ಸಾರಾಂಶ
ಪ್ರವಾಸೋದ್ಯಮ ಹಾಗೂ ದೇಶದ ಆರ್ಥಿಕ ಅಭಿವೃದ್ಧಿಗೆ ಹೋಟೆಲ್ ಉದ್ಯಮದ ಕೊಡುಗೆ ಅಪಾರ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪ್ರವಾಸೋದ್ಯಮ ಹಾಗೂ ದೇಶದ ಆರ್ಥಿಕ ಅಭಿವೃದ್ಧಿಗೆ ಹೋಟೆಲ್ ಉದ್ಯಮದ ಕೊಡುಗೆ ಅಪಾರ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.ಕರ್ನಾಟಕ ಹೋಟೆಲ್‌ಗಳ ಸಂಘ ಬೆಂಗಳೂರಿನ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಘದ 70ನೇ ವರ್ಷದ ಆಚರಣೆ ಹಾಗೂ ಆತಿಥ್ಯ ರತ್ನ, ಉದ್ಯಮರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, 30 ಲಕ್ಷ ಜನರಿಗೆ ಉದ್ಯೋಗ ನೀಡುತ್ತಿರುವ ಉದ್ಯಮವನ್ನು ಅವರು ಮುಕ್ತ ಕಂಠದಿಂದ ಶ್ಲಾಘಿಸಿದರು.
ಆದಿಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ನಮ್ಮ ಸಂಸ್ಕೃತಿ, ಆಚಾರ, ವಿಚಾರ, ಸ್ಥಳೀಯ ಆಹಾರ ಪದ್ಧತಿಯನ್ನು ವಿಶ್ವಕ್ಕೆ ಪರಿಚಯಿಸುವಲ್ಲಿ ಹೋಟೆಲ್ ಉದ್ಯಮ ವಹಿಸುತ್ತಿರುವ ಮಹತ್ತರ ಪಾತ್ರವನ್ನು ಹಾಗೂ ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಉದ್ಯಮದ ಮಹತ್ವವನ್ನು ವಿವರಿಸಿ ಜನಪ್ರತಿನಿಧಿಗಳು ಉದ್ಯಮದ ಆಹ್ವಾಲುಗಳಿಗೆ ಸ್ಪಂದಿಸಬೇಕೆಂದು ಹೇಳಿದರು.ಇದೇ ವೇಳೆ ಶಿವಮೊಗ್ಗದ ಮಥುರಾ ಗ್ರೂಪ್ಸ್ ನ ವ್ಯವಸ್ಥಾಪಕ ನಿರ್ದೇಶಕ ಎನ್.ಗೋಪಿನಾಥ್ ಅವರಿಗೆ ಆತಿಥ್ಯರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಜಿ.ಕೆ.ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ, ಭಾರತೀಯ ಹೋಟೆಲ್ ಒಕ್ಕೂಟದ ಅಧ್ಯಕ್ಷ ಶಾಮರಾಜು, ಶಿವಮೊಗ್ಗ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶಂಕರನಾರಾಯಣ ಹೊಳ್ಳ, ಡಾ.ಬಿ.ವಿ.ಲಕ್ಷ್ಮಿದೇವಿ ಗೋಪಿನಾಥ್ ಮತ್ತು ಕರ್ನಾಟಕ ಹೋಟೆಲ್‌ಗಳ ಸಂಘದ ಹಾಗೂ ಶಿವಮೊಗ್ಗ ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.