ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಗ್ರಾಮೀಣ ಪ್ರದೇಶದ ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ರೋಟರಿ ಸಂಸ್ಥೆಯು ವಿಶೇಷ ಸಾಧನೆ ಮಾಡಿದೆ ಎಂದು ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಸಿದ್ದರಬೆಟ್ಟದ ಬಾಳೆ ಹೊನ್ನೂರು ಖಾಸಾ ಶಾಖಾ ಮಠದಲ್ಲಿ ರೋಟರಿಯ ೨೦೨೪-೨೫ನೇ ಸಾಲಿನ ಅಧ್ಯಕ್ಷ, ನಿರ್ದೇಶಕ, ಪದಾಧಿಕಾರಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಈ ರೋಟರಿ ಸಂಸ್ಥೆಯಲ್ಲಿ ಹೆಚ್ಚಾಗಿ ದಾನಿಗಳ ಸಮೂಹವಿದೆ. ಇದರಲ್ಲಿರುವ ಪ್ರತಿಯೊಬ್ಬರು ಸಾಮಾಜಿಕ ಕಳಕಳಿಯ ಮನೋಭಾವ ಉಳ್ಳವರು. ಗ್ರಾಮೀಣ ಭಾಗದಲ್ಲಿನ ಜಾಗತಿಕವಾಗಿ ಸಮಸ್ಯೆಯನ್ನು ಬಗೆಹರಿಸುವ ಚಿಂತನೆಯನ್ನು ರೋಟರಿ ಸಂಸ್ಥೆ ಮಾಡುತ್ತಿದೆ ಎಂದು ಹೇಳಿದರು.ನಿಯೋಜಿತ ಜಿಲ್ಲಾ ರಾಜ್ಯಪಾಲ ರವಿಶಂಕರ್ ಡಕೋಜು ಮಾತನಾಡಿ, ಜೀವನಕ್ಕೆ ಯಾವುದೇ ಭರವಸೆ ಇಲ್ಲ, ಜೀವನದಲ್ಲಿ ಅವಕಾಶಗಳು ಮತ್ತು ಸಾಧ್ಯತೆಗಳು ಮಾತ್ರ ಇವೆ. ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯ ಕೆಲಸ ಮಾಡಬೇಕು ಎಂದು ಹೇಳಿದರು.ಚಳ್ಳಕೆರೆ ದೇನಾ ಭಗವತ್ ಗುರೂಜಿ ಮಾತನಾಡಿ, ಇತಿಹಾಸ ಪುಟದಲ್ಲಿ ಸುವರ್ಣಾಕ್ಷರಗಳಿಂದ ಬರೆಯುವಂತಹ ಶ್ರೀ ಕ್ಷೇತ್ರ ಸಿದ್ದರಬೆಟ್ಟ. ಏಕೆಂದರೆ ಇದು ಸಿದ್ಧಿ ಪುರುಷರ ಭೂ ಸ್ಪರ್ಶದಿಂದ ನಿರ್ಮಿತವಾದ ಪ್ರದೇಶ ಆದ್ದರಿಂದ ಈ ಕ್ಷೇತ್ರ ಸಂಜೀವಿನ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.ತಾಲೂಕಿನ ಸಿದ್ಧರಬೆಟ್ಟ ರೋಟರಿ ಸಂಸ್ಥೆಗೆ ಕೆ.ಎನ್ ರಘು ೯ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ ೧೭ ಮಂದಿ ಪದಾಧಿಕಾರಿಗಳು ಪದಗ್ರಹಣ ಮಾಡಿದ್ದಾರೆ. ರೋಟರಿ ಮುಖ್ಯಸ್ಥರು ಸದಸ್ಯತ್ವ ಚಿಹ್ನೆ ನೀಡಿ ವಿಶೇಷವಾಗಿ ಗೌರವಿಸಿ ಸನ್ಮಾನಿಸಿದ್ದಾರೆ. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾತಂತ್ರ ಹೋರಾಟಗಾರರಿಗೆ ಸನ್ಮಾನಿಸಿ, ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ, ಜೊತೆಗೆ ಸಸಿ ನೆಡುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು.
ಸಿದ್ಧರಬೆಟ್ಟ ರೋಟರಿ ಸಂಸ್ಥೆ ಅಧ್ಯಕ್ಷ ಕೆ.ಎನ್ ರಘು ಮಾತನಾಡಿ, ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಮುಖ್ಯಸ್ಥರ ಸಮ್ಮುಖದಲ್ಲಿ ಸಿದ್ದರಬೆಟ್ಟ ರೋಟರಿ ಸಂಸ್ಥೆಗೆ ಅಧ್ಯಕ್ಷನಾಗಿ ಪದಗ್ರಹಣ ಮಾಡಿದ್ದೇನೆ. ಮುಂದಿನ ಒಂದು ವರ್ಷದಲ್ಲಿ ಬಡ ರೋಗಿಗಳಿಗೆ ಅನುಕೂಲವಾಗಲೆಂದು ಉಚಿತ ಡಯಾಲಿಸಿಸ್ ಕೇಂದ್ರ ಸ್ಥಾಪನೆ, ತಾಲೂಕಿನ ಚೆಕ್ ಡ್ಯಾಂ ನಿರ್ಮಾಣ, ಕಾಮಧೇನು ಕಾರ್ಯಕ್ರಮ, ಬೋರೆವೆಲ್ ರಿಚಾರ್ಜ್ ಹೀಗೆ ಅನೇಕ ಕಾರ್ಯಕ್ರಮಗಳ ರೂಪುರೇಷೆಯನ್ನು ಸಿದ್ಧತೆ ಮಾಡಿಕೊಂಡಿದ್ದೇನೆ ಎಂದರು.ಜಿಲ್ಲಾ ಕಾರ್ಯದರ್ಶಿ ಬಿಳಿಗೆರೆ ಶಿವಕುಮಾರ್, ತುಮಕೂರು ವಲಯ ರಾಜ್ಯಪಾಳ ಪ್ರಕಾಶ್, ಸಹಾಯಕ ಜಿಲ್ಲಾ ರಾಜ್ಯಪಾಲ ಮಂಜುನಾಥ್, ಸಿದ್ದೇಶ್, ಕಾರ್ಯದರ್ಶಿ ಉದಯಪ್ರಸಾದ್, ಶಿವಕುಮಾರ್, ಎಂ.ಜಿ ಸುಧೀರ್, ಬದ್ರಿಪ್ರಸಾದ್, ಕೆ.ಎಸ್ ಶ್ರೀನಿವಾಸ್, ನಾಗೇಂದ್ರಕುಮಾರ್, ನವೀನ್‌ಕುಮಾರ್, ರಘು, ಬಾಲಾಜಿ, ಚಿನ್ನ ವೆಂಕಟಶೆಟ್ಟಿ, ಲಕ್ಷ್ಮೀಕಾಂತ, ಅಭಿಲಾಷ್, ನಟರಾಜು, ದರ್ಶನ್, ರೂಪಶ್ರೀ, ದೇವಿಕಾ, ಚಂದನ, ವೀರಶೆಟ್ಟಿ, ಧ್ಯಾನ್‌ಕುಮಾರ್ ಸೇರಿದಂತೆ ಇತರರು ಇದ್ದರು.