ಸ್ವಾತಂತ್ರ್ಯ ಪೂರ್ವದಲ್ಲಿ ವೃತ್ತಿ ರಂಗಭೂಮಿಯ ಕೊಡುಗೆ ಅಪಾರ- ರಂಗ ಕಲಾವಿದ ಜೇವರಗಿ ರಾಜಣ್ಣ

| Published : Jan 15 2024, 01:46 AM IST

ಸ್ವಾತಂತ್ರ್ಯ ಪೂರ್ವದಲ್ಲಿ ವೃತ್ತಿ ರಂಗಭೂಮಿಯ ಕೊಡುಗೆ ಅಪಾರ- ರಂಗ ಕಲಾವಿದ ಜೇವರಗಿ ರಾಜಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ರಚನೆ ಮಾಡಿದ ನಾಟಕಗಳು ಮಹಿಳೆಯರು ಸೇರಿದಂತೆ ಕುಟುಂಬಸ್ಥರು ಬಂದು ನೋಡುವಂತೆ ಪ್ರದರ್ಶನ ಮಾಡುತ್ತಿದ್ದು, ಗಂಗಿ ಮನಿಯಾಗ ಗೌರಿ ಹೊಲದಾಗ ನಾಟಕವು ಹೆಚ್ಚು ನಾಟಕ ಪ್ರಿಯರನ್ನು ರಂಗಭೂಮಿಯತ್ತ ಬರುವಂತೆ ಮಾಡಿದೆ.

ಕುಕನೂರು: ಸ್ವಾತಂತ್ರ್ಯ ಪೂರ್ವದಲ್ಲಿ ವೃತ್ತಿ ರಂಗಭೂಮಿಯ ಕೊಡುಗೆ ಅಪಾರವಾಗಿದ್ದು, ರಂಗಭೂಮಿ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ರಂಗಭೂಮಿ ನಾಟಕ ನಿರ್ದೇಶಕ ಹಾಗೂ ಕಲಾವಿದ ಜೇವರಗಿ ರಾಜಣ್ಣ ಹೇಳಿದರು.

ಪಟ್ಟಣದ ಬಿಎಸ್‌ಆರ್ ನಾಟಕ ಸಂಘದ ಆಯೋಜಿಸಿದ್ದ ರಂಗಭೂಮಿ ವೇದಿಕೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಭಾನುವಾರ ಮಾತನಾಡಿದ ಅವರು, ರಂಗಭೂಮಿಗೆ ೧೮೦ ವರ್ಷಗಳ ಇತಿಹಾಸವಿದೆ. ಸ್ವಾತಂತ್ರ್ಯ ಹೋರಾಟದ ಪೂರ್ವದಲ್ಲಿ ರಂಗಭೂಮಿ ಸ್ವಾತಂತ್ರ್ಯಕ್ಕಾಗಿ ಕಾರ್ಯ ಮಾಡಿದೆ. ಅಂದಿನ ದಿನಗಳಲ್ಲಿ ೧೬೦ಕ್ಕೂ ಹೆಚ್ಚು ರಂಗಭೂಮಿ ಕಂಪನಿಗಳಿದ್ದವು. ನಾಟಕ ಪ್ರದರ್ಶನಕ್ಕೆ ಹೆಚ್ಚು ಅನುಕೂಲವಿದ್ದವು. ಸಾರಿಗೆ ವೆಚ್ಚ ಹೆಚ್ಚಿನ ಉಳಿತಾಯ ಕೂಡ ಇತ್ತು. ಕಾಲ ನಂತರ ದಿನಗಳಲ್ಲಿ ರಂಗಭೂಮಿ ಅಳಿವಿನಂಚಿನತ್ತ ಸಾಗಿದೆ. ನಿರ್ದೇಶಕರ ಕೊರತೆಯಿಂದ ಗಟ್ಟಿ ನಾಟಕಗಳು ಪ್ರದರ್ಶನವಾಗುತ್ತಿಲ್ಲ. ಕೇವಲ ಅಶ್ಲೀಲ ನೃತ್ಯದ ಬೇಡಿಕೆ ಹೆಚ್ಚಾಗಿ ಮಹಿಳೆಯರು ರಂಗಭೂಮಿಯಿಂದ ದೂರ ಸರಿದರು. ಜತೆಗೆ ಟಿವಿ ಮಾಧ್ಯಮ ಬಂದ ಮೇಲೆ ರಂಗಭೂಮಿಗೆ ಹೆಚ್ಚು ಹೊಡೆತ ಬಿತ್ತು ಎಂದರು.

