ಭಾರತೀಯ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವಲ್ಲಿ ಶಾಸ್ತ್ರೀಯ ನೃತ್ಯಗಳ ಕೊಡುಗೆ ಅಪಾರ: ಉಮೇಶ್ ನಾಯಕ್‌

| Published : Apr 22 2024, 02:15 AM IST / Updated: Apr 22 2024, 02:16 AM IST

ಭಾರತೀಯ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವಲ್ಲಿ ಶಾಸ್ತ್ರೀಯ ನೃತ್ಯಗಳ ಕೊಡುಗೆ ಅಪಾರ: ಉಮೇಶ್ ನಾಯಕ್‌
Share this Article
  • FB
  • TW
  • Linkdin
  • Email

ಸಾರಾಂಶ

ನೃತ್ಯ ದಂಪತಿ ವಿದುಷಿ ಸ್ನೇಹಾ ನಾರಾಯಣ್ ಮತ್ತು ವಿದ್ವಾನ್ ಯೋಗೇಶ್ ಕುಮಾರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ದಿನಪೂರ್ತಿ ನೃತ್ಯ ಕಾರ್ಯಾಗಾರ ನಡೆಸಿಕೊಟ್ಟರು.

ಕನ್ನಡಪ್ರಭ ವಾರ್ತೆ ಪುತ್ತೂರು

ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಶಾಸ್ತ್ರೀಯ ನೃತ್ಯಗಳ ಕೊಡುಗೆ ಅಪಾರ ಎಂದು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕ ಅಧ್ಯಕ್ಷ ಉಮೇಶ್ ನಾಯಕ್ ಹೇಳಿದರು.

ಅವರು ಭಾನುವಾರ ಇಲ್ಲಿನ ಬರೆಕರೆ ವೆಂಕಟ್ರಮಣ ಸಭಾಭವನದಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯಕಲಾವಿದ ದಂಪತಿ ವಿದುಷಿ ಸ್ನೇಹಾ ನಾರಾಯಣ್ ಮತ್ತು ವಿದ್ವಾನ್ ಯೋಗೇಶ್ ಕುಮಾರ್ ಪ್ರಸ್ತುತಿಯ ಒಂದು ದಿನದ ನೃತ್ಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಶಾಸ್ತ್ರೀಯ ಪ್ರಾಕಾರಗಳಲ್ಲಿ ಭರತನಾಟ್ಯಕ್ಕೆ ತನ್ನದೇ ವಿಶಿಷ್ಟ ಸ್ಥಾನ ಇದೆ. ಅಂತಹ ಭರತನಾಟ್ಯವನ್ನು ಯುವ ಪೀಳಿಗೆ ಮುಂದುವರಿಸಬೇಕು. ಶಾಸ್ತ್ರೀಯ ನೃತ್ಯಗಳ ಉಳಿವಿಗೆ ಗುರುಗಳ ಶ್ರಮದಷ್ಟೇ ಶಿಷ್ಯರೂ ಕೂಡ ಅದನ್ನು ಅನುಸರಿಸುವುದರತ್ತ ಗಮನ ಹರಿಸಬೇಕು. ಸಿನಿಮಾ ಮತ್ತಿತರ ಮಾಧ್ಯಮಗಳಿಂದ ಸಿಗುವ ಕ್ಷಣಿಕ ಆನಂದದತ್ತ ವಾಲದೆ, ಕಲೆಯನ್ನು ಬೆಳೆಸಲು ಕಟಿಬದ್ಧರಾಗಬೇಕು. ಇಂತಹ ಕಾರ್ಯಾಗಾರ ನಡೆಯುತ್ತಲೇ ಇರಲಿ ಎಂದು ಹಾರೈಸಿದರು.

ವಿದುಷಿ ಸ್ನೇಹಾ ನಾರಾಯಣ್ ಮಾತನಾಡಿ, ಪ್ರತಿಯೊಬ್ಬರ ಕಲೆಯೂ ವಿಭಿನ್ನವಾಗಿದ್ದು, ವಿಶೇಷತೆಗಳಿಂದ ಕೂಡಿರುತ್ತದೆ. ಕಲೆ ಮನೋಧರ್ಮಕ್ಕೆ ಅನುಗುಣವಾಗಿ ವಿಕಸಿತಗೊಳ್ಳುತ್ತದೆ. ಕಲಾ ವೈವಿಧ್ಯತೆಗಳಿಗೆ ಪ್ರಾಧಾನ್ಯತೆ ನೀಡಬೇಕು ಎಂದರು.

ವಿದ್ವಾನ್ ಯೋಗೇಶ್ ಕುಮಾರ್ ಮಾತನಾಡಿ, ಕಲೆ ಗುರುವಿಗಾಗಿ ಮಾತ್ರವಲ್ಲ, ಮಕ್ಕಳಿಗಾಗಿ ಕಲೆ ಎಂದು ಭಾವಿಸುತ್ತಾರೆ. ಕಲೆಯನ್ನು ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕು. ಹೊಸ ಶೈಲಿಯ ಕಲೆಯನ್ನು ಕಲಿಯುವ ತುಡಿತ ವಿದ್ಯಾರ್ಥಿಗಳಲ್ಲಿ ಇರಬೇಕು ಎಂದರು.

ಅಕಾಡೆಮಿಯ ನೃತ್ಯಗುರು, ವಿದುಷಿ ಶಾಲಿನಿ ಆತ್ಮಭೂಷಣ್ ಪ್ರಾಸ್ತಾವಿಕವಾಗಿ ಮಾತನಾಡಿ, ನೃತ್ಯೋಪಾಸನಾ ಕಲಾ ಅಕಾಡೆಮಿ ಈಗ ೨೦ರ ಸಂಭ್ರಮದಲ್ಲಿದೆ. ಇಡೀ ವರ್ಷ ವಿಶಂತಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಅದರ ಅಂಗವಾಗಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.

ಬಳಿಕ ನೃತ್ಯ ದಂಪತಿ ವಿದುಷಿ ಸ್ನೇಹಾ ನಾರಾಯಣ್ ಮತ್ತು ವಿದ್ವಾನ್ ಯೋಗೇಶ್ ಕುಮಾರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ದಿನಪೂರ್ತಿ ನೃತ್ಯ ಕಾರ್ಯಾಗಾರ ನಡೆಸಿಕೊಟ್ಟರು.