ಸಾರಾಂಶ
ಚುನಾಯಿತ ಪ್ರತಿನಿಧಿಗಳು, ಪಿಡಿಒ, ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು, ಯುವಕ ಸಂಘಗಳು, ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿ ಯಶಸ್ವಿಗೊಳಿಸಬೇಕು
ಗದಗ: ಇತಿಹಾಸ ಪ್ರಸಿದ್ಧಿ ಪಡೆದಿರುವ ಲಕ್ಕುಂಡಿ ಗ್ರಾಮದ ಸ್ವಚ್ಛತೆಯ ಸಂಕಲ್ಪಕ್ಕಾಗಿ ಗ್ರಾಮಸ್ಥರು ಕೈ ಜೋಡಿಸಬೇಕೆಂದು ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ಹೇಳಿದರು.
ಅವರು ತಾಲೂಕಿನ ಲಕ್ಕುಂಡಿ ಗ್ರಾಮದ ಕೆಜಿಎಸ್ ಶಾಲೆಯ ಆವರಣದಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಇಂದಿನಿಂದ ಅ. 2ರ ಗಾಂಧೀ ಜಯಂತಿಯವರೆಗೂ ನಡೆಯುವ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಗ್ರಾಮದ ಶಾಲಾ ಆವರಣ, ಸ್ಮಾರಕಗಳ ಸುತ್ತ ಮುತ್ತಲಿನ ಪ್ರದೇಶ, ಮುಖ್ಯ ರಸ್ತೆಗಳು, ಮಹಾದ್ವಾರ, ಶೌಚಾಲಯ, ದೇವಸ್ಥಾನದ ಸುತ್ತಮುತ್ತ, ಬಸ್ ನಿಲ್ದಾಣ, ಅಂಗನವಾಡಿಗಳು ಸೇರಿದಂತೆ ಅಸ್ವಚ್ಛತೆ ಇರುವ ಕಡೆ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಕೇವಲ ಗ್ರಾಪಂ ಸಿಬ್ಬಂದಿ, ಕಾರ್ಮಿಕರಿಗೆ ಮಾತ್ರವಲ್ಲ ಗ್ರಾಪಂ ಅಧ್ಯಕ್ಷರು, ಚುನಾಯಿತ ಪ್ರತಿನಿಧಿಗಳು, ಪಿಡಿಒ, ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು, ಯುವಕ ಸಂಘಗಳು, ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿ ಯಶಸ್ವಿಗೊಳಿಸಬೇಕು. ಕೊನೆಗೆ ವಿಶೇಷ ಗ್ರಾಮ ಸಭೆ ನಡೆಸುವದರೊಂದಿಗೆ ಸ್ವಚ್ಛತಾ ಕಾರ್ಮಿಕರಿಗೆ ಸನ್ಮಾನ ಮಾಡಿ ಗೌರವಿಸಲಾಗುವುದು. ಆದ್ದರಿಂದ ಗ್ರಾಮಸ್ಥರು ಸಹಕಾರ ನೀಡಬೇಕು ಎಂದರು.
ಈ ವೇಳೆ ಗ್ರಾಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಎಸ್.ಡಿ.ಎಂ.ಸಿ.ಅಧ್ಯಕ್ಷ ನಾಗರಾಜ ಖಂಡು, ಪಿಡಿಒ ರಾಜಕುಮಾರ ಭಜಂತ್ರಿ, ಎಸ್.ಡಿ.ಎ ತುಕಾರಾಮ ಹುಲಗಣ್ಣವರ, ಗ್ರಾಪಂ ಸದಸ್ಯರು, ಮುಖ್ಯೋಪಾಧ್ಯಯರು, ಶಿಕ್ಷಕರು, ಸ್ವಚ್ಛತಾ ಕಾರ್ಮಿಕರು ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.