ಮಲೇರಿಯ ಮುಕ್ತ ಚಿತ್ರದುರ್ಗಕ್ಕೆ ಸಹಕರಿಸಿ

| Published : Jun 13 2024, 12:49 AM IST

ಸಾರಾಂಶ

ಚಿತ್ರದುರ್ಗದ ಕಬೀರಾನಂದಾಶ್ರಮದಲ್ಲಿ ಜನ ಜಾಗೃತಿ ಜಾಥಾ ಮಲೇರಿಯಾ ವಿರೋಧಿ ಮಾಸಾಚರಣೆಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಮಲೇರಿಯಾ ಮುಕ್ತ ಚಿತ್ರದುರ್ಗಕ್ಕಾಗಿ ಎಲ್ಲರೂ ಸಹಕರಿಸಿ ಎಂದು ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಕರೆ ನೀಡಿದರು.

ಇಲ್ಲಿನ ಕರುವಿನಕಟ್ಟೆ ವೃತ್ತ ಸಮೀಪದ ಕಬೀರಾನಂದಾಶ್ರಮದ ಶಾಲಾ ಮಕ್ಕಳಿಂದ ಬುಧವಾರ ಜನ ಜಾಗೃತಿ ಜಾಥಾ, ಮಲೇರಿಯಾ ವಿರೋಧಿ ಮಾಸಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು ಮಲೇರಿಯ ರೋಗದ ಬಗ್ಗೆ ನಿರ್ಲಕ್ಷ್ಯ ತರವಲ್ಲ ಎಂದರು.

ಮುಖ್ಯ ಆರೋಗ್ಯ ಮೇಲ್ವಿಚಾರಣಾಧಿಕಾರಿ ಎಂ.ಬಿ.ಹನುಮಂತಪ್ಪ ಮಾತನಾಡಿ, ಮಾನ್ಸೂನ್ ದಿನಗಳಲ್ಲಿ ಮಳೆಯ ಕಾರಣ ಮಾನವ ನಿರ್ಮಿತ ಘನ ತ್ಯಾಜ್ಯ ವಸ್ತುಗಳಾದ ಎಳನೀರಿನ ಬುರುಡೆ, ಒಡೆದ ಮಡಕೆ ಹೆಂಚು, ಚಿಪ್ಪು ಗುಂಡಿಗಳಲ್ಲಿ ನೀರು ಸೇರಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗಿ ಕೀಟ ಜನ್ಯ ರೋಗಗಳಾದ ಮಲೇರಿಯ, ಡೆಂಘೀ, ಚಿಕೂನ್ ಗುನ್ಯಾ, ಆನೆಕಾಲು ರೋಗ ಹರಡುತ್ತವೆ. ಸಾರ್ವಜನಿಕರು ಬುದ್ಧಿವಂತರಾಗಿ ಮನೆಯ ಸುತ್ತಮುತ್ತಲಿನ ಪರಿಸರ ಸೊಳ್ಳೆಗಳ ತಾಣವಾಗದಂತೆ ಕ್ರಮವಹಿಸಬೇಕೆಂದರು.

ಜಾಥಾವು ಕಬೀರಾನಂದ ಶಾಲೆಯಿಂದ ಪ್ರಾರಂಭವಾಗಿ ಕರುವಿನಕಟ್ಟೆ ವೃತ್ತ, ಏಕನಾಥೇಶ್ವರಿ ಪಾದ ಗುಡಿಯವರೆಗೆ ಜರುಗಿತು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಬುದ್ದ ನಗರ ಆರೋಗ್ಯ ಕೇದ್ರದ ವೈದ್ಯಾಧಿಕಾರಿ ಡಾ.ಸುರೇಂದ್ರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಗುರುಮೂರ್ತಿ, ರಂಗಾರೆಡ್ಡಿ, ಪ್ರವೀಣ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕೋಟೇಶ್ ಚಕ್ರವರ್ತಿ, ಪಾರ್ವತಿ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳಾದ ತಿಪ್ಪಮ್ಮ, ಗೀತಾ, ಸುಜಾತ, ಏಕಾಂತಮ್ಮ ಶಾಲಾ ಶಿಕ್ಷಕರಾದ ನವೀನ್, ಪರಮೇಶ್ವರಪ್ಪ, ಆಶಾ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.