ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕಟ್ಟಡ ಗುತ್ತಿಗೆದಾರನನ್ನು ಕೊಲೆ ಮಾಡಿರುವ ಆರೋಪದ ಮೇಲೆ ನವನಗರ ಠಾಣೆ ಪೊಲೀಸರು ಛತ್ತೀಸಗಡ ಮೂಲದ ಮೂವರು ಕಾರ್ಮಿಕರನ್ನು ಬಂಧಿಸಿದ್ದಾರೆ.
ಹುಬ್ಬಳ್ಳಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕಟ್ಟಡ ಗುತ್ತಿಗೆದಾರನನ್ನು ಕೊಲೆ ಮಾಡಿರುವ ಆರೋಪದ ಮೇಲೆ ನವನಗರ ಠಾಣೆ ಪೊಲೀಸರು ಛತ್ತೀಸಗಡ ಮೂಲದ ಮೂವರು ಕಾರ್ಮಿಕರನ್ನು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಯ ತಿಕ್ಕೋಟಾದ ಕಟ್ಟಡ ಗುತ್ತಿಗೆದಾರ ವಿಠ್ಠಲ್ ರಾಠೋಡ್ (60) ಕೊಲೆಗೀಡಾದ ವ್ಯಕ್ತಿ. ಛತ್ತೀಸಗಡದ ಮೇಘವ್ ಸತನಾಮಿ, ವಿಮಲಾ ಸತನಾಮಿ ಮತ್ತು ಭಗವಾನದಾಸ್ ಸತನಾಮಿ ಕೊಲೆ ಮಾಡಿದ ಆರೋಪಿಗಳು.ವಿಮಲಾ ಅವರು ವಿಠ್ಠಲ್ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಕ್ಕೆ ಕೋಪಗೊಂಡ ಅವರ ಪತಿ ಮೇಘವ್ ತನ್ನ ಪುತ್ರ ಭಗವಾನದಾಸ್ ಜತೆ ಸೇರಿಕೊಂಡು ಕಳೆದ ಶನಿವಾರ ರಾತ್ರಿ ಬಡಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ವಿಠ್ಠಲ್ ಅವರ ಪುತ್ರ ಸುನೀಲ್ ದೂರು ದಾಖಲಿಸಿದ್ದಾರೆ.
ಏನಿದು ಪ್ರಕರಣ?ನವನಗರದ ಕಾನೂನು ವಿವಿ ಆಡಳಿತ ಭವನದ ಶೆಡ್ ಬಳಿ ಜ. 10ರಂದು ರಾತ್ರಿ 9.30ರ ವೇಳೆಗೆ ವಿಠ್ಠಲ್ ಅವರ ಶವ ಪತ್ತೆಯಾಗಿತ್ತು. ಕುಡಿದು ಬಿದ್ದು ಮೃತಪಟ್ಟಿರುವ ಅನುಮಾನದ ಮೇಲೆ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದ್ದರು. ಅನುಮಾನ ಬಂದು ಸ್ಥಳ ಪರಿಶೀಲನೆ ಹಾಗೂ ಸಾಕ್ಷಿಗಳ ವಿಚಾರಣೆ ನಡೆಸಿದ ವೇಳೆ ಕೊಲೆ ಎಂದು ತಿಳಿದು ಬಂದಿತ್ತು. ಆಗ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ ಬಳಿಕ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.
ಈ ಕುರಿತು ಮಾಹಿತಿ ನೀಡಿದ ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಗುತ್ತಿಗೆದಾರ ವಿಠ್ಠಲ್ ಅವರು, ಕಾನೂನು ವಿವಿ ಆಡಳಿತ ಸೌಧದಲ್ಲಿನ ಕೆಲವು ಕೆಲಸಗಳನ್ನು ಗುತ್ತಿಗೆ ಪಡೆದು, ಛತ್ತೀಸಘಡ ಮೂವರು ಕಾರ್ಮಿಕರು ಇರುವ ಕುಟುಂಬದಿಂದ ಕೆಲಸ ಮಾಡಿಸುತ್ತಿದ್ದರು. ಕುಟುಂಬದ ಮಹಿಳೆಯೊಂದಿಗೆ ವಿಠ್ಠಲ್ ಸಲುಗೆಯಿಂದ ಇದ್ದರು. ಇದನ್ನು ಕಂಡ ವಿಮಲಾ ಪತಿ ಹಾಗೂ ಪುತ್ರನು ವಿಠ್ಠಲರೊಂದಿಗೆ ಜಗಳವಾಡಿದ್ದಾರೆ. ಈ ವೇಳೆ ಕೋಪಗೊಂಡ ಮಗ ಭಗವಾನದಾಸ್ ಬಡಿಗೆಯಿಂದ ವಿಠ್ಠಲರ ತಲೆಗೆ ಹೊಡೆದಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ನಂತರ ಕುಡಿದು ಮೃತಪಟ್ಟಿದ್ದಾರೆ ಎಂದು ಸಾಕ್ಷ್ಯಗಳನ್ನು ನಾಶ ಮಾಡಿ, ಘಟನೆ ಮುಚ್ಚಿಹಾಕಲು ಯತ್ನಿಸಿದ್ದರು ಎಂದು ವಿವರಿಸಿದರು.