ಆದರೆ, ನಾನು ರಚನೆ ಮಾಡಿದ ನಾಟಕಗಳು ಮಹಿಳೆಯರು ಸೇರಿದಂತೆ ಕುಟುಂಬಸ್ಥರು ಬಂದು ನೋಡುವಂತೆ ಪ್ರದರ್ಶನ ಮಾಡುತ್ತಿದ್ದು, ಗಂಗಿ ಮನಿಯಾಗ ಗೌರಿ ಹೊಲದಾಗ ನಾಟಕವು ಹೆಚ್ಚು ನಾಟಕ ಪ್ರಿಯರನ್ನು ರಂಗಭೂಮಿಯತ್ತ ಬರುವಂತೆ ಮಾಡಿದೆ. ಶೇ.೭೦ ಮಹಿಳೆಯರು ನಾಟಕ ನೋಡಲು ಆಗಮಿಸುತ್ತಿದ್ದು, ಇದರಿಂದ ಕಲಾವಿದರಿಗೂ ಹೆಚ್ಚು ಪ್ರೋತ್ಸಾಹ ದೊರೆತಿದೆ ಎಂದರು.

೫೦ನೇ ನಾಟಕ ಪ್ರದರ್ಶನ ಕಾಣುತ್ತಿದೆ. ರಾಜ್ಯದಲ್ಲಿ ೨೪ ನಾಟಕ ಕಂಪನಿಗಳಿದ್ದು, ೧೨ ಕಂಪನಿಗಳು ನಿರಂತರ ನಾಟಕ ಪ್ರದರ್ಶನ ನೀಡುತ್ತಿವೆ. ಸರ್ಕಾರಗಳು ಕೂಡ ರಂಗಭೂಮಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು, ವಿವಿಧ ಸೌಲಭ್ಯಗಳನ್ನು ಕಲ್ಪಿಸುತ್ತವೆ ಎಂದರು.

ಬಿಎಸ್‌ಆರ್ ನಾಟಕ ಸಂಘದ ಕಂಪನಿ ಮಾಲೀಕರಾದ ಸುಜಾತ ಗುಬ್ಬಿ ಮಾತನಾಡಿ, ಕುಕನೂರು ಪಟ್ಟಣದಲ್ಲಿ ಇಂದಿಗೆ ಗಂಗಿ ಮನಿಯಾಗ, ಗೌರಿ ಹೊಲದಾಗ ನಾಟಕವು ೫೦ನೇ ಪ್ರದರ್ಶನ ಕಾಣುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬಂದು ನಾಟಕ ನೋಡುತ್ತಿದ್ದಾರೆ. ಇದರಿಂದ ಕಲಾವಿದರಿಗೂ ಹೆಚ್ಚು ಪ್ರೋತ್ಸಾಹ ದೊರೆಯುತ್ತಿದೆ. ಈ ಭಾಗದಲ್ಲಿ ಗುಣಮಟ್ಟದ ನಾಟಕಕ್ಕೆ ಕಲಾಭಿಮಾನಿಗಳು ಪ್ರೋತ್ಸಾಹ ನೀಡುತ್ತಾರೆ. ರಂಗ ಭೂಮಿಗೆ ಹೆಚ್ಚಿನ ಸಂಖ್ಯೆ ಜನರು ಪ್ರೋತ್ಸಾಹಿಸುತ್ತಿದ್ದಾರೆ ಎಂದರು.

ರಂಗಭೂಮಿ ಕಲಾ ಪೋಷಕ ವಿನಾಯಕ ಬೇನಳ್ಳಿ, ಕಲಾವಿದರಾದ ಮಾರುತಿ ಶೆಟ್ಟಿ, ಪ್ರಕಾಶ್ ಮೂಡಗೇರಿ, ಚಿಕ್ಕೇಶ್ ಕಲ್ಲೂರು, ಪ್ರಭಯ್ಯ ಹಿರಮೇಠ, ಸಿದ್ರಾಮ ತತ್ರಾಣಿ ಇದ್ದರು.