ಕೆಎಫ್‌ಡಿ ಪರಿಣಾಮಕಾರಿಯಾಗಿ ನಿಯಂತ್ರಿಸಿ: ಜಿಲ್ಲಾಧಿಕಾರಿ ಸೂಚನೆ
2 Min read
Author : KannadaprabhaNewsNetwork
Published : Oct 22 2023, 01:00 AM IST
Share this Article
FB
TW
Linkdin
Whatsapp
21ಎಚ್ಎಸ್ಎನ್21 : ನಾಲೆಗಳಿಗೆ ನೀರು ಬಿಡುವಂತೆ ಅಣೆಕಟ್ಟೆ ಎಂಜಿನಿಯರುಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಎಚ್.ಡಿ.ರೇವಣ್ಣ. | Kannada Prabha
Image Credit: KP
ಜಿಲ್ಲಾಧಿಕಾರಿ ಕಚೇರಿ ಸಭಾಂಗಣ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಜಾನುವಾರುಗಳ ಮೇಲಿನ ಉಣ್ಣೆ (ಟಿಕ್) ಸಂಖ್ಯೆ ನಿಯಂತ್ರಣ ಮತ್ತು ಪರೀಕ್ಷೆಗಳಿಂದ ಶೀಘ್ರ ರೋಗ ಪತ್ತೆ ಮಾಡುವ ಮೂಲಕ ಕೆಎಫ್‌ಡಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಎಫ್‌ಡಿ ಮತ್ತು ರೇಬಿಸ್ ಕುರಿತಾದ ಅಂತರ ಇಲಾಖೆಗಳ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು. ಮಲೆನಾಡಿನಲ್ಲಿ ಅತಿ ಹೆಚ್ಚು ಉಣ್ಣೆಗಳಿರುವ ಪ್ರದೇಶಗಳನ್ನು ಗುರುತಿಸಿ, ಜಾನುವಾರುಗಳಿಗೆ ಅಂತಹ ಪ್ರದೇಶದಲ್ಲಿ ಮೇಯದಂತೆ ಕ್ರಮ ವಹಿಸಬೇಕು. ಕಾಲ ಕಾಲಕ್ಕೆ ಜಾನುವಾರುಗಳಿಗೆ ಐವರ್‍ಮೆಕ್ಟಿನ್, ಡೊರಾಮೆಕ್ಟಿನ್ ಲಸಿಕೆ ನೀಡಬೇಕು. ಜಾನುವಾರುಗಳ ಬೆನ್ನಿನ ಮೇಲೆ ಪೊರಾನ್ ಸಿಂಪಡಿಸಬೇಕು. ರೈತರು ಜಾನುವಾರುಗಳು ಮತ್ತು ಕೊಟ್ಟಿಗೆಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು. ಉಣ್ಣೆಗಳ ಹೊಸ ಹಾಟ್‌ಸ್ಪಾಟ್‌ಗಳನ್ನು ಕಡಿಮೆ ಮಾಡಬೇಕು. ರೈತರಿಗೆ ಉಣ್ಣೆ ನಿಯಂತ್ರಣ ಮತ್ತು ಕೆಎಫ್‌ಡಿ ಕುರಿತು ಜಾಗೃತಿ ಮೂಡಿಸಬೇಕು. ಆರೋಗ್ಯ ಇಲಾಖೆಯವರು ಟಿಕ್ ಮಾದರಿ ಪರೀಕ್ಷೆ, ಟಿಕ್ ಸರ್ವೇಕ್ಷಣೆಯನ್ನು ಕೈಗೊಳ್ಳಬೇಕು. ಸಂಶಯಾಸ್ಪದ ಕೆಎಫ್‌ಡಿ ಪ್ರಕರಣಗಳನ್ನು ಶೀಘ್ರ ಪತ್ತೆಗಾಗಿ ಪರೀಕ್ಷೆಗೆ ಒಳಪಡಿಸಬೇಕು. ಆರೋಗ್ಯ ಶಿಕ್ಷಣವನ್ನು ಹೆಚ್ಚಿಸಬೇಕು ಎಂದು ಹೇಳಿದರು. ಕೆಎಫ್‌ಡಿ ನಿಯಂತ್ರಣದಲ್ಲಿ ಪಶುಪಾಲನಾ ಇಲಾಖೆ ಜವಾಬ್ದಾರಿ ಹೆಚ್ಚಿದೆ. ತರಬೇತಿ ಹೊಂದಿದ ಸಿಬ್ಬಂದಿಯಿಂದ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು. ಸಾಕು ಪ್ರಾಣಿಗಳಲ್ಲಿ ಉಣ್ಣೆ ನಿಯಂತ್ರಕಗಳನ್ನು ಬಳಸಬೇಕು ಎಂದರು. ಮಂಗ ಸತ್ತರೆ ಅರಣ್ಯ, ಪಶುಪಾಲನೆ, ಆರೋಗ್ಯ ಇಲಾಖೆಯವರು ಮತ್ತು ಸಂಬಂಧಿಸಿದ ಪಿಡಿಒ ಅವರು ಅದನ್ನು ವರದಿ ಮಾಡಬೇಕು, ಮರಣೋತ್ತರ ಪರೀಕ್ಷೆಗೂ ಒಳಪಡಿಸಿ, 60 ಮೀಟರ್ ಒಳಗೆ ರಾಸಾಯನಿಕ ಸಿಂಪಡಿಸಿ, ಇಲ್ಲಿ ಮಾನವರ, ಇತರೆ ಪ್ರಾಣಿಗಳ ಪ್ರವೇಶವನ್ನು ತಡೆಯಬೇಕು ಎಂದರು. ಗ್ರಾಮ ಸಭೆಗಳಲ್ಲಿ ಕೆಎಫ್‌ಡಿ ಕುರಿತು ಅರಿವು ಮೂಡಿಸಿ, ಗ್ರಾಮಗಳಲ್ಲಿ ಈ ಕುರಿತಾದ ಮಾಹಿತಿ ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳು ಹೆಚ್ಚಬೇಕು. ತಾಲೂಕು ವೈದ್ಯಾಧಿಕಾರಿಗಳು ಮತ್ತು ತಂಡ ಕ್ಷೇತ್ರ ಭೇಟಿ ನೀಡಬೇಕು. ಸ್ಥಳೀಯ ಸಭೆಗಳಲ್ಲಿ ಇದರ ಬಗ್ಗೆ ಮಾಹಿತಿ ನಿಡಬೇಕು. ಪಿಡಿಒಗಳು ಸಹ ಸಹಕರಿಸಬೇಕು. ಡಿಎಚ್‌ಒ 24 ಗಂಟೆಗೂ ಅಧಿಕವಾದ ಜ್ವರವನ್ನು ಪರೀಕ್ಷೆಗೆ ಒಳಪಡಿಸಬೇಕು ಹಾಗೂ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಒ.ಮಲ್ಲಪ್ಪ ಮಾತನಾಡಿ, ಜಿಲ್ಲೆಯಲ್ಲಿ 2021ರಲ್ಲಿ 14839 ನಾಯಿ ಕಡಿತದಲ್ಲಿ 3 ರೇಬಿಸ್ ಸಾವು ಸಂಭವಿಸಿದೆ. 2022 ರಲ್ಲಿ 19593 ನಾಯಿ ಕಡಿತ ಪ್ರಕರಣಗಳಲ್ಲಿ 1 ರೇಬಿಸ್‌ನಿಂದ ಸಾವು ಹಾಗೂ 2023 ರಲ್ಲಿ 16934 ನಾಯಿ, ಬೆಕ್ಕು ಕಡಿತ ಪ್ರಕರಣ ದಾಖಲಾಗಿದ್ದು, ಬೆಕ್ಕು ಕಡಿತದಿಂದ ಸೊರಬದಲ್ಲಿ 01 ಸಾವು ಸಂಭವಿಸಿದೆ. 2020ರಿಂದ 2023ರ ಆಗಸ್ಟ್ ಮಾಹೆವರೆಗೆ ಜಿಲ್ಲೆಯಲ್ಲಿ ರೇಬಿಸ್‌ನಿಂದ 8 ಸಾವು ಸಂಭವಿಸಿದೆ ಎಂದು ಮಾಹಿತಿ ನೀಡಿದರು. ಆಗ ಜಿಲ್ಲಾಧಿಕಾರಿ ಅವರು, ರೇಬಿಸ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಎಲ್ಲ ಆಸ್ಪತ್ರೆಗಳಲ್ಲಿ ರೇಬಿಸ್ ಲಸಿಕೆಗಳ ಲಭ್ಯತೆ ಇರಬೇಕು. ಹಾವು ಕಡಿತ ಮತ್ತು ರೇಬಿಸ್ ಲಸಿಕೆಗಳನ್ನು ಯಾವುದೇ ದಾಖಲೆಗಳಿಗೆ ಕಾಯದೇ ಶೀಘ್ರವಾಗಿ ನೀಡಬೇಕೆಂದು ಸೂಚಿಸಿದರು. ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಸುಜಾತ ಕೆಆರ್, ಡಿಎಚ್‌ಒ ಡಾ.ರಾಜೇಶ್ ಸುರಗಿಹಳ್ಳಿ, ಜಿಲ್ಲೆಯ ವಿವಿಧ ಕಾರ್ಯಕ್ರಮಗಳ ಅನುಷ್ಠಾನಾಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಜರಿದ್ದರು. - - - (- ಡಾ. ಆರ್.ಸೆಲ್ವಮಣಿ)
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.