ಸಾರಾಂಶ
ದೇವನಹಳ್ಳಿ: ಈಗ ನಡೆಯುತ್ತಿರುವ ಸಮನ್ವಯ ಸಮಿತಿ ಸಭೆ ತಾತ್ಕಾಲಿಕ ವ್ಯವಸ್ಥೆ ಅಲ್ಲ, ಇದು ಶಾಶ್ವತ ವ್ಯವಸ್ಥೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಹೇಳಿದರು.
ತಾಲೂಕಿನ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಆಯೋಜಿಸಿದ್ದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳ ಹೆಸರಿನಲ್ಲಿ ಬಂದಿರುವ ಕಾಂಗ್ರೆಸ್ ಸರ್ಕಾರ ಜನರಿಂದ ಕಿತ್ತುಕೊಳ್ಳುವ ಸರ್ಕಾರ ಆದರೆ ಕೇಂದ್ರದ ಮೋದಿ ಸರ್ಕಾರ ನೀಡುವ ಸರ್ಕಾರವಾಗಿದೆ ಎಂದು ಹೇಳಿದರು.ಪ್ರಧಾನಿ ಮೋದಿಯವರು ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಕೇಂದ್ರದಿಂದ ಆರು ಸಾವಿರ ರು. ಹಾಗು ರಾಜ್ಯದಲ್ಲಿ ಈ ಹಿಂದೆ ಆಡಳಿತದಲ್ಲಿದ್ದ ಬಿಜೆಪಿ 4 ಸಾವಿರ ರು. ರೈತರಿಗೆ ನೀಡಿದೆವು. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ಕಿತ್ತುಕೊಂಡಿದೆ. ಅನೇಕ ಜನಪರ ಯೋಜನೆಗಳನ್ನು ಕಿತ್ತುಕೊಂಡರು ಎಂದು ಹೇಳಿದರು.
ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಸಮನ್ವಯತೆಯಿಂದ ಚುನಾವಣೆಯನ್ನು ಎದುರಿಸಬೇಕು. ಬಿಜೆಪಿ ಕಾರ್ಯಕರ್ತರಿಗೆ ಕೊಡುವಷ್ಠೇ ಗೌರವವನ್ನು ಜೆಡಿಎಸ್ ಕಾರ್ಯಕರ್ತರಿಗೂ ಕೊಡುತ್ತೇನೆ. ಈ ಭಾಗದಲ್ಲಿ ಮೂವರು ಮಾಜಿ ಶಾಸಕರಿದ್ದೀರಿ, ಆದ್ದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತಗಳು ತಂದುಕೊಟ್ಟು ನನ್ನ ಗೆಲುವಿಗೆ ಸಹಕರಿಸಬೇಕು. 3ನೇ ಬಾರಿಗೆ ಪ್ರಧಾನಿ ಮೋದಿ ಅವರ ಗೆಲುವಿಗೆ ರಾಜ್ಯದಿಂದ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಡಬೇಕು ಎಂದು ತಿಳಿಸಿದರು.ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಮುನೇಗೌಡ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಮತಗಳನ್ನು ಸುಧಾಕರ್ ಅವರಿಗೆ ಕೊಡಿಸಬೇಕು. ಚಿಕ್ಕಬಳ್ಳಾಪುರ ಕ್ಷೇತ್ರ ಅಭಿವೃದ್ಧಿ ಪಡಿಸುವಷ್ಟೇ ದೇವನಹಳ್ಳಿ ಕ್ಷೇತ್ರವನ್ನೂ ಅಭಿವೃದ್ಧಿ ಪಡಿಸಬೇಕು ಎಂದು ಹೇಳಿದರು.ಸಮಾರಂಭದಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯುಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕರಾದ ಪಿಳ್ಳಮುನಿಶಾಮಪ್ಪ, ನಿಸರ್ಗ ನಾರಾಯಣಸ್ವಾಮಿ, ಜಿ.ಚಂದ್ರಣ್ಣ, ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ, ಬಮೂಲ್ ಮಾಜಿ ಅಧ್ಯಕ್ಷ ಹಾಡೋನಹಳ್ಳಿ ಅಪ್ಪಯ್ಯಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, . ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎ.ವಿ. ನಾರಾಯಣಸ್ವಾಮಿ, ಎಕೆಪಿ ನಾಗೇಶ್, ಸಿ.ಅಶ್ವತ್ಥನಾರಾಯಣ್, ಬಿಜೆಪಿ ಮತ್ತು ಜೆಡಿಎಸ್ ಜಿಲ್ಲಾ ಹಾಗು ತಾಲೂಕು ಮುಖಂಡರು ಉಪಸ್ಥಿತರಿದ್ದರು.
(ಫೋಟೋ ಕ್ಯಾಫ್ಷನ್)ದೇವನಹಳ್ಳಿ ತಾಲೂಕಿನ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಆಯೋಜಿಸಿದ್ದ ಸಮನ್ವಯ ಸಮಿತಿ ಸಭೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ. ಸುಧಾಕರ್ ಪಾಲ್ಗೊಂಡಿದ್ದರು.