ಶಾಂತಿಯುತ ಹೋಳಿ ಆಚರಣೆಗೆ ಸಹಕರಿಸಿ: ನಾಗರಾಜ

| Published : Mar 14 2025, 12:35 AM IST

ಸಾರಾಂಶ

ಶಾಂತಿಯುತ ಹೋಳಿ ಆಚರಣೆಗೆ ಪ್ರತಿಯೊಬ್ಬರೂ ಸಹಕರಿಸಬೇಕು.

ಪೊಲೀಸ್‌ ಠಾಣೆಯಲ್ಲಿ ಹೋಳಿ ಹಬ್ಬದ ಶಾಂತಿ ಸಭೆ

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಶಾಂತಿಯುತ ಹೋಳಿ ಆಚರಣೆಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಪೊಲೀಸ್‌ ವೃತ್ತ ನಿರೀಕ್ಷಕ ನಾಗರಾಜ ಎಂ. ಕಮ್ಮಾರ ತಿಳಿಸಿದ್ದಾರೆ. ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಹೋಳಿ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡಿ.ಜೆ. ಸೌಂಡ್‌ ವ್ಯವಸ್ಥೆಗೆ ಅವಕಾಶವಿಲ್ಲ ಎಂದ ಅವರು, 1-2 ಸ್ಪೀಕರ್‌ಗಳನ್ನು ಮಾತ್ರ ಅಳವಡಿಸಿಕೊಳ್ಳಬೇಕು ಎಂದು ಹೋಳಿ ಹಬ್ಬದ ಸಮಿತಿಯವರಿಗೆ ಸೂಚಿಸಿದರು.

ಸಣ್ಣ ಪುಟ್ಟ ಸಮಸ್ಯೆಗಳಾದರೆ ನೀವೇ ಪಂಚಾಯ್ತಿ ಮಾಡಲು ಹೋಗಬೇಡಿ, 112ಕ್ಕೆ ಕರೆ ಮಾಡಿ ಎಂದ ಅವರು, ಒಟ್ಟಿನಲ್ಲಿ ಶಾಂತಿಯುತ ಹೋಳಿ ಹಬ್ಬದ ಆಚರಣೆಗೆ ಸರ್ವರೂ ಸಹಕರಿಸಬೇಕು ಎಂದು ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಸ್ನೇಹ ವೃದ್ಧಿಗಾಗಿ ಪರಸ್ಪರ ಬಣ್ಣ ಎರಚುವ ಮೂಲಕ ಅಂಧಕಾರ ಹೋಗಲಾಡಿಸುವ ಹಬ್ಬವೇ ಹೋಳಿ ಹಬ್ಬ ಎಂದರು.

ಪುರಸಭಾ ಮಾಜಿ ಅಧ್ಯಕ್ಷ ಅಬ್ದುಲ್‌ ರಹಿಮಾನ್ ಮಾತನಾಡಿ, ಹೋಳಿ ಹಬ್ಬದಲ್ಲಿ ಸಣ್ಣಪುಟ್ಟ ಸಮಸ್ಯೆ ಎದುರಾದರೆ ನಮಗೆ ತಿಳಿಸಿ ನಾವು ಒಂದು ಟೀಂ ಮಾಡಿಕೊಳ್ಳುತ್ತೇವೆ, ಕರೆ ಮಾಡಿದರೆ ಸಮಸ್ಯೆಯಾದ ಸ್ಥಳಕ್ಕೆ ಆಗಮಿಸಿ ಬಗೆಹರಿಸುತ್ತೇವೆ ಎಂದು ಹೇಳಿದರು.

ಪಿಎಸ್‌ ಐ ಶಂಭುಲಿಂಗ ಹಿರೇಮಠ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಕ್ಕೆ ಕೊರತೆಗಳಿಲ್ಲ, ಶಾಂತಿಯುತವಾಗಿ ಆಚರಿಸೋಣ ಹೇಳಿದರು.

ಪುರಸಭಾ ಸದಸ್ಯ ಕಿರಣ್‌ ಶಾನಬಾಗ್‌ ಈ ವರ್ಷ ಹೊಸದಾಗಿ ಐ.ಬಿ. ವೃತ್ತದಲ್ಲಿ ಹೋಳಿ ಆಚರಣೆಗೆ ಅನುಮತಿ ನೀಡಿ ಎಂದು ಕೋರಿದರು. ಪುರಸಭಾ ಸದಸ್ಯರಾದ ಮಂಜುನಾಥ ಇಜಂತಕರ್, ಉದ್ದಾರ ಗಣೇಶ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ವೆಂಕಟೇಶ, ವಿನಯಗೌಳಿ, ಆದಿತ್ಯ ಸೇರಿದಂತೆ ಇತರರು ಪಾಲ್ಗೊಂಡಿದ್ದರು.