ಸಾರಾಂಶ
-ಜ್ಯೋತಿ ಸ್ವೀಕಾರ -ಬೆಂ.ಗ್ರಾ. ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರಕ್ಕೆ ಆಗಮಿಸಿದ ಕೃಷಿ ವಿಜ್ಞಾನ ಕೇಂದ್ರಗಳ ಸುವರ್ಣ ಮಹೋತ್ಸವ ಜ್ಯೋತಿಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಜ್ಞಾನ ಕೇಂದ್ರಗಳ ಸುವರ್ಣ ಮಹೋತ್ಸವದ ಜ್ಯೋತಿ ಸ್ವೀಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ರಾಮನಗರ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥರು ಸುವರ್ಣ ಮಹೋತ್ಸವ ಜ್ಯೋತಿಯನ್ನು ಬೆಂ.ಗ್ರಾ. ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಹನುಮಂತರಾಯ ಅವರಿಗೆ ಹಸ್ತಾಂತರಿಸಿದರು. ಗಣ್ಯರ ಸಮ್ಮುಖದಲ್ಲಿ ಜ್ಯೋತಿಯನ್ನು ಪೂರ್ಣ ಕುಂಭಗಳೊಂದಿಗೆ ಸ್ವಾಗತಿಸಲಾಯಿತು.
ಬೇಸಾಯ ಶಾಸ್ತ್ರ ವಿಜ್ಞಾನಿ ಡಾ.ವೆಂಕಟೇಗೌಡ ಮಾತನಾಡಿ, ನಮ್ಮ ದೇಶದಲ್ಲಿ ಹಸಿರು ಕ್ರಾಂತಿಯಾಗುವ ಸಮಯದಲ್ಲಿ ರೈತರಿಗೆ ಹೊಸತಳಿಗಳು ಮತ್ತು ತಂತ್ರಜ್ಞಾನಗಳ ಪರಿಚಯ ಮಾಡುವ ಉದ್ದೇಶದಿಂದ ಮೊದಲ ಬಾರಿಗೆ 1974ರಲ್ಲಿ ಪಾಂಡಿಚೆರಿಯಲ್ಲಿ ಕೃಷಿ ವಿಜ್ಞಾನ ಕೇಂದ್ರವು ಸ್ಥಾಪನೆಯಾಯಿತು. ಇಂದು ಭಾರತಾದ್ಯಂತ ಪ್ರತಿ ಜಿಲ್ಲೆಗಳಲ್ಲಿಯೂ ಒಟ್ಟು 731 ಕೃಷಿ ವಿಜ್ಞಾನ ಕೇಂದ್ರಗಳು ಸ್ಥಾಪನೆಯಾಗಿ ರೈತರಿಗೆ ನೆರವಾಗುತ್ತಿವೆ ಎಂದರು.ವಿಸ್ತರಣಾ ನಿರ್ದೇಶಕ ಡಾ. ವಿ.ಎಲ್.ಮಧುಪ್ರಸಾದ್, ಕೃಷಿ ವಿಜ್ಞಾನ ಕೇಂದ್ರದ ಮೂಲ ಉದ್ದೇಶದ ಬಗ್ಗೆ ತಿಳಿಸಿ, ಕೇಂದ್ರದಲ್ಲಿ ಒಟ್ಟು 7 ವಿಷಯಗಳ ವಿಜ್ಞಾನಿಗಳು ಕಾರ್ಯ ನಿರ್ವಹಿಸುತ್ತಿದ್ದು, ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳ ಸಹಯೋಗದಲ್ಲಿ ಕ್ಷೇತ್ರವಾರು ಸಮಸ್ಯಾಧಾರಿತ ತರಬೇತಿ ನೀಡುವುದು, ಸಮಸ್ಯಾತ್ಮಕ ತಾಕುಗಳಿಗೆ ಭೇಟಿ ನೀಡುವುದು ಮತ್ತು ಸೂಕ್ತ ಸಲಹೆಗಳನ್ನು ನೀಡುವುದರ ಮೂಲಕ ರೈತರಿಗೆ ನೆರವಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರಿನ ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಸಂಸ್ಥೆ ವಲಯ-೧೧ರ ಪ್ರಧಾನ ವಿಜ್ಞಾನಿ ಡಾ. ಎಂ.ಜೆ.ಚಂದ್ರೇಗೌಡ ಮಾತನಾಡಿ, 1974ರಿಂದ 1995ರವರೆಗೂ ಕೃಷಿ ವಿಜ್ಞಾನ ಕೇಂದ್ರಗಳು ಕೇವಲ ವೃತ್ತಿಪರ ತರಬೇತಿಗಳನ್ನು ನೀಡುವುದಕ್ಕಷ್ಟೇ ಸೀಮಿತವಾಗಿದ್ದು, ನಂತರ ಕೃಷಿಯಾಧಾರಿತ ಪ್ರತಿ ಸಮಸ್ಯೆಗಳಿಗೂ ಕೇಂದ್ರದಿಂದ ಸೂಕ್ತ ಸಲಹೆ ನೀಡಲಾಗುತ್ತಿದೆ. ಪ್ರಸ್ತುತ ಜಿಲ್ಲೆಗೆ ಒಂದರಂತೆ ಕಾರ್ಯನಿರ್ವಹಿಸುತ್ತಿರುವ ಕೃಷಿ ವಿಜ್ಞಾನ ಕೇಂದ್ರಗಳು ಮುಂದಿನ ದಿನಗಳಲ್ಲಿ ಪ್ರತಿ ತಾಲೂಕುಗಳಲ್ಲಿಯೂ ಆರಂಭವಾಗುವ ಸಾಧ್ಯತೆಯಿದೆ ಎಂದು ಹೇಳಿದರು.ಜಿಪಂ ಮಾಜಿ ಸದಸ್ಯ ಎಚ್.ಅಪ್ಪಯ್ಯಣ್ಣ ಮಾತನಾಡಿ, ಹಾಡೋನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರ ಈ ಭಾಗದ ಜಿಲ್ಲೆಯ ರೈತರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ ಹಾಗೂ ನೂತನ ತಂತ್ರಜ್ಞಾನ ಮತ್ತು ತಳಿಗಳ ಪರಿಚಯಗಳ ಬಗ್ಗೆ ತರಬೇತಿಗಳನ್ನು ನೀಡುತ್ತಿದ್ದು ಉಪಯುಕ್ತವಾಗಿದೆ ಎಂದು ತಿಳಿಸಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ. ವಿ.ಎಲ್. ಮಧುಪ್ರಸಾದ್, ಹಾಡೋನಹಳ್ಳಿ ಗ್ರಾಪಂ ಅಧ್ಯಕ್ಷ ನಾಗರಾಜ್, ಪ್ರಗತಿರ ರೈತ ಲಕ್ಷ್ಮಿನಾರಾಯಣಗೌಡ, ಮಣ್ಣು ವಿಜ್ಞಾನಿ ಡಾ. ಪಿ.ವೀರನಾಗಪ್ಪ ಮತ್ತಿತರರು ಮಾತನಾಡಿದರು. ಕೃಷಿ ವಿಶ್ವವಿದ್ಯಾನಿಲಯದ ಅಂತಿಮ ವರ್ಷದ ಬಿ.ಎಸ್ಸಿ. ವಿದ್ಯಾರ್ಥಿಗಳು, ಹಾಡೋನಹಳ್ಳಿಯ ಪ್ರಾಥಮಿಕ ಶಾಲೆಯ ಮಕ್ಕಳು, ಕೇಂದ್ರದ ಸಿಬ್ಬಂದಿ ಪಾಲ್ಗೊಂಡಿದ್ದರು.