ಸಾರಾಂಶ
ಯಲ್ಲಾಪುರ: ವಿದ್ಯೆಯಿಂದ ವಿನಯ ಸಂಪಾದನೆ ಮಾಡಿಕೊಳ್ಳಬೇಕು. ತನ್ಮೂಲಕ ಧನ ಸಂಪಾದನೆ ಲಭಿಸುತ್ತದೆ. ವಿದ್ಯಾರ್ಥಿಗಳು ಜೀವನದಲ್ಲಿ ಪರಿಪೂರ್ಣ ಅಧ್ಯಯನ ಮಾಡುವುದಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ತಿಳಿಸಿದರು.
ಮೇ ೨೯ರಂದು ವಿಶ್ವದರ್ಶನ ಶ್ರೀಮದ್ ಗಂಗಾಧರೇಂದ್ರ ಸಭಾಭವನದಲ್ಲಿ ಕೇಂದ್ರೀಯ ಶಾಲೆಯ ೨೦೨೪- ೨೫ರ ಶೈಕ್ಷಣಿಕ ವರ್ಷದ ತರಗತಿಗಳಿಗೆ ಚಾಲನೆ ನೀಡಿ ಮಾತನಾಡಿದರು.ಭೂಮಿಯ ತಾಪಮಾನ ಹೆಚ್ಚುತ್ತಿದೆ. ಇದಕ್ಕೆಲ್ಲಾ ನಾವೇ ಕಾರಣ. ಅದನ್ನು ನಿಯಂತ್ರಿಸದಿದ್ದರೆ ಭವಿಷ್ಯತ್ತಿನಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಪ್ಲಾಸ್ಟಿಕ್ ಬಳಕೆ ಅತಿ ಹೆಚ್ಚುತ್ತಿರುವುದು ಒಂದು ಕಾರಣ. ಪ್ರತಿಯೊಬ್ಬ ವಿದ್ಯಾರ್ಥಿಗಳಿಂದ ಹಿಡಿದು ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದ ಮಟ್ಟಿಗೆ ನಿಯಂತ್ರಣ ಮಾಡಬೇಕು ಎಂದ ಅವರು, ಈ ಪ್ರದೇಶ ಪಶ್ಚಿಮ ಘಟ್ಟದ ಅತ್ಯಮೂಲ್ಯ ಸಂಪತ್ತನ್ನು ಹೊಂದಿದೆ. ಇಂತಹ ಅಮೂಲ್ಯ ಅರಣ್ಯ ಸಂಪತ್ತು ಬೇರೆಲ್ಲೂ ಸಿಗದು. ಅಂತಹ ಸಂಪತ್ತನ್ನು ಉಳಿಸಿಕೊಂಡರೆ ಮಾತ್ರ ನಮ್ಮ ಮುಂದಿನ ಜನಾಂಗಕ್ಕೆ ಒಳಿತಾದೀತು ಎಂದರು.
ವಿಶ್ವದರ್ಶನ ಶಿಕ್ಷಣ ಸಮೂಹದ ಕಾರ್ಯದರ್ಶಿ ನರಸಿಂಹ ಕೋಣೆಮನೆ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವ ಅಗತ್ಯತೆಯ ಕುರಿತು ವಿವರಿಸಿದ ಅವರು, ಯಾರೆಲ್ಲ ಮೊಬೈಲ್ ಬಳಕೆಯಿಂದ ದೂರವಿರುತ್ತಾರೋ ಅಂತವರಿಗೆ ಬಹುಮಾನಗಳನ್ನು ನೀಡುವ ಘೋಷಣೆಯನ್ನು ಮಾಡಿದರು.ವಿಶ್ವದರ್ಶನ ಕೇಂದ್ರೀಯ ಶಾಲೆಯ ಪ್ರಾಂಶುಪಾಲೆ ಮಹಾದೇವಿ ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪುಷ್ಪಾ ಭಟ್ಟ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಶಾಲೆಯ ಸಿಇಒ ಆಗಿರುವ ಅಜಯ ಭಾರತೀಯ ಮತ್ತು ಪಿಯು ವಿಭಾಗದ ಪ್ರಾಂಶುಪಾಲ ಡಿ.ಕೆ. ಗಾಂವ್ಕರ್ ಉಪಸ್ಥಿತರಿದ್ದರು. ಕೇಂದ್ರೀಯ ಶಾಲೆಯ ಉಪ ಪ್ರಾಂಶುಪಾಲೆ ಆಸ್ಮಾ ಶೇಕ್ ನಿರ್ವಹಿಸಿದರು.