ಸಾರಾಂಶ
ಕನ್ನಡಪ್ರಭ ವಾರ್ತೆ ಗುಬ್ಬಿ
ನಮ್ಮ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛತೆಯಿಂದ ಕಾಪಾಡಿಕೊಂಡರೆ ಗ್ರಾಮವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬಹುದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಶಿವಪ್ರಕಾಶ್ ತಿಳಿಸಿದರು.ತಾಲೂಕಿನ ಎಂ ಎಚ್ ಪಟ್ಟಣ ಗ್ರಾಮ ಪಂಚಾಯಿತಿ ಸಹಯೋಗದಿಂದ ಏರ್ಪಡಿಸಿದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾವು ಪ್ರತಿದಿನ ಬಳಸುವ ಪ್ಲಾಸ್ಟಿಕ್ ನಮ್ಮ ಆರೋಗ್ಯದ ಮೇಲೆ ಬೀರುವ ಅಡ್ಡ ಪರಿಣಾಮದ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಪ್ಲಾಸ್ಟಿಕ್ ನಿಂದ ಕ್ಯಾನ್ಸರ್ ಸಹ ಬರಬಹುದು. ನಾವು ಮುಂದಿನ ಪೀಳಿಗೆಗೆ ಏನಾದರೂ ನೀಡುತ್ತೇವೆ ಎಂದರೆ ಉತ್ತಮ ಪರಿಸರ ಹಾಗೂ ಸ್ವಚ್ಛತೆ. ಈ ನಿಟ್ಟಿನಲ್ಲಿ ತಾಲೂಕಿನ 34 ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಇ ಸೇವಾ ಕಾರ್ಯಕ್ರಮವನ್ನು ಆರಂಭ ಮಾಡಲಾಗಿದ್ದು ಸ್ವಚ್ಛತೆಯ ಜೊತೆಗೆ ಗ್ರಾಮದ ಜನರಿಗೆ ಮಾಹಿತಿ ಒದಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಸಹಾಯಕ ನಿರ್ದೇಶಕ ಜೆ.ಬಿ. ರಂಗನಾಥ್ ಮಾತನಾಡಿ, ಭಾರತವನ್ನು ಸ್ವಚ್ಛ ಮತ್ತು ಆರೋಗ್ಯಕರವನ್ನಾಗಿ ಮಾಡುವ ಪ್ರಮುಖ ಜಾಗೃತಿ ಮತ್ತು ನೈರ್ಮಲ್ಯ ಯೋಜನೆಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದಿರುವುದು, ಕಸದ ತೊಟ್ಟಿಗಳ ಬಳಕೆ, ಬಯಲು ಶೌಚವನ್ನು ನಿಲ್ಲಿಸಲು ಶೌಚಾಲಯಗಳ ನಿರ್ಮಾಣ, ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ. ಈ ಅಭಿಯಾನವು ಸಾಮಾಜಿಕ, ಆರ್ಥಿಕ ಮತ್ತು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ, ಪ್ರತಿಯೊಬ್ಬ ನಾಗರಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಲು ಮತ್ತು ಜವಾಬ್ದಾರಿಯುತ ನೈರ್ಮಲ್ಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಬೇಕು ಎಂದರು.ಗ್ರಾಮ ಪಂಚಾಯಿತಿ ಸಮುದಾಯ ಭವನದ ಹತ್ತಿರ ಶಾಲಾ ಮಕ್ಕಳು ಮುಖ್ಯೋಪಾಧ್ಯಾಯರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರೊಂದಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಹತ್ತಿರ ಸ್ವಚ್ಛತೆಯನ್ನು ಮಾಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಸ್.ಜೆ.ಯೋಗೀಶ್, ಉಪಾಧ್ಯಕ್ಷೆ ಭಾಗ್ಯಮ್ಮಪಾಂಡುರಂಗಯ್ಯ,ಗ್ರಾಮ ಸದಸ್ಯರಾದ ನಾಗೇಶ್, ಗಂಗಾಧರಯ್ಯ, ಬೋರಯ್ಯ, ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಕೆ.ಎಂ. ಶೇಖರ್ , ಎಸ್ ಡಿ ಎ ಕೆ.ಎನ್.ಗೀತಾ ತಾಲೂಕು ಐಇಸಿ ಸಂಯೋಜಕರು ರಾಘವೇಂದ್ರ, ವೆಂಕಟಲಕ್ಷ್ಮಮ್ಮ, ರಾಜಣ್ಣ ಹಾಗೂ ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.