ತುಮಕೂರು ತಾಲೂಕಿನ ಬೆಳ್ಳಾವಿ ಹೋಬಳಿಯ ಬುಗುಡನಹಳ್ಳಿ ಗ್ರಾಮ ಹಾಗೂ ಕೋರ ಹೋಬಳಿಯ ಸಿ.ಟಿ.ಕೆರೆ ಗ್ರಾಮಗಳಿಗೆ ಭೇಟಿ ನೀಡಿ, ಇ-ಪೌತಿ ಅರ್ಜಿಗಳ ಸ್ವೀಕೃತಿ ಮತ್ತು ವಿಲೇವಾರಿ ಪ್ರಕ್ರಿಯೆಯ ಪ್ರಗತಿಯನ್ನು ಪರಿಶೀಲಿಸಿದರು.

ತುಮಕೂರು: ಇ-ಪೌತಿ ಖಾತಾ ಆಂದೋಲನ–2 ರಾಜ್ಯಾದ್ಯಂತ ಆರಂಭಗೊಂಡಿದ್ದು, ಗ್ರಾಮೀಣ ಪ್ರದೇಶಗಳ ಜನರಿಗೆ ಭೂ ದಾಖಲೆಗಳಿಗೆ ಸಂಬಂಧಿಸಿದ ಸೇವೆಗಳನ್ನು ಸುಲಭವಾಗಿ ಮತ್ತು ತ್ವರಿತವಾಗಿ ಒದಗಿಸುವ ಉದ್ದೇಶ ಹೊಂದಿದೆ. ಗ್ರಾಮಸ್ಥರು ಸಂಬಂಧಿಸಿದ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಅಗತ್ಯ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ ಮಾಡಿದರು.

ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ ಅವರ ನಿರ್ದೇಶನದಂತೆ ಸೋಮವಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು, ತುಮಕೂರು ತಾಲೂಕಿನ ಬೆಳ್ಳಾವಿ ಹೋಬಳಿಯ ಬುಗುಡನಹಳ್ಳಿ ಗ್ರಾಮ ಹಾಗೂ ಕೋರ ಹೋಬಳಿಯ ಸಿ.ಟಿ.ಕೆರೆ ಗ್ರಾಮಗಳಿಗೆ ಭೇಟಿ ನೀಡಿ, ಇ-ಪೌತಿ ಅರ್ಜಿಗಳ ಸ್ವೀಕೃತಿ ಮತ್ತು ವಿಲೇವಾರಿ ಪ್ರಕ್ರಿಯೆಯ ಪ್ರಗತಿಯನ್ನು ಪರಿಶೀಲಿಸಿದರು. ಜಿಲ್ಲೆಯಲ್ಲಿ 3,36,000 ಇ-ಪೌತಿ ಖಾತೆಗಳನ್ನು ಸೃಜಿಸಬೇಕಾಗಿದ್ದು, ಸಾರ್ವಜನಿಕರು ಸೂಕ್ತ ದಾಖಲಾತಿಗಳನ್ನು ಪಡೆದು ಸಾರ್ವಜನಿಕರ ಅರ್ಜಿಗಳನ್ನು ತ್ವರಿತ ಹಾಗೂ ಪಾರದರ್ಶಕವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿಗಳು, ಜನಸಾಮಾನ್ಯರಿಗೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮವಹಿಸುವಂತೆ ತಿಳಿಸಿದರು.

ಇ-ಪೌತಿ ಖಾತಾ ಆಂದೋಲನ–2 ಪ್ರಾರಂಭಿಸಲಾಗಿದ್ದು, ಇದರ ಭಾಗವಾಗಿ ಗ್ರಾಮಗಳಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸ್ಥಳೀಯ ಕಂದಾಯ ಮತ್ತು ಮೋಜಿಣಿ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರನ್ನು ಭೇಟಿ ಮಾಡಿ, ಇ-ಪೌತಿ ಅರ್ಜಿಗಳ ಸ್ವೀಕೃತಿ, ದಾಖಲೆಗಳ ಪರಿಶೀಲನೆ, ಅರ್ಜಿಗಳ ವಿಲೇವಾರಿ ಹಾಗೂ ಖಾತಾ ಬದಲಾವಣೆ ಪ್ರಕ್ರಿಯೆಗಳ ಕುರಿತು ಸಮಗ್ರವಾಗಿ ಚರ್ಚಿಸಿದರು.

ಸಾರ್ವಜನಿಕರಿಗೆ ಕಾರ್ಯಕ್ರಮದ ಉದ್ದೇಶ ಹಾಗೂ ಇದರ ಪ್ರಯೋಜನಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ತುಮಕೂರು ಉಪವಿಭಾಗಾಧಿಕಾರಿ ನಾಹೀದಾ ಜಮ್ ಜಮ್, ತಹಸೀಲ್ದಾರ್ ರಾಜೇಶ್ವರಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.