ಸಾರಾಂಶ
ಹರಪನಹಳ್ಳಿ ಉಪ ವಿಭಾಗದ ಸಹಾಯಕ ಆಯುಕ್ತ
ಕನ್ನಡಪ್ರಭ ವಾರ್ತೆ ಕೊಟ್ಟೂರುಕಳೆದ 17 ವರ್ಷಗಳ ಬಳಿಕ ತಾಲೂಕಿನ ಶ್ರೀ ಮೂಗಬಸವೇಶ್ವರ ಸ್ವಾಮಿಯ ರಥೋತ್ಸವವನ್ನು ಆ. 18ರಂದು ಜರುಗಿಸಲು ನಿರ್ಣಯಿಸಿರುವುದರಿಂದ ಚಿರಿಬಿ, ರಾಂಪುರ ಮತ್ತು ಇತರ ಎಲ್ಲಾ ಭಕ್ತರು ಯಶಸ್ವಿಯಾಗಿ ನಡೆಯಲು ಪೂರ್ಣ ಪ್ರಮಾಣದ ಸಹಕಾರ ನೀಡಬೇಕು ಎಂದು ಹರಪನಹಳ್ಳಿ ಉಪ ವಿಭಾಗದ ಸಹಾಯಕ ಆಯುಕ್ತ ಚಿದಾನಂದ ಗುರುಸ್ವಾಮಿ ಕರೆ ನೀಡಿದರು.
ಸೋಮವಾರ ಈ ಸಂಬಂಧ ತಾಲೂಕಿನ ಚಿರಿಬಿ, ರಾಂಪುರ ಗ್ರಾಮಗಳಲ್ಲಿ ಪ್ರತ್ಯೇಕವಾಗಿ ನಡೆದ ಅಭಿಪ್ರಾಯ ಸಂಗ್ರಹ ಸಭೆ ಉದ್ದೇಶಿಸಿ ಅವರು ಮಾತನಾಡಿದರು.ಬಹು ವರ್ಷಗಳ ನಂತರ ಮೂಗಬಸವೇಶ್ವರ ಸ್ವಾಮೀಯ ರಥೋತ್ಸವ ಜರುಗಿಸಲಾಗುತ್ತಿದ್ದು, ವಿಜಯನಗರ ಜಿಲ್ಲಾಧಿಕಾರಿ ಈ ಸಂಬಂಧ ಉಭಯ ಗ್ರಾಮಗಳು ಸೇರಿದಂತೆ ಮತ್ತು ಇತರ ಗ್ರಾಮಗಳ ಭಕ್ತರ ಅಪೇಕ್ಷೆ ವರದಿ ನೀಡುವಂತೆ ಸೂಚಿಸಿದ್ದಾರೆ. ಎರಡು ಗ್ರಾಮಗಳಲ್ಲಿನ ಭಕ್ತರ ಮತ್ತು ಜನತೆಯ ಅಭಿಪ್ರಾಯಗಳನ್ನು ಖುದ್ದಾಗಿ ಆಲಿಸಿದ್ದು, ಸಭೆಯಲ್ಲಿ ಸಂಗ್ರಹವಾದ ವಿವರದ ಸಮಗ್ರ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಿದ್ದೇನೆ. ಜಿಲ್ಲಾಧಿಕಾರಿ ನಂತರ ಈ ಸಂಬಂಧ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ. ಜಾತ್ರ್ಯೋತ್ಸವದ ಯಶಸ್ವಿಗೆ ಪ್ರತಿಯೊಬ್ಬರೂ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಅಲ್ಲದೇ ಅನಗತ್ಯ ಗೊಂದಲಕ್ಕೆ ಯಾರೂ ಒಳಗಾಗಬಾರದು ಎಂದರು.
ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಡನಾಯ್ಕ್ ಮಾತನಾಡಿ, ಜಿಲ್ಲಾಡಳಿತ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಎಲ್ಲಾ ಬಗೆಯ ದಾಖಲೆಗಳ ಸಮಗ್ರ ಮಾಹಿತಿ ಪಡೆದು ಸೂಕ್ತ ತೀರ್ಮಾನಕ್ಕೆ ಬರಲಿದೆ. ಯಾವುದೇ ಹಂತದಲ್ಲಿ ಶಾಂತಿ ಕೆಡದಂತೆ ಪ್ರತಿಯೊಬ್ಬರು ಮುನ್ನೆವರಿಕೆ ವಹಿಸಬೇಕು ಎಂದರು.ತಹಶೀಲ್ದಾರ್ ಅಮರೇಶ್ ಜಿ.ಕೆ., ಸಿಪಿಐ ನಾರಾಯಣ, ಪಿಎಸ್‌ಐ ಗೀತಾಂಜಲಿ ಸಿಂಧೆ ಮತ್ತು ಇತರ ಅಧಿಕಾರಿಗಳು ಇದ್ದರು.ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ನಮ್ಮದು: ಎರಡೂ ಗ್ರಾಮಸ್ಥರ ಅಭಿಪ್ರಾಯಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ತಾಲೂಕಿನ ಚಿರಿಬಿಯಲ್ಲಿ ಪುರಾತನದಿಂದಲೂ ಇದ್ದು, ದೇವಸ್ಥಾನದ ಎಲ್ಲಾ ಬಗೆಯ ಸೇವೆ ಮತ್ತು ಕಾರ್ಯಗಳನ್ನು ಚಿರಿಬಿ ಗ್ರಾಮಸ್ಥರೇ ಮಾಡಿಕೊಂಡು ಬರುತ್ತಿದ್ದಾರೆ. ಇದೀಗ ದೇವಸ್ಥಾನದ ಆಡಳಿತ ಮತ್ತು ಸೇವ ಕಾರ್ಯಕ್ಕೆ ರಾಂಪುರ ಗ್ರಾಮವನ್ನು ಹೆಸರಿಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗುವುದಿಲ್ಲ ಎಂದು ಚಿರಿಬಿ ಗ್ರಾಮದ ಮುಖಂಡರಾದ ವೀರಯ್ಯ, ಅಂಗಡಿ ಮಂಜುನಾಥ , ಹೊಸಮನೆ ತಿಪ್ಪೇಸ್ವಾಮಿ ಹೇಳಿದರು.ಚಿರಿಬಿ ಗ್ರಾಮದಲ್ಲಿ ಅಭಿಪ್ರಾಯ ಸಂಗ್ರಹದ ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸುಮಾರು 600ಕ್ಕೂ ವರ್ಷಗಳ ದೀರ್ಘ ಇತಿಹಾಸ ಇಲ್ಲಿನ ಮೂಗಬಸವೇಶ್ವರ ದೇವಸ್ಥಾನಕ್ಕೆ ಇದೆ. ಚಿರಿಬಿ ಗ್ರಾಮದ ದೇವಸ್ಥಾನ ಎನ್ನುವುದಕ್ಕೆ ಸಾಕಷ್ಟು ದಾಖಲಾತಿಗಳು ಇವೆ. ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ಸಲ್ಲಿಸಿದ್ದೇವೆ. ದೇವಸ್ಥಾನದ ಆಯಾಗಾರರನ್ನಾಗಿ ರಾಂಪುರದವರನ್ನು ನೇಮಿಸಿದರೆ ನಮ್ಮ ವಿರೋಧ ಇದೆ. ಅವರ ಮೂಲಕ ಮತ್ತೆ ರಥೋತ್ಸವ ಮಾಡಲು ಮುಂದಾದರೆ ಯಾವುದೇ ಕಾರಣಕ್ಕೂ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿದರು.ರಾಂಪುರ ಸಭೆ:
ನಂತರ ರಾಂಪುರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮುಖಂಡರಾದ ಚಂದ್ರಶೇಖರಯ್ಯ, ಬಸವರಾಜ, ಮರಿಯಪ್ಪ, ಶಂಭುಲಿಂಗಪ್ಪ ಮಾತನಾಡಿ, ಮೂಗಬಸವೇಶ್ವರ ಸ್ವಾಮಿಯ ಮೂರ್ತಿಯ ಸೇರಿ ಇತರ ಎಲ್ಲಾ ಪ್ರಮುಖ ವಸ್ತು ರಾಂಪುರದಲ್ಲಿದ್ದು, ಇಲ್ಲಿಂದಲೇ ಎಲ್ಲಾ ಬಗೆಯ ಉತ್ಸವಗಳು ಹಿಂದಿನ ಕಾಲದಿಂದ ನಡೆದುಕೊಂಡು ಬಂದಿವೆ. ಈ ಪದ್ದತಿ ಈಗಲೂ ಮುಂದುವರೆಯಬೇಕೆ, ಹೊರತು ಯಾವುದೇ ಚಿರಿಬಿ ಗ್ರಾಮಸ್ಥರನ್ನು ಆಯಾಗಾರರನ್ನಾಗಿ ಮಾಡಲು ಒಪ್ಪುವುದಿಲ್ಲ ಎಂದರು.ಈ ಕುರಿತು ಕೋರ್ಟ್‌ನಲ್ಲಿ ಆ. 28ಕ್ಕೆ ತೀರ್ಮಾನ ಪ್ರಕಟವಾಗಲಿದ್ದು, ತೀರ್ಪು ಚಿರಿಬಿ ಗ್ರಾಮದವರ ಪರವಾಗಿ ಬಂದರೆ ನಾವು ಸುಮ್ಮನೆಯಾಗುತ್ತೇವೆ. ಅಲ್ಲದೇ ಮೇಲಿನ ಕೋರ್ಟ್‌ಗೆ ಹೋಗುವುದಿಲ್ಲ ಅಲ್ಲಿಯವರೆಗೂ ರಾಂಪುರದವರನ್ನೇ ದೇವಸ್ಥಾನದ ಸೇವೆ ಮತ್ತು ಆಡಳಿತಕ್ಕೆ ನೇಮಿಸಬೇಕು ಎಂದು ಹೇಳಿದರು.