೆ ಎಂದು ನಗರಾಭಿವೃದ್ಧಿ ಸಚಿವ ಸುರೇಶ್ ಅವರು ಹೇಳಿದರು.ನೋಟಿಸ್ ನೀಡಿದರೂ ಕಾಲಮಿತಿಯಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆ ಗುತ್ತಿಗೆ ಪಡೆದ ಏಜೆನ್ಸಿಗಳು ಎಷ್ಟೇ ಪ್ರಭಾವಿಯಾಗಿರಲಿ, ದೊಡ್ಡ ಕಂಪನಿಯಾಗಿದ್ದರೂ ರದ್ದುಪಡಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದರು.ರಾಜ್ಯದ ಬಹುತೇಕ ಜಿಲ್ಲೆಗಳ ಕುಡಿಯುವ ನೀರು ಪೂರೈಕೆ ಯೋಜನೆಗಳ ಗುತ್ತಿಗೆ ಪಡೆದಿರುವ ದೊಡ್ಡ ದೊಡ್ಡ ಕಂಪನಿಗಳು ಸಕಾಲದಲ್ಲಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿಲ್ಲ. ಹೀಗಾಗಿ ನೀರಿನ ಸಮಸ್ಯೆಗೆ ಪರಿಹಾರದ ಪ್ರಯತ್ನಗಳು ಸಫಲವಾಗುತ್ತಿಲ್ಲ ಎಂದು ಹಲವು ಸಚಿವರು ಹೇಳಿದ ಹಿನ್ನೆಲೆಯಲ್ಲಿ, ಡೆಡ್‌ಲೈನ್ ಪಾಲಿಸದಿದ್ದರೆ ಸಹಿಸಿಕೊಳ್ಳುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರು.ಪ್ರತ್ಯೇಕ ಸಭೆ: ಅಪೂರ್ಣಗೊಂಡಿರುವ ಕುಡಿಯುವ ನೀರು ಪೂರೈಕೆ ಯೋಜನೆಗಳ ಸ್ಥಿತಿಗತಿ ಬಗ್ಗೆ ಚರ್ಚೆ ಹಾಗೂ ಅನುಷ್ಠಾನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಸಭೆ ಕರೆಯಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.2023ರಲ್ಲಿ ನೀರಿನ ಸಮಸ್ಯೆ ಮತ್ತು ಪರಿಹಾರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆಯಲ್ಲೂ ಗುತ್ತಿಗೆದಾರರ ಸಮಸ್ಯೆಯಿಂದ ಯೋಜನೆಗಳು ವಿಳಂಬವಾಗುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಎರಡು ವರ್ಷಗಳ ನಂತರವೂ ಈ ಸಮಸ್ಯೆ ಜೀವಂತವಾಗಿದೆ. ಹೀಗಾಗಿ ಪರಿಹಾರ ಕಂಡುಕೊಳ್ಳಲು ಪ್ರತ್ಯೇಕ ಸಭೆ ಕರೆಯಲಾಗುವುದು. ಈ ಸಭೆಯಲ್ಲಿ ಪ್ರಸ್ತುತ ಬೇಸಿಗೆ ದಿನಗಳಲ್ಲಿ ಎದುರಾಗಬಹುದಾದ ಸಮಸ್ಯೆ ಮತ್ತು ಪರಿಹಾರ ಕ್ರಮಗಳ ಬಗ್ಗೆ ಸೀಮಿತವಾಗೋಣ ಎಂದು ಹೇಳಿದರು.