ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಪೊಲೀಸ್ ಅಧಿಕಾರಿಗಳ ಕೊಲೆ, ಆತ್ಮಹತ್ಯೆಯಂಥ ಕೃತ್ಯ ನಡೆಸುವ ಪ್ರಕರಣ ಬೆಳಕಿಗೆ ಬರುತ್ತಿವೆ. ಆದ್ದರಿಂದ, ಯುವ ಪೊಲೀಸ್ ಅಧಿಕಾರಿಗಳು ಮಾನಸಿಕ ಹಾಗೂ ದೈಹಿಕ ಸದೃಢತೆ ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಹಾಗೂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ ಕುಮಾರ್ ಅಭಿಪ್ರಾಯಪಟ್ಟರು.ನಗರದ ಹೊರವಲಯದ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಮದುಕರ ಶೆಟ್ಟಿ ಕವಾಯಿತು ಮೈದಾನದಲ್ಲಿ ನಡೆದ 12ನೇ ತಂಡದ ಪಿಎಸ್‍ಐ (ನಾಗರಿಕ) ಹಾಗೂ 9ನೇ ತಂಡದ ಆರ್.ಎಸ್.ಐ. ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಪರಿವೀಕ್ಷಣೆ ಮಾಡಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ಪೊಲೀಸ್ ಕೆಲಸ ಪ್ರೊಫೆಷನಲ್ ವೃತ್ತಿಯಲ್ಲ, ಅದೊಂದು ಪ್ಯಾಶನ್ ಎಂದು ತಿಳಿದು ಜನರ ಸೇವೆ ನೀಡಬೇಕು. ಮಕ್ಕಳು, ಮಹಿಳೆಯರು, ಹಿರಿಯರು ಹಾಗೂ ಬಡವರ ಪರ ಕಾಳಜಿ ಹೊಂದಿರಬೇಕು. ಬಡವರಿಗೆ ಅನ್ಯಾಯವಾದಾಗ, ನ್ಯಾಯ ಒದಗಿಸಲು ಯಾರು ಇರುವುದಿಲ್ಲ. ಅವರಿಗೆ ಪೊಲೀಸರೇ ತಂದೆ-ತಾಯಿ, ದೇವರಾಗಿರುತ್ತಾರೆ. ಹೀಗಾಗಿ ಬಡವರ ಪರ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಅದನ್ನು ಸದುಪಯೋಗ ಪಡೆಸಿಕೊಂಡು ಉತ್ತಮ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಪೊಲೀಸ್ ಹಾಗೂ ವೈದ್ಯರದ್ದು, ಪುಣ್ಯದ ಕೆಲಸವಾಗಿದೆ. ಜನರಿಗೆ ನಿಮ್ಮನ್ನು ಕಂಡರೆ ಭಯ ಹುಟ್ಟಬಾರದು, ನ್ಯಾಯ ಸಿಗುತ್ತದೆ ಎನ್ನುವ ಆಶಾಭಾವನೆ ಮೂಡಬೇಕು. ವೃತ್ತಿಯಲ್ಲಿ ಸಾಕಷ್ಟು ಅಸೆ, ಆಮಿಷ ಹಾಗೂ ಒತ್ತಡಗಳು ಬರುತ್ತವೆ ಅವೆಲ್ಲವನ್ನು ಭಯಪಡದೆ ತಡೆಯಲು ಗಟ್ಟಿ ಮನಸ್ಸು ಮಾಡಿದರೆ, ಯಾರಿಂದಲೂ ಅಳುಗಾಡಿಸಲು ಸಾಧ್ಯವಿಲ್ಲ ಎಂದು ತಿಳಿ ಹೇಳಿದರು.
ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಪೊಲೀಸ್ ಅಧೀಕ್ಷಕ ಹಾಗೂ ಪ್ರಾಂಶುಪಾಲ ಡೆಕ್ಕಾ ಕಿಶೋರ್ ಬಾಬು ಅವರು ವರ್ಷದ ವರದಿ ವಾಚನ ಮಾಡಿ, 2003ರಿಂದ ಇಲ್ಲಿಯವರೆಗೆ 7453 ಪ್ರಶಿಕ್ಷಣಾರ್ಥಿಗಳು ನಾಗನಹಳ್ಳಿ ತರಬೇತಿ ಕೇಂದ್ರದಿಂದ ನಿರ್ಗಮಿಸಿದ್ದಾರೆ. ಇಂದಿಲ್ಲಿ 16 ಪಿಎಸ್ಐ ಹಾಗೂ ಓರ್ವ ಆರ್.ಎಸ್.ಐ ಸೇರಿ ಒಟ್ಟು 17 ಜನ ಪ್ರಶಿಕ್ಷಣಾರ್ಥಿಗಳು ನಿರ್ಗಮಿಸುತ್ತಿದ್ದಾರೆ. ಅವರಿಗೆ ಸೈಬರ್ ಕ್ರೈಂ, ಅಪರಾಧ ಶಾಸ್ತ್ರ, ಭಾರತೀಯ ದಂಡ ಸಂಹಿತೆ, ವಿಪತ್ತು ನಿರ್ವಹಣೆ, ಮಾಹಿತಿ ತಂತ್ರಜ್ಞಾನ ಸೇರಿ ಹತ್ತು ಹಲವು ವೃತ್ತಪರ ತರಬೇತಿಯ ಜತೆಗೆ ಜ್ಞಾನಧಾರಿತ ತರಬೇತಿ ನೀಡಲಾಗಿದೆ. ಇಂದಿಲ್ಲಿ ನಿರ್ಗಮಿಸುತ್ತಿರುವ ಪೊಲೀಸರು ಜಾತಿ, ಧರ್ಮದ ಆಧಾರದ ಮೇಲೆ ಸಹದ್ಯೋಗಿಗಳೊಂದಿಗೆ ಭೇದಭಾವ ಮಾಡದೆ ಎಲ್ಲರೊಂದಿಗೆ ಸೌಹಾರ್ದತೆಯಿಂದ ಕೆಲಸ ನಿರ್ವಹಿಸುತ್ತೇವೆ ಎಂದು ಪ್ರತಿಜ್ಞಾನವಿಧಿ ಸ್ವೀಕರಿಸಿದ ಹಾಗೇ ನಡೆದುಕೊಳ್ಳಬೇಕು. ಕೇವಲ ಪ್ರತಿಜ್ಞಾವಿದಿಗೆ ಮಾತ್ರ ಸಿಮಿತವಾಗದೆ ವೃತ್ತಿ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು.ಅತ್ಯುತ್ತಮ ಹೊರಾಂಗಣ ಕ್ರೀಡಾಪಟು ಎಡಿಜಿಪಿ ಟ್ರೋಫಿ: ಗಣೇಶ್.ಕೆ ಅತ್ಯುತ್ತಮ ಒಳಾಂಗಣ ಕ್ರೀಡಾಪಟು, ಡಿಜಿ ಮತ್ತು ಐಜಿಪಿ ಟ್ರೋಫಿ- ಕಿಶೋರ್ ಕುಮಾರ್.ಆರ್, ಅತ್ಯುತ್ತಮ ಫೈರಿಂಗ್ (7.62 ಎಂಎಂ ಎಸ್ಎಲ್ಆರ್) ದಿ. ಮದುಕರ ಶೆಟ್ಟಿ, ಟ್ರೋಫಿ ಗಣೇಶ ಕೆ, ಅತ್ಯುತ್ತಮ ಮಹಿಳಾ ರಾಣಿ ಚೆನ್ನಮ್ಮ ಟ್ರೋಫಿ- ಸಾಧನಾ ಎಲ್., ಅತ್ಯುತ್ತಮ ಪೈರಿಂಗ್ (9 ಎಂಎಂ ಪಿಸ್ತುಲ್) ಎಸ್ಪಿ ಮತ್ತು ಪ್ರಿನ್ಸಿಪಾಲ್ ಪಿಟಿಸಿ ಟ್ರೋಫಿ- ಗಣೇಶ ಕೆ., ಅತ್ಯುತ್ತಮ ಆಲ್ ರೌಂಡರ್, ಮುಖ್ಯಮಂತ್ರಿ ಹಾಗೂ ಗೃಹಸಚಿವರ ಟ್ರೋಫಿ, ಕಿಶೋರ್ ಕುಮಾರ್ ಆರ್. ಪಡೆದುಕೊಂಡರು.
ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತ ಚೇತನ್ ಆರ್., ಅಕ್ಷಯ್ ಹಾಕೆ, ಹೆಚ್ಚುವರಿ ಎಸ್.ಪಿ ಶ್ರೀನಿಧಿ, ಕಾನೂನು ಸುವ್ಯವಸ್ಥೆ ಉಪ ಆಯುಕ್ತೆ ಕನ್ನಿಕಾ ಸಿಕ್ರಿವಾಲ್, ಅಪರಾಧ ಮತ್ತು ಸಾರಿಗೆ ವಿಭಾಗದ ಉಪ ಆಯುಕ್ತ ಪ್ರವೀಣ್ ನಾಯಕ್, ಗ್ರಾಮೀಣ ಸಹಾಯಕ ಆಯುಕ್ತೆ ಬಿಂದುಮಣಿ, ಲೋಕಾಯುಕ್ತ ಎಸ್.ಪಿ ಅಂಟಿನಿ ಜಾನ್ ಸೇರಿ ತರಬೇತಿ ಕೇಂದ್ರದ ಅಧಿಕಾರಿಗಳು, ಪ್ರಶಿಕ್ಷಣಾರ್ಥಿಗಳ ಪಾಲಕರು ಇದ್ದರು.