ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಯಶಸ್ವಿಗೆ ಸಹಕರಿಸಿ

| Published : Sep 05 2024, 12:34 AM IST

ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಯಶಸ್ವಿಗೆ ಸಹಕರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲರೂ ನಿಗದಿಪಡಿಸಿದ ಸಮಯಕ್ಕೆ ಬಂದು ಮಾನವ ಸರಪಳಿ ನಿರ್ಮಿಸಿ ಸಂವಿಧಾನ ಪೀಠಿಕೆ ಹೇಳಬೇಕು

ಮುಂಡರಗಿ: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿಯಾಗಿರುವ ವಿಶ್ವಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ಸೆ.15 ರಂದು ಭಾತೃತ್ವ, ಸಮಾನತೆ, ಸ್ವಾತಂತ್ರ್ಯತೆ ಮತ್ತು ಪ್ರಜಾಪ್ರಭುತ್ವ ಗಟ್ಟಿಗೊಳಿಸುವದಕ್ಕಾಗಿ ರಾಜ್ಯಾದ್ಯಂತ ಏಕಕಾಲದಲ್ಲಿ ಮಾನವ ಸರಪಳಿ ಏರ್ಪಡಿಸುವ ಮೂಲಕ ಗದಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು, ನೌಕರರು, ವಿವಿಧ ಸಂಘ ಸಂಸ್ಥೆ ಮುಖಂಡರು ಪಾಲ್ಗೊಳ್ಳುವ ಮೂಲಕ ಯಶಸ್ವಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ಪಟ್ಟಣದ ಗಾಂಧಿ ಭವನದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಮಾನವ ಸರಪಳಿ ಕುರಿತು ಜರುಗಿದ ಲಕ್ಷ್ಮೇಶ್ವರ,ಮುಂಡರಗಿ, ಶಿರಹಟ್ಟಿ ತಾಲೂಕುಗಳ ಅಧಿಕಾರಿಗಳ ಮತ್ತು ಸಾರ್ವಜನಿಕರ,ಗ್ರಾಪಂ ಇತರ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಎಲ್ಲರೂ ನಿಗದಿಪಡಿಸಿದ ಸಮಯಕ್ಕೆ ಬಂದು ಮಾನವ ಸರಪಳಿ ನಿರ್ಮಿಸಿ ಸಂವಿಧಾನ ಪೀಠಿಕೆ ಹೇಳಬೇಕು. ಇದರಲ್ಲಿ ಆಯಾ ಭಾಗದ ಜವಾಬ್ದಾರಿ ನೀಡಿದವರು ಸಮರ್ಪಕವಾಗಿ ಸಾರ್ವಜನಿಕರು, ವಿದ್ಯಾರ್ಥಿಗಳ ಮತ್ತು ಇತರರ ಮಾನವ ಸರಪಳಿ ನಿರ್ಮಿಸಲು ನಿರ್ದೇಶನ ನೀಡಿ ನಿಮ್ಮ ಭಾಗದ ಗಡಿ ಭಾಗದಿಂದ ಮತ್ತೊಂದು ಗಡಿ ಜಿಲ್ಲೆ ಕೊಪ್ಪಳ ಭಾಗದವರಿಗೂ ಮಾನವ ಸರಪಳಿ ಕೈಕೈ ಹಿಡಿದುಕೊಳ್ಳಬೇಕು ಇದು ಪ್ರಜಾಪ್ರಭುತ್ವಕ್ಕೆ ನಾವು ನೀಡುವ ಗೌರವವಾಗಿದೆ ಎಂದರು.

ಮುಂಡರಗಿ ತಹಸೀಲ್ದಾರ ಪಿ.ಎಸ್. ಯರ್ರಿಸ್ವಾಮಿ ಮಾತನಾಡಿ, ತಾಲೂಕಿನ ಗಡಿಭಾಗದ ಮಲ್ಲಿಕಾರ್ಜುನಪುರ ಗ್ರಾಮದಿಂದ ಮುಂಡರಗಿ ಪಟ್ಟಣ ನಂತರ ಕೊಪ್ಪಳ ಜಿಲ್ಲೆ ಗಡಿಭಾಗದ ಬೆಳಗಟ್ಟಿವರೆಗೆ ತಾಲೂಕಿನ ಆಶಾ, ಅಂಗನವಾಡಿ, ಶಾಲಾ ಶಿಕ್ಷಕರು, ಕಾಲೇಜು ಪ್ರೌಢಶಾಲಾ ವಿದ್ಯಾರ್ಥಿಗಳು ಗ್ರಾಪಂ, ಪುರಸಭೆ ಜನಪ್ರತಿನಿಧಿಗಳು ರೈತ ಸಂಘ ಇತರ ಸಂಘಟನೆಗಳ ಕಾರ್ಯಕರ್ತರು 24 ಸಾವಿರ ಜನರ ಕೈಕೈ ಜೋಡಿಸುವ ಮೂಲಕ ಪ್ರಜಾಪ್ರಭುತ್ವ ದಿನಾಚರಣೆ ಯಶಸ್ವಿಗೊಳಿಸಬೇಕು ಎಂದರು.

ಈ ವೇಳೆ ಜಿಲ್ಲಾ ಹೆಚ್ಚುವರಿ ಪೋಲಿಸ್ ಅಧೀಕ್ಷಕ ಸಂಕದ, ಶಿರಹಟ್ಟಿ ತಹಸೀಲ್ದಾರ್‌ ಅನಿಲ ಬಡಿಗೇರ, ಲಕ್ಷ್ಮೇಶ್ವರ ತಹಸೀಲ್ದಾರ್‌ ವಾಸುದೇವ ಸ್ವಾಮಿ ಮಾತನಾಡಿದರು. ರೈತ ಸಂಘದ ಶಿವಾನಂದ ಇಟಗಿ, ವೆಂಕಟೇಶ ಗುಗ್ಗರಿ, ಶಂಕರಗೌಡ, ಬಿ.ಎಫ್. ಈಟಿ, ಅಡಿವೆಪ್ಪ ಚಲವಾದಿ ಸೇರಿದಂತೆ ಅನೇಕರು ಸಲಹೆ ಸೂಚನೆ ನೀಡಿದರು.

ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಸಿಪಿಐ ಮಂಜುನಾಥ ಕುಸುಗಲ್, ಮುಖ್ಯಾಧಿಕಾರಿ ಹುಲ್ಲಮ್ಮನವರ, ಯೋಜನಾ ನಿರ್ದೇಶಕ ಎಸ್.ಎಸ್. ಕಲ್ಮನಿ, ಪುರಸಭೆ ಸದಸ್ಯರಾದ ಲಿಂಗರಾಜಗೌಡ ಪಾಟೀಲ, ನಾಗರಾಜ ಹೊಂಬಳಗಟ್ಟಿ ಸೇರಿದಂತೆ ವಿವಿಧ ಸಂಘಟನೆಗಳ ಮುಖ್ಯಸ್ಥರು ಇದ್ದರು. ಶ್ರೀಕಾಂತ ಅರಹುಣಸಿ ನಿರೂಪಿಸಿದರು.