ಸಾರಾಂಶ
ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ ಸರ್ಕಾರಿ ಯೋಜನೆಗಳ ಸಣ್ಣ ವಿದ್ಯುತ್ ಕಾಮಗಾರಿಗಳ ಕಾರ್ಯಾದೇಶಗಳನ್ನು ಕ್ರೋಢಿಕರಿಸಿ, ಬೃಹತ್‌ಮಟ್ಟದ ದರ ಒಪ್ಪಂದ ಮತ್ತು ಟೆಂಡರ್ ಕರೆದಿರುವ ಮೆಸ್ಕಾಂ ವಿರುದ್ಧ ಜ.17ರಿಂದ ನಗರದ ಮೆಸ್ಕಾಂ ವಿದ್ಯುತ್ ಭವನ ಎದುರು ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಸದಸ್ಯ ಮಹಾಲಿಂಗೇಗೌಡ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ ಸರ್ಕಾರಿ ಯೋಜನೆಗಳ ಸಣ್ಣ ವಿದ್ಯುತ್ ಕಾಮಗಾರಿಗಳ ಕಾರ್ಯಾದೇಶಗಳನ್ನು ಕ್ರೋಢಿಕರಿಸಿ, ಬೃಹತ್‌ಮಟ್ಟದ ದರ ಒಪ್ಪಂದ ಮತ್ತು ಟೆಂಡರ್ ಕರೆದಿರುವ ಮೆಸ್ಕಾಂ ವಿರುದ್ಧ ಜ.17ರಿಂದ ನಗರದ ಮೆಸ್ಕಾಂ ವಿದ್ಯುತ್ ಭವನ ಎದುರು ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಸದಸ್ಯ ಮಹಾಲಿಂಗೇಗೌಡ ಹೇಳಿದರು.ನಗರದ ಪ್ರೆಸ್ ಟ್ರಸ್ಟ್‌ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಧರಣಿ ಸತ್ಯಾಗ್ರಹದಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಸುಮಾರು 500ಕ್ಕೂ ಹೆಚ್ಚು ಗುತ್ತಿಗೆದಾರರು ಇದರಲ್ಲಿ ಭಾಗವಹಿಸಲಿದ್ದಾರೆ. ಶಿವಮೊಗ್ಗ ಜಿಲ್ಲಾದ್ಯಂತ ಸಾವಿರಕ್ಕೂ ಹೆಚ್ಚು ಗುತ್ತಿಗೆದಾರರು ಹಾಗೂ 15 ಸಾವಿರಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಈ ಕೆಲಸವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಈಗ ಮೆಸ್ಕಾಂನ ಈ ನಿರ್ಧಾರದಿಂದ ಇವರೆಲ್ಲರೂ ಬೀದಿ ಪಾಲಾಗುತ್ತಾರೆ ಎಂದು ದೂರಿದರು.
ಅಕ್ರಮ-ಸಕ್ರಮ, ಗಂಗಾ ಕಲ್ಯಾಣ, ಕುಡಿಯುವ ನೀರಿನ ಯೋಜನೆ, ರೀಕಂಡಕ್ಟರಿಂಗ್ ಲಿಂಕ್‌ಲೈನ್ ಹಾಗೂ ಮುಂದಿರುವ ಕಂಬಗಳ ಕಾಮಗಾರಿಗಳನ್ನು ಕ್ರೋಢೀಕರಿಸಿ ಈಗಾಗಲೇ ಕರೆದಿರುವ ಬೃಹತ್ ಮಟ್ಟದ ದರ ಒಪ್ಪಂದ ಹಾಗೂ ಟೆಂಡರ್‌ಗಳನ್ನು ರದ್ದುಪಡಿಸಬೇಕು. ₹1 ಲಕ್ಷದಿಂದ ₹5 ಲಕ್ಷದವರೆಗಿನ ಕಾಮಗಾರಿಗಳನ್ನು ಸ್ಥಳೀಯ ವಿದ್ಯುತ್ ಗುತ್ತಿಗೆದಾರರಿಗೆ ಎಸ್.ಆರ್. ದರದಲ್ಲಿ ನೇರವಾಗಿ ಪೂರ್ಣ ಅಥವಾ ಆಂಶಿಕ ಗುತ್ತಿಗೆ ನೀಡುವ ಆದೇಶವಿದ್ದರೂ ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ ಟೆಂಡರ್ ಕರೆಯುವುದು ಸರಿಯಲ್ಲ ಎಂದರು.ಶೇ.5 ಮೇಲ್ವಿಚಾರಣ ಶುಲ್ಕ ಸರ್ಕಾರದ ಆದೇಶವಿದ್ದು, ಹಿಂದಿನ ಶೇ.10 ಮೇಲ್ವಿಚಾರಣ ಪಾವತಿಸಲು ವಿದ್ಯುತ್ ಮಂಜೂರಾಗಿ ನೀಡಿರುವುದರ ವಿರುದ್ಧ, ನೀರಾವರಿ ಪಂಪ್ ಸೆಟ್‍ಗಳಿಗೆ ಸ್ವಯಂ ಆರ್ಥಿಕ ಯೋಜನೆಯಲ್ಲಿ ಮಾಡುವ ಕಾಮಗಾರಿಗಳ ವಿದ್ಯುತ್ ಮಂಜೂರಾತಿಗಳನ್ನು ವಿದ್ಯುತ್ ಜಾಲದಿಂದ 500 ಮೀಟರ್ ಒಳಗಿನ ಮಿತಿ ವಿರುದ್ಧ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಎನ್.ಕುಮಾರ್, ಎನ್.ವಿಜಯ್‍ಕುಮಾರ್, ಶಶಿಕಾಂತ್, ಮಂಜುನಾಥ್ ಮತ್ತಿತರರು ಇದ್ದರು.- - - (-ಸಾಂದರ್ಭಿಕ ಚಿತ್ರ)