ಮಾಧ್ಯಮ ಜನರ ಆಶೋತ್ತರ ಈಡೇರಿಸುವ ವೇದಿಕೆ: ಹೊಸಬಯ್ಯ

| Published : Jul 04 2024, 01:00 AM IST

ಸಾರಾಂಶ

ಮಾಧ್ಯಮಗಳಿಗೆ ಅದರದ್ದೇ ಆದ ಜವಾಬ್ದಾರಿಗಳಿವೆ. ಮಾಧ್ಯಮವು ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಆಧಾರಸ್ತಂಭವಾಗಿದ್ದು, ಇದು ಜನರಿಗೆ ಹೊಸ ವಿಷಯಗಳನ್ನು, ಮಾಹಿತಿಯನ್ನು ತಿಳಿಸುವ ಮತ್ತು ಜನರ ಆಶೋತ್ತರಗಳನ್ನು ಈಡೇರಿಸುವ ಉತ್ತಮ ವೇದಿಕೆಯಾಗಿದೆ.

ಭಟ್ಕಳ: ಇಲ್ಲಿನ ಗುರು ಸುಧೀಂದ್ರ ಕಾಲೇಜಿನಲ್ಲಿ ಬಿಎ ಪತ್ರಿಕೋದ್ಯಮ ವಿಭಾಗದಿಂದ ಬುಧವಾರ ಏರ್ಪಡಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ವಸ್ತು ಪ್ರದರ್ಶನ ಗಮನ ಸೆಳೆಯಿತು.

ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಇಡಗುಂಜಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹೊಸಬಯ್ಯ ಪಟಗಾರ, ಮಾಧ್ಯಮಗಳಿಗೆ ಅದರದ್ದೇ ಆದ ಜವಾಬ್ದಾರಿಗಳಿವೆ. ಮಾಧ್ಯಮವು ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಆಧಾರಸ್ತಂಭವಾಗಿದ್ದು, ಇದು ಜನರಿಗೆ ಹೊಸ ವಿಷಯಗಳನ್ನು, ಮಾಹಿತಿಯನ್ನು ತಿಳಿಸುವ ಮತ್ತು ಜನರ ಆಶೋತ್ತರಗಳನ್ನು ಈಡೇರಿಸುವ ಉತ್ತಮ ವೇದಿಕೆಯಾಗಿದೆ. ಪತ್ರಕರ್ತರು ತಮಗೆ ತೋಚಿದ್ದನ್ನು ಗೀಚುವಂತಿಲ್ಲ. ಅವರಿಗೂ ಸಹ ಕೆಲವು ಕಟ್ಟುಪಾಡುಗಳಿವೆ. ಕಟ್ಟುಪಾಡುಗಳಿಗೊಳಪಟ್ಟು ವರದಿ ಮಾಡಬೇಕಾಗಿದೆ ಎಂದರು. ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ ಮಾತನಾಡಿ, ಪತ್ರಿಕೋದ್ಯಮದ ಸಮಗ್ರ ಚಿತ್ರಣವನ್ನು ಒಂದೇ ಸೂರಿನಡಿಯಲ್ಲಿ ಪ್ರದರ್ಶಿಸಿರುವುದು ಗಮನಾರ್ಹವಾದದು. ಪತ್ರಿಕೋದ್ಯಮದಲ್ಲಿ ಹಲವು ಅವಕಾಶಗಳಿದ್ದು, ವಿದ್ಯಾರ್ಥಿಗಳು ಅದನ್ನು ಬಳಸಿಕೊಳ್ಳಬಹುದು ಎಂದರು.

ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟೀ ರಮೇಶ್ ಖಾರ್ವಿ ಮಾತನಾಡಿ, ವಸ್ತು ಪ್ರದರ್ಶನದಲ್ಲಿ ಸಕ್ರೀಯವಾಗಿ ಪಾಲ್ಗೊಂಡ ವಿದ್ಯಾರ್ಥಿಗಳ ಪರಿಶ್ರಮವನ್ನು ಶ್ಲಾಘಿಸಿದರು.

ಪ್ರಾಂಶುಪಾಲ ಶ್ರೀನಾಥ್ ಪೈ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳಾದ ಕಪಿಲ್ ಭಟ್ ಹಾಗೂ ಲಿಧಿಯಾ ನಿರೂಪಿಸಿದರು. ಇಶಿತಾ ನಾಯ್ಕ್ ವಂದಿಸಿದರು. ಈ ಸಂಧರ್ಭದಲ್ಲಿ ವಿವಿಧ ವಿಭಾಗದ ಉಪ ಪ್ರಾಂಶುಪಾಲರು, ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ತಾಲೂಕಿನ ಪತ್ರಕರ್ತರು ಉಪಸ್ಥಿತರಿದ್ದರು.